ಪರಿಷತ್ ಸದಸ್ಯರನ್ನು ಶಾಸಕರು ಎಂದು ಉಲ್ಲೇಖಿಸಿ: ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ಸಭಾಪತಿ ಹೊರಟ್ಟಿ

Update: 2023-12-30 21:53 IST
ಪರಿಷತ್ ಸದಸ್ಯರನ್ನು ಶಾಸಕರು ಎಂದು  ಉಲ್ಲೇಖಿಸಿ: ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ಸಭಾಪತಿ ಹೊರಟ್ಟಿ
  • whatsapp icon

ಬೆಂಗಳೂರು: ವಿಧಾನ ಪರಿಷತ್ತಿನ ಸದಸ್ಯರು ಸಹ ಶಾಸಕರಾಗಿದ್ದು, ಸರಕಾರಿ ಆಮಂತ್ರಣ ಪತ್ರಿಕೆಗಳಲ್ಲಿ ಶಾಸಕರೆಂದು ಉಲ್ಲೇಖಿಸಿ ಶಿಷ್ಟಾಚಾರ ನಿಯಮವನ್ನು ಪಾಲಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಪತ್ರದ ಮೂಲಕ ಸೂಚಿಸಿದ್ದಾರೆ.

ರಾಜ್ಯದ ವಿಧಾನ ಮಂಡಲದಲ್ಲಿ ವಿಧಾನ ಪರಿಷತ್ತು ಹಾಗೂ ವಿಧಾನ ಸಭೆ ಎಂದು ಎರಡು ಪ್ರತ್ಯೇಕ ಶಾಸನ ಸಭೆಗಳಿವೆ. ಚಿಂತಕರ ಚಾವಡಿ, ಪ್ರಾಜ್ಞರ ಮನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಧಾನ ಮಂಡಲದ ಮೇಲ್ಮನೆಯಾಗಿರುವ ವಿಧಾನ ಪರಿಷತ್ತಿನಲ್ಲಿ 75 ಜನ ಸದಸ್ಯರಿದ್ದು, ಪದವೀಧರರು, ಶಿಕ್ಷಕರು, ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು, ವಿಧಾನ ಸಭೆಯಿಂದ ನಾಮ ನಿರ್ದೇಶಿತರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರು ಇಲ್ಲಿನ ಸದಸ್ಯರಾಗಿದ್ದಾರೆ ಎಂದು ಹೊರಟ್ಟಿ ಹೇಳಿದ್ದಾರೆ.

ಆದರೆ ವಿಷಾದದ ಸಂಗತಿ ಎಂದರೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಅಧಿಕಾರಿ ವರ್ಗ ತಾರತಮ್ಯದಿಂದ ಕಾಣುತ್ತಿರುವುದು ಗಮನಕ್ಕೆ ಬಂದಿದೆ. ವಿಧಾನ ಸಭೆಯ ಸದಸ್ಯರನ್ನು ಶಾಸಕರೆಂದು ಹಾಗೂ ವಿಧಾನ ಪರಿಷತ್ತಿನ ಸದಸ್ಯರನ್ನು ವಿಧಾನ ಪರಿಷತ್ತಿನ ಸದಸ್ಯರೆಂದೇ ಉಲ್ಲೇಖಿಸುತ್ತಿದ್ದು, ಸರಕಾರಿ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯೂ ಇದು ಮುಂದುವರಿದಿದೆ ಎಂದರು.

ಹಾಗಾಗಿ, ಈ ಕ್ಷಣದಿಂದಲೇ ಉಭಯ ಸದನಗಳ ಸದಸ್ಯರುಗಳನ್ನು ಶಾಸಕರು ಎಂದು ಉಲ್ಲೇಖಿಸುವ ಜೊತೆಗೆ ಸರಕಾರದ ಆಮಂತ್ರಣ ಪತ್ರಿಕೆಗಳಲ್ಲಿ ಇದೇ ರೀತಿ ಉಲ್ಲೇಖಿಸಿ ಶಿಷ್ಟಾಚಾರ ನಿಯಮವನ್ನು ಪಾಲಿಸುವಂತೆ ಅವರು ಪತ್ರದಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News