ಬೆಂಗಳೂರು | ಯುವಕನ ಹತ್ಯೆ ಪ್ರಕರಣ: ಏಳು ಮಂದಿ ಸೆರೆ
Update: 2025-01-10 14:42 GMT
ಬೆಂಗಳೂರು : ಯುವಕ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸಾವಿಗೆ ಕಾರಣರಾಗಿದ್ದ 7 ಜನ ಆರೋಪಿಗಳನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಸಾಗರ್, ದಿಲೀಪ್, ಗಂಗಾಧರ್, ವಿಜಯ್, ಮಾದೇಶ್ ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಡಿ.31ರಂದು ರಾತ್ರಿ ಭುವನೇಶ್ವರಿ ನಗರದ ಗಾಂಧಿ ಬ್ರಿಡ್ಜ್ ಬಳಿ ಮದ್ಯ ಸೇವಿಸಿದ್ದ ಆರೋಪಿಗಳು ಕುಶಾಲ್ (24) ಎಂಬಾತನ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿ ಆತನ ಸಾವಿಗೆ ಕಾರಣರಾಗಿದ್ದರು ಎನ್ನುವ ಆರೋಪವಿದೆ. ಕುಶಾಲ್ ತಾಯಿ ಶಾಂತಮ್ಮ ನೀಡಿದ್ದ ದೂರಿನ ಅನ್ವಯ ಕೆ.ಪಿ ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರ ಸಹಿತ ಒಟ್ಟು ಏಳು ಆರೋಪಿಗಳನ್ನು ಬಂಧಿಸಿದ್ದಾರೆ.