ರೇಣುಕಾಸ್ವಾಮಿ ಹತ್ಯೆ ಪ್ರಕರಣ | ದರ್ಶನ್, ಪವಿತ್ರಾ ಗೌಡ ಸೇರಿ ಏಳು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

Update: 2024-12-13 16:33 GMT
ದರ್ಶನ್/ಪವಿತ್ರಾ ಗೌಡ

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ ಸೇರಿ ಒಟ್ಟು ಏಳು ಮಂದಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ದರ್ಶನ್ ಸೇರಿ ಮತ್ತಿತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠವು ನಟ ದರ್ಶನ್, ಪವಿತ್ರಾಗೌಡ, ಆರ್.ನಾಗರಾಜು, ಎಂ.ಲಕ್ಷ್ಮಣ್, ಅನು ಕುಮಾರ್, ಜಗದೀಶ್, ಪ್ರದೋಷ್ ರಾವ್ ಅವರಿಗೆ ಜಾಮೀನು ಮಂಜೂರು ಮಾಡಿ ಶುಕ್ರವಾರ ಆದೇಶ ಪ್ರಕಟಿಸಿದರು.

ವಿಚಾರಣೆ ವೇಳೆ ದರ್ಶನ್ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್, ಚಿತ್ರದುರ್ಗದ ರೇಣುಕಾಸ್ವಾಮಿಯು ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಜೊತೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಸಮಾಜದಲ್ಲಿ ಮಹಿಳೆಯರನ್ನು ಗೌರವಿಸದ, ಸರಿಯಾದ ನಡತೆ ಹೊಂದಿರದ, ಕಾನೂನಿಗೆ ಎಳ್ಳಷ್ಟೂ ಗೌರವ ನೀಡದ ವ್ಯಕ್ತಿಯನ್ನು ಈ ಪ್ರಕರಣದಲ್ಲಿ ರಾಷ್ಟ್ರೀಯ ನಾಯಕ ಎಂದು ಬಿಂಬಿಸಲಾಗುತ್ತಿದೆ ಎಂದು ಉಲ್ಲೇಖಿಸಿದರು.

ಬಣ್ಣದ ಬದುಕಿನಲ್ಲಿ ನಾಯಕನಾಗಿದ್ದರೂ ದರ್ಶನ್‍ರನ್ನು ಖಳನಾಯಕನ ರೀತಿ ಕಾಣಲಾಗುತ್ತಿದೆ. ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆ ಮಾಡುವ ಉದ್ದೇಶವಿದ್ದರೆ ನೀರು, ಊಟ ಕೊಡಿ ಎಂದು, ಆತನ ಚಿತ್ರ ವಿಡಿಯೊ ಸೆರೆ ಹಿಡಿದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಬಿಡಿ ಎಂದು ಏಕೆ ಹೇಳಿದ್ದರು? ಎಂದು ವಿವರಿಸಿದ್ದರು.

ರೇಣುಕಾಸ್ವಾಮಿಯ ವೃಷಣಕ್ಕೆ ತೀವ್ರವಾಗಿ ಏಟು ಬಿದ್ದಿದ್ದರಿಂದ ರಕ್ತ ಸೋರಿಕೆಯಾಗಿದೆ ಎನ್ನಲಾಗಿದೆ. ರೇಣುಕಾಸ್ವಾಮಿಯ ದೇಹದಲ್ಲಿ ಪತ್ತೆಯಾಗಿರುವುದು 2.5 ಸೆಂಟಿ ಮೀಟರ್ ಗಾಯ ಮಾತ್ರ. ಉಳಿದವು ತರಚಿದ ಮಾದರಿಯ ಗಾಯಗಳು. ಇದನ್ನು ವೈದ್ಯರು ತಮ್ಮ ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಬೇಕಿತ್ತು. 10-15 ತರಚಿದ ಗಾಯಗಳಿಂದ ರಕ್ತ ಬಂದಿದೆ ಎಂದು ಹೇಳಬೇಕಿತ್ತು. ಆದರೆ, ತನಿಖಾಧಿಕಾರಿ ಪ್ರಶ್ನೆ ಎತ್ತಿದ ಮೇಲೆ ಆಗಸ್ಟ್ 23ರಂದು ರಕ್ತ ಸೋರಿಕೆಯಾಗಿದೆ ಎಂದು ವರದಿ ನೀಡಿದ್ದಾರೆ. ಇದಕ್ಕೆ ಆಧಾರವೇನು? ಇಲ್ಲಿ ಸಕಾರಣವಿರಬೇಕಿತ್ತು.

ಜೂನ್ 8ರಂದು ರೇಣುಕಾಸ್ವಾಮಿ ಸಾವನ್ನಪ್ಪುವುದಕ್ಕೂ ಮುನ್ನ ಎರಡು ತಾಸು ಮುಂಚಿತವಾಗಿ ಊಟ ಸೇವಿಸಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಹೇಳಿದ್ದಾರೆ. ಆದರೆ, ರೇಣುಕಾಸ್ವಾಮಿಗೆ ಊಟ ತಂದರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆಯೇ ವಿನಃ ಆತ ಅದನ್ನು ಸೇವಿಸಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಆದರೆ, ರೇಣುಕಾಸ್ವಾಮಿ ಕೊನೆಯ ಬಾರಿಗೆ ಊಟ ಮಾಡಿರುವುದು ಜೂನ್ 8ರ ಮಧ್ಯಾಹ್ನ 12ರ ಸುಮಾರಿಗೆ ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿನ ದುರ್ಗಾ ರೆಸ್ಟೋರೆಂಟ್‍ನಲ್ಲಿ ಎಂಬುದಕ್ಕೆ ಸಾಕ್ಷಿ ಇದೆ. ಇದಕ್ಕೆ ರೇಣುಕಾಸ್ವಾಮಿಯೇ ಹಣ ಪಾವತಿಸಿದ್ದಾರೆ ಎಂದು ಉಲ್ಲೇಖಿಸಿ ವಾದ ಮಾಡಿದ್ದರು.

ಇನ್ನೂ, ವಿಶೇಷ ಸರಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್, ಪ್ರಕರಣದ ಎಲ್ಲ ಆರೋಪಿಗಳ ಡಿಜಿಟಲ್ ಹೆಜ್ಜೆ ಗುರುತುಗಳು ಘಟನೆಯಲ್ಲಿ ಅವರ ಪಾತ್ರವನ್ನು ನಿರೂಪಿಸುತ್ತದೆ. ಆರೋಪಿಗಳೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ದರ್ಶನ್ ಜೊತೆ ಕೆಲಸ ಮಾಡುತ್ತಿದ್ದವರೇ. ಇಡೀ ಪ್ರಕರಣ ಪಿತೂರಿಯ ಭಾಗವಾಗಿ ನಡೆದಿದೆ ಎಂದಿದ್ದರು.

ರೇಣುಕಾಸ್ವಾಮಿ ದೇಹದಲ್ಲಿ 17 ಮೂಳೆ ಮುರಿತ ಮತ್ತು 39 ಗಾಯಗಳು ಪತ್ತೆಯಾಗಿವೆ. ದರ್ಶನ್ ಹಲ್ಲೆಯಿಂದ ರೇಣುಕಾಸ್ವಾಮಿ ವೃಷಣಕ್ಕೆ ತೀವ್ರ ಹಾನಿಯಾಗಿದೆ. ಅಷ್ಟೇ ಮಾತ್ರವಲ್ಲದೆ, ರೇಣುಕಾಸ್ವಾಮಿಯನ್ನು ದರ್ಶನ್ ಬೆಂಗಳೂರಿಗೆ ಕರೆಸಿರುವ ವಿಚಾರವನ್ನು ತನ್ನ ಗೆಳತಿ ಪವಿತ್ರಾ ಗೌಡಗೆ ವಾಟ್ಸಾಪ್ ಕರೆ ಮಾಡಿ ತಿಳಿಸಿದ್ದಾರೆ. ರೇಣುಕಾಸ್ವಾಮಿಯ ಕೊಲೆ ಮುಚ್ಚಿಹಾಕುವುದಕ್ಕೆ ದರ್ಶನ್ 37.40 ಲಕ್ಷ ರೂಪಾಯಿ ಹಣ ನೀಡಿರುವುದು ಮತ್ತು ಆ ನಂತರ ಬೇರೆ ಬೇರೆ ಆರೋಪಿಗಳಿಂದ ನಿರ್ದಿಷ್ಟ ಮೊತ್ತವನ್ನು ತನಿಖಾಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದಿದ್ದರು.

ಇನ್ನೊಂದೆಡೆ, ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್, ದರ್ಶನ್ ಕಾರು ಚಾಲಕ ಎಂ.ಲಕ್ಷ್ಮಣ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್, ಪ್ರದೋಷ್‌ ಪರವಾಗಿ ವಕೀಲ ಕೆ.ದಿವಾಕರ್, 11ನೆ ಆರೋಪಿಯಾಗಿರುವ ದರ್ಶನ್ ವ್ಯವಸ್ಥಾಪಕ ಆರ್.ನಾಗರಾಜು ಪರವಾಗಿ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದರು.

ಏನಿದು ಪ್ರಕರಣ? :

ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಜೂನ್ 11ರಂದು ದರ್ಶನ್ ಮತ್ತಿತರರನ್ನು ಕಾಮಾಕ್ಷಿಪಾಳ್ಯ  ಪೊಲೀಸರು ಬಂಧಿಸಿದ್ದರು. ಜೂನ್ 22ರಿಂದ ದರ್ಶನ್ ಹಾಗೂ ಇತರೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್‍ಗೆ ಅಕ್ಟೋಬರ್ 30ರಂದು ಹೈಕೋರ್ಟ್ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಅಂದಿನಿಂದ ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಬೆನ್ನುಹುರಿ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಗಾಗಲೇ ಜಾಮೀನು ಪಡೆದವರು..!

ಅ.14ರಂದು ವಿಚಾರಣಾಧೀನ ನ್ಯಾಯಾಲಯವು ದರ್ಶನ್, ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್‍ಗೆ ಜಾಮೀನು ನಿರಾಕರಿಸಿತ್ತು. ಆದರೆ, ಎಂಟನೆ ಆರೋಪಿ ರವಿಶಂಕರ್, 13ನೆ ಆರೋಪಿ ದೀಪಕ್ ಕುಮಾರ್‌ಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಅದಕ್ಕೂ ಮುನ್ನ, ಕಾರ್ತಿಕ್, ಕೇಶವಮೂರ್ತಿ ಮತ್ತು ನಿಖಿಲ್ ನಾಯಕ್‍ಗೆ ನ್ಯಾಯಾಲಯವು ಜಾಮೀನು ನೀಡಿತ್ತು.

ಯಾರಿಗೆ ಜಾಮೀನು ಸಿಕ್ಕಿಲ್ಲ..!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ 17 ಮಂದಿ ಆರೋಪಿಗಳಿದ್ದಾರೆ. ಈ ಪೈಕಿ ಐವರಿಗೆ ಜಾಮೀನು ಮಂಜೂರಾಗಿದೆ. ಶುಕ್ರಮವಾರ ಏಳು ಮಂದಿಗೆ ಜಾಮೀನು ಮಂಜೂರಾಗಿದೆ. ಆದರೆ, ಇನ್ನು ಪುಟ್ಟಸ್ವಾಮಿ ಯಾನೆ ಪವನ್, ರಾಘವೇಂದ್ರ, ನಂದೀಶ್, ಧನರಾಜ್ ಡಿ ಅಲಿಯಾಸ್ ರಾಜು, ವಿ.ವಿನಯ್‍ಗೆ ಜಾಮೀನು ಮಂಜೂರಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News