ಮೀಸಲಾತಿಯೇ ಶೋಷಿತರ ಏಳಿಗೆಗೆ ಅಸ್ತ್ರ: ಗೃಹ ಸಚಿವ ಡಾ.ಜಿ.ಪರಮೇಶ್ವರ್

Update: 2023-12-31 15:07 GMT

ಬೆಂಗಳೂರು: ಮೀಸಲಾತಿಯೊಂದೇ ಶೋಷಿತರ, ಹಿಂದುಳಿದ ವರ್ಗದವರ ಏಳಿಗೆಗೆ ಸಹಾಯಕ ಅಸ್ತ್ರ. ಈ ಮೂಲಕ ನಾವು ನಮ್ಮ ನೆಲೆಯನ್ನು ಕಂಡುಕೊಳ್ಳಬೇಕಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಸದಾಶಿವನಗರದ ನಾಗಸೇನ ವಿದ್ಯಾಲಯ ಮೈದಾನದಲ್ಲಿ ಸಮತಾ ಸೈನಿಕ ದಳ, ಭಾರತೀಯ ಬೌದ್ಧ ಮಹಾಸಭಾದ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ `ಭೀಮಾ ಕೋರೇಗಾಂವ್ ವಿಜಯೋತ್ಸವ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ನಾವು ಅದರ ಬಗ್ಗೆ ಚಿಂತಿಸಿ ನಮ್ಮ ನೆಲೆ ಕಂಡುಕೊಳ್ಳಬೇಕಾಗಿದೆ ಎಂದರು.

ಅಂಬೇಡ್ಕರ್ ರಚಿತ ಸಂವಿಧಾನ ಬದಲಾಯಿಸಬೇಕು. ಮೀಸಲಾತಿ ತೆಗೆಯಬೇಕೆಂಬ ಒಡಕು ಮಾತುಗಳು ಸಾಕಷ್ಟು ಹರಿದಾಡುತ್ತಿವೆ. ಆ ಮಾತುಗಳನ್ನು ಬದಿಗಿಟ್ಟು, ಹಿಂದುಳಿದ ವರ್ಗದವರಾದ ನಾವು ನಮ್ಮ ಏಳಿಗೆ ಬಗ್ಗೆ ಚಿಂತಿಸುವುದು ಉತ್ತಮ ಎಂದು ಅವರು ಹೇಳಿದರು.

ಹಿಂದುಳಿದ ವರ್ಗದವರಿಗೆ ಮೀಸಲಾತಿ ಇಲ್ಲದೇ ಸಾಮಾನ್ಯರಂತೆ ಚುನಾವಣೆಯಲ್ಲಿ ಗೆಲ್ಲಲು ಕಷ್ಟವಾಗುವ ಪರಿಸ್ಥಿತಿ ಇನ್ನೂ ಇದೆ. ಬ್ರಿಟಿಷರು ಮಾಡಿದಂತಹ ಮಹಾ ಕಟ್ಟುಪಾಡುಗಳು ಇಂದಿಗೂ ನಮ್ಮ ಸೇನೆಯಲ್ಲಿದೆ. ನಮಗೆ ಕೀಳರಿಮೆಯಿದ್ದರೆ ಜೀವನದಲ್ಲಿ ಹಿಂದಕ್ಕೆ ಹೋಗುತ್ತೇವೆ. ಹೀಗಾಗಿ, ಕೀಳರಿಮೆಯಿಂದ ಹೊರ ಬಂದು, ಶೋಷಿತ ಸಮುದಾಯಗಳು ಸಂಘರ್ಷದಿಂದ ಬದುಕಬೇಕಾಗಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ವಿದೇಶದಲ್ಲಿ ಕೆಲಸದ ಆಧಾರದ ಮೇಲೆ ವ್ಯಕ್ತಿಗಳನ್ನು ಅಳೆಯುತ್ತಾರೆ. ಭಾರತದಲ್ಲಿ ಜಾತಿ ಹೆಸರಿನಿಂದ ಅಳೆಯುವಂತಾಗಿದೆ. ಇದರಿಂದ ಹೊರ ಬರಬೇಕೆಂಬ ಉದ್ದೇಶದಿಂದ ಅಂಬೇಡ್ಕರ್ ಸಂವಿಧಾನ ಬರೆಯುವಾಗ ಸಮಾನತೆ ಪ್ರತಿಪಾದಿಸಿದ್ದಾರೆ. ಅಂಬೇಡ್ಕರ್ ಮಾತುಗಳನ್ನು ಅರ್ಥ ಮಾಡಿಕೊಂಡು ನಮ್ಮ ಜೀವನದಲ್ಲಿ ಅನುಷ್ಠಾನ ಮಾಡಲು ʼಭೀಮಾ ಕೋರೇಗಾಂವ್ʼ ವಿಜಯೋತ್ಸವ ನೆನಪು ಮಾಡಿಕೊಡುತ್ತದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

ಕಾರ್ಯಕ್ರಮದಲ್ಲಿ ಸಮತಾ ಸೈನಿಕ ದಳದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ನಿವೃತ್ತ ಪೊಲೀಸ್ ಅಧಿಕಾರಿ ಸಿದ್ದರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News