ಮುಂದಿನ ಜನಗಣತಿ ದಕ್ಷಿಣ ಭಾರತದ ರಾಜ್ಯಗಳ ಹಕ್ಕನ್ನು ಕಸಿಯಲಿದೆ : ಡಾ.ಪುರುಷೋತ್ತಮ ಬಿಳಿಮಲೆ

Update: 2024-10-05 13:16 GMT

ರಾಯಚೂರು : ದೇಶದಲ್ಲಿ ಸದ್ಯದಲ್ಲೆ ಆರಂಭವಾಗಲಿರುವ ಜನಗಣತಿಯು ದಕ್ಷಿಣ ಭಾರತದ ರಾಜ್ಯಗಳ ಹಕ್ಕನ್ನು ಕಸಿಯಲಿದೆ. ಅಲ್ಲದೇ, ಒಕ್ಕೂಟ ವ್ಯವಸ್ಥೆಯ ಮೇಲೂ ಗಂಭೀರ ಪರಿಣಾಮವನ್ನು ಬೀರಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದರು.

ಶನಿವಾರ ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಮೇಳ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಸಂಭ್ರಮ 50ರ ಅಂಗವಾಗಿ ಆಯೋಜಿಸಿದ್ದ ‘ಗೋಕಾಕ್ ಚಳವಳಿ: ಹಿನ್ನೋಟ-ಮುನ್ನೋಟ’ ಬೃಹತ್ ಸಮಾವೇಶದಲ್ಲಿ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡೆಯಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಭಾರತದ ರಾಜ್ಯಗಳು ಸಿಂಹಪಾಲು ಪಡೆಯಲಿವೆ. ಅದೇ ಮತ್ತೊಂದೆಡೆ ದಕ್ಷಿಣ ಭಾರತದ ರಾಜ್ಯಗಳ ಒಟ್ಟಾರೆ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. ಆಯಾ ರಾಜ್ಯಗಳಲ್ಲಿ ಭಾಷೆ ಗಟ್ಟಿಯಾದಾಗ ಮಾತ್ರ ಪ್ರಾದೇಶಿಕ ಭಾಷೆಗಳ ಹಕ್ಕನ್ನು ಸಾಧಿಸಲು ಸಾಧ್ಯ. ದಕ್ಷಿಣ ಭಾರತೀಯ ರಾಜ್ಯಗಳ ಸ್ಥಾನಮಾನಗಳಿಗೆ ಒಕ್ಕೂಟ ವ್ಯವಸ್ಥೆಯಲ್ಲಿ ಗೌರವ ದೊರೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಏಕೀಕರಣದ ನಂತರ ನಡೆದ ಅತೀ ದೊಡ್ಡ ಭಾಷಾ ಚಳವಳಿಯಾದ ಗೋಕಾಕ್ ಚಳವಳಿ ನಮ್ಮೆಲ್ಲ ಭಾಷಾ ಹೋರಾಟಗಳಿಗೆ ಪ್ರೇರಣೆ ಆಗಿದೆ. ಗೋಕಾಕ್ ಚಳವಳಿಯ ಫಲಿತಾಂಶಗಳು ಏನೇ ಇರಲಿ ಅದು ಕರ್ನಾಟಕದ ಏಕೀಕರಣವಾದ ಮೇಲೆ ನಾಡಿನ ಜನರನ್ನು ಒಗ್ಗೂಡಿಸಿ ಚೈತನ್ಯ ಮೂಡಿಸಿದ ಏಕೈಕ ಬೃಹತ್ ಚಳವಳಿಯಾಗಿದೆ ಎಂದು ಅವರು ಹೇಳಿದರು.

ಬೀದರ್‌ನಿಂದ ಬೆಂಗಳೂರಿನವರೆಗೆ ವ್ಯಾಪಿಸಿದ ಗೋಕಾಕ್ ಚಳವಳಿಗೆ ಕರ್ನಾಟಕದ ಜನರು ಸ್ಪಂದಿಸಿದ ರೀತಿ ಇಂದಿಗೂ ಕಾಣದಂತಾಗಿದ್ದು, ಅದರ ವ್ಯಾಪಕತೆಯನ್ನು ನಾವು ಅರ್ಥೈಸಿಕೊಳ್ಳುವ ಮೂಲಕ ಇಂದಿನ ಭಾಷಾ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿಕೊಳ್ಳಬಹುದಾಗಿದೆ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.

ಕ್ರಿ.ಶ.1167ರಲ್ಲಿ ಸೇವುಣರು ಮತ್ತು ಹೊಯ್ಸಳರು ಪರಸ್ಪರ ಹೊಯ್ದಾಡಿಕೊಂಡ ಮೇಲೆ ಕನ್ನಡನಾಡು ಮೊದಲ ಬಾರಿಗೆ ತುಂಡಾಯಿತು. 20ನೇ ಶತಮಾನದಲ್ಲಿ ಅದು 27 ತುಂಡುಗಳಾಗಿ ಒಡೆಯಿತು. ಏಕೀಕರಣದ ಕಾರಣ ಕರ್ನಾಟಕವನ್ನು ಒಂದು ರಾಜ್ಯವನ್ನಾಗಿ ಒಗ್ಗೂಡಿಸಿದ್ದು, ಕನ್ನಡ ಭಾಷೆಯ ಉಳಿವಿನ ಸವಾಲು ನಮ್ಮ ರಾಜ್ಯದಲ್ಲಿ ಬೇರೆಲ್ಲ ರಾಜ್ಯಗಳಿಗಿಂತ ಹೆಚ್ಚಿದೆ ಎಂದ ಅವರು, ಕನ್ನಡದ ಬೆಳವಣಿಗೆಯ ಗತಿ ಕೇವಲ ಶೇ.3.70 ರಷ್ಟಿದ್ದು, ಬೇರೆಲ್ಲ ಭಾಷೆಗಳಿಗಿಂತ ಕನ್ನಡದ ಬೆಳವಣಿಗೆ ದುಸ್ಥಿತಿಯಲ್ಲಿದೆ. ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೇ ಇದು ಆತಂಕಕಾರಿ ಎಂದರು.

ಗೋಕಾಕ್ ಚಳವಳಿಯ ಹಿನ್ನೋಟ-ಮುನ್ನೋಟ ಎಂಬ ಅತ್ಯುತ್ತಮ ಪರಿಕಲ್ಪನೆಯ ವಿಚಾರ ಗೋಷ್ಠಿಗಳನ್ನು ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಯೋಜಿಸಿದ್ದು, ಇತಿಹಾಸದ ಹಿನ್ನಲೆಯಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕಾರ್ಯಕ್ರಮದ ಫಲಶೃತಿಯನ್ನು ರಾಜ್ಯ ಸರಕಾರಕ್ಕೆ ವರದಿಯ ಮೂಲಕ ಸಲ್ಲಿಸಿ ನೀತಿ ನಿರೂಪಣೆಗೆ ಒತ್ತಾಯಿಸಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡ ಶಿವಶರಣಪ್ಪ ವಾಲಿ, ನಿಂಗಣ್ಣ ಕುಂಟಿ, ಸಾ.ರಾ.ಗೋವಿಂದು, ಕಲೀಂ ಬಾಷ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ರಾಯಚೂರಿನ ಕರ್ನಾಟಕ ಸಂಘ (ರಿ.)ದ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಗೋಕಾಕ್ ಚಳವಳಿಯ ಸಾಕ್ಷ್ಯ ಚಿತ್ರವನ್ನು ಸಿದ್ಧಪಡಿಸಿದ್ದ ಮನೋಹರ್ ರವರನ್ನು ಗೌರವಿಸಿ ಅಭಿನಂದಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News