ಕೃಷಿ-ತಂತ್ರಜ್ಞಾನದ ಬೆಳವಣಿಗೆಗೆ ಸ್ಟಾರ್ಟ್‌ಅಪ್‍ಗಳು ಸಹಕಾರಿ : ಚಲುವರಾಯಸ್ವಾಮಿ

Update: 2024-12-03 15:37 GMT

PC : X/@NCheluvarayaS

ಬೆಂಗಳೂರು, ಡಿ.3: ಕೃಷಿ-ತಂತ್ರಜ್ಞಾನದ ಬೆಳವಣಿಗೆಗೆ ಸ್ಟಾರ್ಟ್‌ಅಪ್‍ಗಳು ಸಹಕಾರಿಯಾಗಿದ್ದು, ಸರಕಾರದ ಮೂಲಕ ಪಿಎಂ ಕಿಸಾನ್ ಮತ್ತು ಅಗ್ರಿ-ಇನ್ಫ್ರಾಫಂಡ್‍ನಂತಹ ಕಾರ್ಯಕ್ರಮಗಳು ಕೃಷಿಯಲ್ಲಿ ತಂತ್ರಜ್ಞಾನದ ಏಕೀಕರಣವನ್ನು ಪ್ರೋತ್ಸಾಹಿಸುತ್ತಿವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ‘ಅಗ್ರಿ-ಸ್ಟಾರ್ಟ್‌ಅಪ್‍ ಕಾನ್‍ಕ್ಲೇವ್’ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಯಲ್ಲಿ ನಾವೀನ್ಯತೆಯ ಸಹಯೋಗ ಮತ್ತು ಸ್ಟಾರ್ಟ್ ಅಪ್ ಗಳ ವೇಗವರ್ಧನೆ ಮಾಡುವ ಗುರಿಯನ್ನು ಈ ಕಾನ್‍ಕ್ಲೇವ್ ಹೊಂದಿದೆ ಎಂದರು.

ತಾಂತ್ರಿಕ ಪ್ರಗತಿಯಿಂದ ಎಐ ತಂತ್ರಜ್ಞಾನ ಕಲಿಕೆ ಮತ್ತು ಕೃಷಿಯಲ್ಲಿ ಐಓಟಿ ಅಪ್ಲಿಕೇಷನ್‍ಗಳ ಅಸಮರ್ಥತೆಗಳನ್ನು ಪರಿಹರಿಸಲು ಸಹಾಯ ಮಾಡುತ್ತಿದೆ. ಜಾಗತಿಕವಾಗಿ ಭಾರತೀಯ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಉತ್ಪಾದನೆ ಮತ್ತು ಪೂರೈಕೆಯಲ್ಲಿ ಸ್ಟಾರ್ಟ್‌ಅಪ್‍ ಗಳಿಗೆ ಪ್ರೋತ್ಸಾಹ ಸಿಗುತ್ತದೆ ಎಂದು ಅವರು ತಿಳಿಸಿದರು.

ಭವಿಷ್ಯದ ದೃಷ್ಟಯಿಂದ ಸ್ಟಾರ್ಟ್‌ಅಪ್‍ ಗಳ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಇಂತಹ ಸಮ್ಮೇಳದ ಮೂಲಕ ಕೃಷಿಯನ್ನು ಮರುರೂಪಿಸುವುದಲ್ಲದೇ ಅತ್ಯಾಧುನಿಕ ಕೃಷಿ ತಂತ್ರಜ್ಞಾನಕ್ಕೆ ಪರಿಹಾರ ಎಂದು ಅವರು ತಿಳಿಸಿದರು.

ಸ್ಟಾರ್ಟ್‌ಅಪ್‍ ಗಳು ಹೂಡಿಕೆದಾರರ, ಕಾರ್ಪೊರೇಟ್‍ಗಳ ಮತ್ತು ನೀತಿ-ನಿರೂಪಕರ ನಡುವೆ ಸೇತುವೆ ಸಂಪರ್ಕವಾಗಿದೆ. ಮುಂದಿನ ಪೀಳಿಗೆಗೆ ಕೃಷಿ ಹಾಗೂ ಕೃಷಿ ಉದ್ಯಮಿಗಳನ್ನು ಪ್ರೇರೇಪಿಸುವ ಯಶಸ್ಸಿನ ಕಥೆಗಳನ್ನು ಹಂಚಿಕೊಳ್ಳುವ ಮೂಲಕ ಇಂತಹ ಸಮಾವೇಶ ಪ್ರೇರಣೀಯ. ಇತ್ತೀಚಿನ ದಿನಗಳಲ್ಲಿ ಪ್ರಕೃತಿ ಹಾಗೂ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯಂತ ವಿಚಾರಗಳನ್ನು ಚರ್ಚಿಸುವುದಕ್ಕೆ ಈ ವೇದಿಕೆ ಸೂಕ್ತವಾಗಿದೆ ಎಂದು ಕೃಷಿ ಸಚಿವರು ಹೇಳಿದರು.

ಸ್ಟಾರ್ಟ್‌ಅಪ್‍ ಗಳು 56 ವೈವಿಧ್ಯಮಯ ಕೈಗಾರಿಕಾ ವಲಯಗಳಲ್ಲಿ ವ್ಯಾಪಿಸಿದ್ದು, 12.42 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿ ಮಾಡಿದೆ. 349.37 ಬಿಲಿಯನ್ ರೂ. ಮೊತ್ತದ ಕೃಷಿ ಸ್ಟಾರ್ಟ್‌ಅಪ್‍ ಗಳು ಶೇ.5ರಷ್ಟಿದ್ದು, ಕೃಷಿ ಮತ್ತು ಆಹಾರ ವ್ಯವಸ್ಥೆಗಳಲ್ಲಿ ನಿರ್ಣಾಯಕ ಸವಾಲುಗಳಿಗೆ ಇದು ಪರಿಹಾರವಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಭಾರತವು 2,800 ಮಾನ್ಯತೆ ಪಡೆದ ಅಗ್ರಿ-ಟೆಕ್ ಸ್ಟಾರ್ಟ್‌ಅಪ್‍ ಗಳಿಗೆ ನೆಲೆಯಾಗಿದೆ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಕೃಷಿ ಆವಿಷ್ಕಾರದ ಕೇಂದ್ರಗಳಾಗಿದ್ದು, ಈ ಸ್ಟಾರ್ಟ್‌ಅಪ್‍ ಗಳಲ್ಲಿ ಸುಮಾರು ಶೇ.60ರಷ್ಟು ಶ್ರೇಣಿ-1 ಮತ್ತು ಶ್ರೇಣಿ-2 ನಗರಗಳಲ್ಲಿ ಕೇಂದ್ರೀಕೃತವಾಗಿವೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಸುರೇಶ್, ಕೃಷಿ ವಿವಿಯ ನಿರ್ದೇಶಕರುಗಳು ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು. ಇದೇ ವೇಳೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದ 50ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‍ ವಸ್ತು ಪ್ರದರ್ಶನವನ್ನು ಸಚಿವರು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News