ಮಾನವ ಹಕ್ಕುಗಳ ಉಲ್ಲಂಘನೆ ಆರೋಪ : ‘ಬಿಗ್‌ಬಾಸ್’ ರಿಯಾಲಿಟಿ ಶೋ ವಿರುದ್ಧ ಪ್ರಕರಣ ದಾಖಲು

Update: 2024-10-05 14:28 GMT

ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪದಡಿ ರಾಜ್ಯ ಮಾನವ ಹಕ್ಕುಗಳ ಆಯೋಗ ಪ್ರಕರಣ ದಾಖಲಿಸಿಕೊಂಡಿರುವುದಾಗಿ ವರದಿಯಾಗಿದೆ.

ಈ ಸಂಬಂಧ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳನ್ನು ನರಕವಾಸದ ಹೆಸರಿನಲ್ಲಿ ಕೂಡಿಟ್ಟು ಸರಿಯಾದ ಆಹಾರ ಕೊಡದೆ ಹಿಂಸಿಸಲಾಗುತ್ತಿದೆ. ಈ ಮೂಲಕ ಶೋನಲ್ಲಿ ಮಾನವಹಕ್ಕುಗಳ ಹರಣವಾಗುತ್ತಿದೆ. ತಕ್ಷಣ ಕಾರ್ಯಕ್ರಮ ನಿಲ್ಲಿಸಿ ಸಂಬಂಧಪಟ್ಟ ಇಲಾಖೆಯಿಂದ ತನಿಖೆ ನಡೆಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತೆ ಎಂ.ನಾಗಮಣಿ ಎಂಬುವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಮಾನವ ಹಕ್ಕು ಆಯೋಗ ಪ್ರಕರಣ ದಾಖಲಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಮನರಂಜನಾ ಹಾಗೂ ಇತರೆ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ ವ್ಯಕ್ತಿಗಳನ್ನು ಒಂದು ಮನೆಯಲ್ಲಿ ಕೂಡಿ ಹಾಕಿ ನಡೆಸುವ ಶೋ ಇದಾಗಿದ್ದು, ಸ್ಪರ್ಧಿಗಳಿಗೆ ಹಲವು ರೀತಿಯ ಮಾನಸಿಕ, ದೈಹಿಕ ಸವಾಲುಗಳನ್ನು ನೀಡಲಾಗುತ್ತದೆ. ತಮ್ಮನ್ನು ತಾವು ಉಳಿಸಿಕೊಳ್ಳಲು ಇನ್ನೊಬ್ಬರ ಮೇಲೆ ಹಲವು ರೀತಿಯಲ್ಲಿ ಆಕ್ರಮಣ ಮಾಡುವ ಅನಿವಾರ್ಯತೆ ಸೃಷ್ಟಿಸಲಾಗುತ್ತದೆ. ಚಿತ್ರಹಿಂಸೆ, ಕ್ರೌರ್ಯದ ದೃಶ್ಯಗಳನ್ನು ವಾಹಿನಿಯ ಮೂಲಕ ಪ್ರಸಾರ ಮಾಡುವುದು ಅಪರಾಧ. ಹಾಗಾಗಿ ಕಾರ್ಯಕ್ರಮ ಸ್ಥಗಿತಗೊಳಿಸಬೇಕು ಎಂದು ಎಂ.ನಾಗಮಣಿ ದೂರಿನಲ್ಲಿ ತಿಳಿಸಿದ್ದಾರೆ.

ಬಹುಮಾನ ಮತ್ತು ಹಣದ ಆಮಿಷ ಒಡ್ಡಿ ಸ್ಪರ್ಧಿಗಳನ್ನು ಬಿಡದಿ ಸಮೀಪದ ನಿರ್ಜನ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಮನೆಯೊಂದರಲ್ಲಿ ಕೂಡಿಹಾಕಲಾಗಿದೆ. ಟಾಸ್ಕ್‌ಗಳ ಹೆಸರಲ್ಲಿ ಅವರಿಗೆ ದೈಹಿಕ, ಮಾನಸಿಕ ಹಿಂಸೆಯನ್ನು ನೀಡಲಾಗುತ್ತಿದೆ. ಸ್ಪರ್ಧಿಗಳಿಗೆ ಸರಿಯಾದ ಪೌಷ್ಠಿಕ ಆಹಾರವನ್ನೂ ನೀಡದೆ, ಅವರ ದೇಹಬಾಧೆ ತೀರಿಸಿಕೊಳ್ಳಲೂ ಇತರರ ಅನುಮತಿ ಪಡೆಯುವಂತಹ ಪರಿಸ್ಥಿತಿ ನಿರ್ಮಿಸಿರುವುದು ಅತ್ಯಂತ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ. ಈ ಶೋಷಣೆಗೆ ಒಂದು ವೇಳೆ ಆಮಿಷಕ್ಕೆ ಒಳಗಾಗಿ ಸ್ಪರ್ಧಿಗಳು ಒಪ್ಪಿಗೆ ನೀಡಿದ್ದರೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News