ಶಿವಮೊಗ್ಗ | ಪ್ರಚೋದನಾಕಾರಿ ಹೇಳಿಕೆ ಆರೋಪ : ಕೆ.ಎಸ್.ಈಶ್ವರಪ್ಪ ವಿರುದ್ಧ ಎಫ್‌ಐಆರ್
ಶಿವಮೊಗ್ಗ : ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಯನಗರ ಠಾಣೆ ಇನ್ಸ್‌ಪೆಕ್ಟರ್ ಎಚ್.ಎಂ.ಸಿದ್ದೇಗೌಡ ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಕೋಮುಭಾವನೆ ಕೆರಳಿಸುವಂತಹ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈಶ್ವರಪ್ಪ ಅವರು, ಇಸ್ಲಾಮೀಕರಣಕ್ಕೆ ಕಾಂಗ್ರೆಸ್ ಸರಕಾರ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇಕಡಾ 4ರಷ್ಟು ಮಿಸಲಾತಿ ಘೋಷಣೆ ಮಾಡಲು ಹೊರಟಿದ್ದಾರೆ. ಇವರೇನು ಹಿಂದುಸ್ಥಾನವನ್ನು ಪಾಕಿಸ್ಥಾನ ಮಾಡಲು ಹೊರಟಿದ್ದಾರಾ? ಇದು ಹೀಗೆ ಮುಂದುವರೆದರೆ ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳುವ ಕಾಲ ದೂರವಿಲ್ಲ. ಕಾಂಗ್ರೆಸ್ಸಿಗರನ್ನು ಹುಡುಕಿ ಹೊಡೆದು ಕೊಲ್ಲುವಂತಹ ದಿನಗಳು ಬಂದರೂ ಆಶ್ಚರ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.