ಬಿಟ್ ಕಾಯಿನ್ ಪ್ರಕರಣ: ಕಾಂಗ್ರೆಸ್ ಮುಖಂಡ ಮುಹಮ್ಮದ್ ನಲಪಾಡ್‍ಗೆ ಎಸ್‍ಐಟಿ ನೋಟಿಸ್

Update: 2025-02-05 20:34 IST
Photo of Mohammad Nalapad

ಮುಹಮ್ಮದ್ ನಲಪಾಡ್‍

  • whatsapp icon

ಬೆಂಗಳೂರು: ಬಿಟ್ ಕಾಯಿನ್ ಬಹುಕೋಟಿ ಹಗರಣ ಆರೋಪ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ಮುಹಮ್ಮದ್ ನಲಪಾಡ್‍ಗೆ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ ನೋಟಿಸ್ ಜಾರಿ ಮಾಡಿದೆ.

ಈ ಹಿಂದೆ ಬಿಟ್‍ಕಾಯಿನ್ ಪ್ರಮುಖ ಆರೋಪಿಯಾದ ಹ್ಯಾಕರ್ ಶ್ರೀಕೃಷ್ಣ ಯಾನೆ ಶ್ರೀಕಿಗೆ ನಲಪಾಡ್ ಆಪ್ತನಾಗಿದ್ದ ಎನ್ನುವ ಕಾರಣಕ್ಕೆ ಬೆಂಗಳೂರಿನ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸಿಐಡಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿತ್ತು. ಆನಂತರ, ನಲಪಾಡ್ ಅನ್ನು ಸಹ ಆರೋಪಿಯನ್ನಾಗಿಸಲಾಗಿತ್ತು. ಇದೀಗ ಫೆ.7ರಂದು ಬೆಳಗ್ಗೆ 11:30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಮುಹಮ್ಮದ್ ನಲಪಾಡ್‍ಗೆ ನೋಟಿಸ್ ನೀಡಲಾಗಿದೆ.

ಏನಿದು ಬಿಟ್‍ಕಾಯಿನ್ ಹಗರಣ?:

2020ರಲ್ಲಿ ಬಿಟ್‍ಕಾಯಿನ್ ಹಗರಣದ ಸುಳಿವು ಸಿಕ್ಕಿ ಬೆಂಗಳೂರಿನ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಶ್ರೀಕಿ ಸೇರಿ ಐವರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಆರೋಪಿಗಳು ಹಲವಾರು ವೆಬ್‍ಸೈಟ್‍ಗಳು, ಕ್ರಿಸ್ಟೋ ಕರೆನ್ಸಿ ಎಕ್ಸ್‍ಚೇಂಜ್, ಗೇಮಿಂಗ್ ಪೋರ್ಟಲ್‍ಗಳನ್ನು ಹ್ಯಾಕ್ ಮಾಡಿ ಅಕ್ರಮವಾಗಿ ಕೋಟ್ಯಂತರ ರೂ. ಲಪಟಾಯಿಸಿರುವುದು ತನಿಖೆಯಲ್ಲಿ ಕಂಡು ಬಂದಿತ್ತು.

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಜಾಲಗಳು ಪ್ರಕರಣದಲ್ಲಿ ಶಾಮೀಲಾಗಿರುವುದು, ಸೈಬರ್‍ನಲ್ಲಿ ಪರಿಣತಿ ಹೊಂದಿದ್ದ ಹಗರಣದ ಆರೋಪಿಗಳು ಡಾರ್ಕ್‍ನೆಟ್‍ನಲ್ಲಿ ಡೀಲ್ ಕುದುರಿಸಿರುವುದು ಪತ್ತೆಯಾಗಿತ್ತು. 2023ರ ಜೂನ್ 30ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪ್ರಕರಣದ ತನಿಖೆ ನಡೆಸಲು ಎಸ್‍ಐಟಿ ರಚಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News