2 ಸಾವಿರ ಕೋಟಿ ರೂ.ಹೂಡಿಕೆಗೆ ಟಾಟಾ ಟೆಕ್ನಾಲಜೀಸ್ ಪ್ರಸ್ತಾವ: ಸಚಿವ ಎಂ.ಬಿ.ಪಾಟೀಲ್

Update: 2023-07-12 14:42 GMT

ಬೆಂಗಳೂರು, ಜು.12: ಟಾಟಾ ಟೆಕ್ನಾಲಜೀಸ್ ಕಂಪೆನಿಯು 2 ಸಾವಿರ ಕೋಟಿ ರೂ.ಹೂಡಿಕೆ ಮಾಡಿ ರಾಜ್ಯದಲ್ಲಿ ಮೂರು ಸಾಮಾನ್ಯ ಎಂಜಿನಿಯರಿಂಗ್ ಸೌಲಭ್ಯಗಳ ಕೇಂದ್ರ(ಸಿಇಎಫ್‍ಸಿ-ಕಾಮನ್ ಎಂಜಿನಿಯರಿಂಗ್ ಫೆಸಿಲಿಟಿ ಸೆಂಟರ್)ಗಳನ್ನು ಸ್ಥಾಪಿಸಲು ಮುಂದೆ ಬಂದಿದೆ.

ಬುಧವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾದ ಕಂಪೆನಿಯ ಉನ್ನತ ಅಧಿಕಾರಿಗಳು ಈ ಸಂಬಂಧ ಪ್ರಸ್ತಾವ ಸಲ್ಲಿಸಿ ಮಾತುಕತೆ ನಡೆಸಿದರು.

ವಿಶೇಷವಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು (ಎಂಎಸ್‍ಎಂಇ) ಗಳನ್ನು ಗಮನದಲ್ಲಿರಿಸಿಕೊಂಡು ಈ ಘಟಕಗಳ ಕೇಂದ್ರಗಳನ್ನು ಸ್ಥಾಪಿಸುವುದು ಕಂಪೆನಿಯ ಉದ್ದೇಶವಾಗಿದೆ. ಸರಕಾರ ಖಾಸಗಿ ಸಹಭಾಗಿತ್ವದ ಪಿಪಿಪಿ ಮಾದರಿಯಲ್ಲಿ ಇದನ್ನು ಸ್ಥಾಪಿಸುವ ಯೋಜನೆಯಿದ್ದು, ಟಾಟಾ ಟೆಕ್ನಾಲಜೀಸ್ ಶೇ.70ರಷ್ಟು ಹೂಡಿಕೆ ಮಾಡಿದರೆ ಸರಕಾರದ ಪಾಲು ಶೇ.30ರಷ್ಟು ಇರಲಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ಎಂಎಸ್‍ಎಂಇಗಳಿಗಾಗಿ ಸಿ.ಇ.ಎಫ್.ಸಿ. ಸ್ಥಾಪನೆ ಸಂಬಂಧ ಪ್ರಸ್ತಾವ ಸಲ್ಲಿಕೆಯಾಗಿರುವುದು ರಾಜ್ಯದಲ್ಲಿ ಇದೇ ಮೊದಲು ಎನ್ನಲಾಗಿದೆ. ಪ್ರತಿ ಒಂದು ಕೇಂದ್ರಕ್ಕೆ ಸುಮಾರು 630 ಕೋಟಿ ರೂಪಾಯಿ ವೆಚ್ಚವಾಗಲಿದೆ. ಇವುಗಳಿಂದ ಅಡ್ವಾನ್ಸ್ ಮ್ಯಾನುಫ್ಯಾಕ್ಚರಿಂಗ್ 4.0, ಎಲೆಕ್ಟ್ರಿಕ್ ವೆಹಿಕಲ್ ಟೆಸ್ಟಿಂಗ್ ಮತ್ತು ಬಾಹ್ಯಾಕಾಶ ಹಾಗೂ ರಕ್ಷಣಾ ವಲಯದ ಉದ್ದಿಮೆಗಳಿಗೆ ಹೆಚ್ಚಿನ ಉಪಯೋಗ ಆಗುತ್ತದೆ. ಅದೇ ರೀತಿ ಈ ವಲಯಗಳ ಸ್ಟಾರ್ಟ್ ಅಪ್ ಗಳಿಗೂ ಇದರಿಂದ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಅವರು ವಿವರಿಸಿದರು.

ಈ ಪ್ರಸ್ತಾವ ಸ್ವಾಗತಾರ್ಹ. ಸರಕಾರವೂ ಎಂ.ಎಸ್.ಎಂ.ಇ.ಗಳನ್ನು ಬಲಪಡಿಸಲು ಒತ್ತು ಕೊಟ್ಟಿದೆ. ಪ್ರತಿ ಕೇಂದ್ರಕ್ಕೆ ಸುಮಾರು ಐದು ಎಕರೆಯಷ್ಟು ಜಾಗ ಬೇಕಾಗಲಿದ್ದು, ಇದನ್ನು ಎಲ್ಲಿ ಕೊಡಬೇಕೆಂಬ ಬಗ್ಗೆ ಬರುವ ದಿನಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಈ ಸಂದರ್ಭದಲ್ಲಿ ಟಾಟಾ ಟೆಕ್ನಾಲಜೀಸ್ ಅಧ್ಯಕ್ಷ ಪವನ್ ಭಗೇರಿಯಾ, ಉಪಾಧ್ಯಕ್ಷ ಪುಷ್ಕರಾಜ್ ಕೌಲಗೂಡ್, ಮುಖ್ಯಸ್ಥ ಪ್ರವೀಣ್ ದಿವೇಕರ್, ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News