ಪಿಎಸ್ಸೈ ಪರಶುರಾಮ್‍ಗೆ ನ್ಯಾಯ ಕೊಡಿಸಲು ಬಿಜೆಪಿ ಹೋರಾಟ: ಆರ್. ಅಶೋಕ್

Update: 2024-08-04 16:30 GMT

ಕೊಪ್ಪಳ: ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದಿಂದ ನೊಂದು ಮೃತರಾದ ಪಿಎಸ್ಸೈ ಪರಶುರಾಮ್ ನಿವಾಸಕ್ಕೆ ಭೇಟಿ ನೀಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ, ಸರಕಾರದ ಈ ಅನ್ಯಾಯದ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎಂದು ಪ್ರಕಟಿಸಿದ್ದಾರೆ.

ರವಿವಾರ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಪರಶುರಾಮ್ ಕುಟುಂಬ ಸದಸ್ಯರು ಹಾಗೂ ಸ್ಥಳೀಯರೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಮೃತ ಪರಶುರಾಮ್ ಪತ್ನಿ 9 ತಿಂಗಳ ಗರ್ಭಿಣಿಯಾಗಿದ್ದರೂ ಪೊಲೀಸರು ಎಫ್‍ಐಆರ್ ದಾಖಲಿಸದೆ 12-13ಗಂಟೆಗಳ ಕಾಲ ಕಾಯಿಸಿದ್ದಾರೆ. ದಲಿತ ಕುಟುಂಬದಿಂದ ಬಂದ ಹೆಣ್ಣುಮಗಳನ್ನು ಈ ಸರಕಾರ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ದೂರಿದರು.

ಶಾಸಕ ಚನ್ನಾರೆಡ್ಡಿ ಪಾಟೀಲ್ ದಲಿತರು ಇಲ್ಲಿರಬಾರದು ಎಂದು ಹೇಳಿದ್ದಾರೆಂದು ತಿಳಿದುಬಂದಿದೆ. ದಲಿತರು ತಮ್ಮ ಪ್ರದೇಶದಲ್ಲಿ ಇರಬಾರದು ಎನ್ನುವುದು ದೊಡ್ಡ ಅಪರಾಧ ಹಾಗೂ ಸಂವಿಧಾನ ಮತ್ತು ಡಾ.ಅಂಬೇಡ್ಕರ್ ಗೆ ಮಾಡಿದ ಅಪಮಾನ. ಎಲ್ಲ ಜನಾಂಗಗಳು ಸಂವಿಧಾನ ಅಡಿಯಲ್ಲಿದೆ. ಇಂತಹ ನೀಚತನವನ್ನು ಯಾರೂ ಸಹಿಸುವುದಿಲ್ಲ ಎಂದು ಹೇಳಿದರು.

ಹಣ ಕೊಟ್ಟಿಲ್ಲವೆಂದರೆ ಪ್ರತಿ ಇಲಾಖೆಯಲ್ಲೂ ಪೋಸ್ಟಿಂಗ್ ಸಿಗುವುದಿಲ್ಲ. ನಮ್ಮ ಸರಕಾರವಿದ್ದಾಗ ಪಿಎಸ್ಸೈ ನೇಮಕಾತಿ ಹಗರಣವನ್ನು ತನಿಖೆಗೆ ವಹಿಸಲಾಯಿತು. ನಂತರ ಹಿರಿಯ ಅಧಿಕಾರಿಗಳನ್ನೂ ಬಿಡದೆ ಬಂಧಿಸಲಾಯಿತು. ಇದರಲ್ಲಿ ನಾವು ಲಂಚ ಹೊಡೆದಿದ್ದೇವೆಂದು ಕಾಂಗ್ರೆಸ್ ಅಪಪ್ರಚಾರ ಮಾಡಿತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ 30 ಲಕ್ಷ ರೂ. ನಿಗದಿ ಮಾಡಿ ಲೂಟಿ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News