ರೇಣುಕಾಸ್ವಾಮಿ ಹತ್ಯೆ ಪ್ರಕರಣ | ನಟ ದರ್ಶನ್ ವೈದ್ಯಕೀಯ ವರದಿ ಹೈಕೋರ್ಟ್‌ಗೆ ಸಲ್ಲಿಕೆ
Update: 2024-11-07 21:48 IST
ನಟ ದರ್ಶನ್
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಆರೋಗ್ಯದ ವೈದ್ಯಕೀಯ ವರದಿಯನ್ನು ವಕೀಲರು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.
ನಟ ದರ್ಶನ್‌ಗೆ 6 ವಾರಗಳ ಕಾಲ ವೈದ್ಯಕೀಯ ಜಾಮೀನು ನೀಡಿದ್ದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠವು ಯಾವಾಗ ಶಸ್ತ್ರಚಿಕಿತ್ಸೆ, ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ತದನಂತರ ಚಿಕಿತ್ಸೆ ಏನಾದರೂ ಇರಲಿದೆಯೇ ಎಂಬ ವಿವರಗಳನ್ನು ಜೈಲಿನಿಂದ ಬಿಡುಗಡೆಯಾದ ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂಬ ಷರತ್ತು ವಿಧಿಸಿ ಜಾಮೀನು ನೀಡಿ ಆದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಆರು ವಾರಗಳ ಷರತ್ತುಬದ್ಧ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ದರ್ಶನ್, ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.