ನಾನು ಯಡಿಯೂರಪ್ಪ ಅವರಿಗೆ ಯಾವತ್ತೂ ದ್ರೋಹ ಮಾಡಿಲ್ಲ, ಡಿಕೆಶಿಗೆ ನಮ್ಮ ಮೈತ್ರಿ ಬಗ್ಗೆ ಹೊಟ್ಟೆ ಉರಿ: ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

Update: 2024-08-04 16:54 GMT

ಬೆಂಗಳೂರು: ‘ನಾನು ನಿಮ್ಮದನ್ನು ಬಿಚ್ಚಲು ಹೋದರೆ ಪುಟಗಟ್ಟಲೆ ಇದೆ. ಆ ಹೆಣ್ಣುಮಗಳನ್ನು ಅಪಹರಣ ಮಾಡಿ ಬೆದರಿಸಿ ಅವರಪ್ಪನಿಂದ ಸದಾಶಿವನಗರದಲ್ಲಿ ನಿವೇಶನ ಬರೆಸಿಕೊಂಡಿದ್ದೀರಿ. ಅದೇನೋ ಬಿಚ್ತೀನಿ ಅಂದ್ಯಲ್ಲಪ್ಪ, ಬಿಚ್ಚು ನೋಡೋಣ, ನಂದು ವಿಜಯೆಂದ್ರದ್ದು. ಆಮೇಲೆ ನಿನ್ನದನ್ನು ಹೇಗೆ ಬಿಚ್ಚುತೀನಿ ಎಂದು ನೋಡುವಿಯಂತೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಮೈಸೂರು ಚಲೋ ಎರಡನೇ ದಿನ ಪಾದಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ‘ನಾನು ಬಿಚ್ಚೋಕ್ಕೆ ಹೋದ್ರೆ ನಿಮ್ಮದು ಪುಟಗಟ್ಟಲೆ ಇದೆ. ಅಜ್ಜಯ್ಯನ ಬಗ್ಗೆ ಈ ಡಿ.ಕೆ.ಶಿವಕುಮಾರ್ ಗೆ ಭಕ್ತಿ ಗೌರವ ಇದ್ದರೆ ಪ್ರಮಾಣ ಮಾಡಲಿ. ಅಜ್ಜಯ್ಯನ ಬಗ್ಗೆ ನನಗೆ ಗೌರವ, ಭಕ್ತಿ ಎರಡೂ ಇದೆ. ನಾನು ಪ್ರಾಮಾಣಿಕವಾಗಿ ಬೆಳೆದು ಬಂದಿದೇನೆ ಎಂದು ಅವರ ಮೇಲೆ ಪ್ರಮಾಣ ಮಾಡಿ. ನಾನೂ ಪ್ರಮಾಣ ಮಾಡುತ್ತೇನೆ ಎಂದು ಸವಾಲು ಹಾಕಿದರು.

ಈ ಡಿಕೆಶಿಗೆ ಅಜ್ಜಯ್ಯನ ಶಾಪವೂ ಆರಂಭವಾಗಿದೆ. ಎಷ್ಟು ಮನೆಗಳನ್ನು ಒಡೆದು ನೀವು ಬೆಳೆದಿದ್ದೀರಿ ಎಂದು ನನಗೆ ಗೊತ್ತಿದೆ. ನಾನು ಏನೂ ಮಾಡಿಯೇ ಇಲ್ಲ, ಸ್ವಚ್ಚವಾಗಿದ್ದೇನೆ ಎಂದು ಅಜ್ಜಯನ ಮುಂದೆ ನಿಂತು ಪ್ರಮಾಣ ಮಾಡಲಿ. ನಾನು ಯಾರಿಗೂ ದ್ರೋಹ ಮಾಡಲಿಲ್ಲ. ಮಾಡುವುದೂ ಇಲ್ಲ. ಜನರ ಆಶೀರ್ವಾದವೇ ನನ್ನ ಬಲ, ಅದೇ ನನ್ನ ಬೆಳೆಸಿದೆ ಎಂದು ಅವರು ತಿಳಿಸಿದರು.

ನಾನು ಯಡಿಯೂರಪ್ಪ ಅವರಿಗೂ ದ್ರೋಹ ಮಾಡಲಿಲ್ಲ. ಆ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದ ಅಧಿಕಾರ ಹಂಚಿಕೆ ಆಗಲಿಲ್ಲ. ನಾನು ಯಡಿಯೂರಪ್ಪ ಅವರಿಗೆ ಯಾವತ್ತೂ ದ್ರೋಹ ಮಾಡಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್ ನಿದ್ದೆಗೆಡಿಸಿದೆ. ಅದಕೆ ಶಿವಕುಮಾರ್ ನಮ್ಮ ಮೈತ್ರಿ ಬಗ್ಗೆ ಹೊಟ್ಟೆ ಉರಿ ಅನುಭವಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದಲಿತರಿಗೆ ಸೇರಬೇಕಾದ 68 ಎಕರೆ ಜಮೀನು ಡಿಸಿಎಂ ಲಪಟಾಯಿಸಿದ್ದಾರೆ. ದಲಿತರಿಗೆ ಸಿಗಬೇಕಾದ ನಿವೇಶನಗಳನ್ನು ಡಿ.ಕೆ.ಶಿವಕುಮಾರ್ ಹೊಡೆದುಕೊಂಡಿದ್ದಾರೆ. ಅಸಲಿ ಸೊಸೈಟಿಯನ್ನು ನಕಲಿ ಮಾಡಿ ದಲಿತರ ಭೂಮಿ ಲಪಟಾಯಿಸಿದ್ದಾರೆ. ಇವರ ಬಳಿ ನಾನು ಹೇಳಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ನಾನು ಸಿನಿಮಾ ವಿತರಕನಾಗಿದ್ದಾಗ ಭೂಮಿ ಖರೀದಿಸಿದೆ. ಕೇತಗಾನಹಳ್ಳಿಯಲ್ಲಿ ನಾನು ಚಲನಚಿತ್ರ ಪ್ರದರ್ಶಕನಾಗಿದ್ದಾಗ ಚುನಾವಣೆಗೆ ನಿಲ್ಲುವ 15 ವರ್ಷಗಳ ಹಿಂದೆ 45 ಎಕರೆ ಜಮೀನು ತಗೊಂಡಿದ್ದೇನೆ. ಇದನ್ನು ನಾನು ಎಲ್ಲೂ ಮುಚ್ಚಿಟ್ಟಿಲ್ಲ. ಯಾರಿಗೂ ಮೋಸ ಮಾಡಲಿಲ್ಲ ನಾನು. ನಾನು ವಂಚನೆ ಮಾಡಿ ಭೂಮಿ ಖರೀದಿಸಿದ್ದಿದ್ರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಅವರು ಸ್ಪಷ್ಟಣೆ ನೀಡಿದರು.

ಅಸೂಯೆ ಇಲ್ಲ: ಈ ಪಾದಯಾತ್ರೆ ಅಸೂಯೆಯಿಂದ ಹಮ್ಮಿಕೊಂಡಿದ್ದಲ್ಲ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ದಿನವೇ ಅಂಗಡಿ ಬಾಗಿಲು ತೆರೆದು ಕೂತಿದೆ. ಗ್ಯಾರಂಟಿಗಳಿಂದ ಬದಲಾವಣೆಗಳನ್ನು ತಂದಿದ್ದೇವೆ ಅನ್ಕೊಂಡಿದ್ದೇವೆ. ಗ್ಯಾರಂಟಿಗಳಿಂದ ರಾಜ್ಯವನ್ನು ದರಿದ್ರದತ್ತ ತಗೊಂಡು ಹೋಗಿದ್ದಾರೆ. ಮಂತ್ರಿಗಳಲ್ಲಿ ಭ್ರಷ್ಟಾಚಾರ ನಡೆಸಲು ಪೈಪೋಟಿ ನಡೀತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಮುಡಾ ಬಗ್ಗೆ ನಾನು, ನಮ್ಮ ಶಾಸಕರು ಇವರ ಅಕ್ರಮದ ಬಗ್ಗೆ ದಾಖಲೆಗಳ ಸಮೇತ ಮಾತನಾಡಿದ್ದೇವೆ. ಮೈಸೂರು ಉಸ್ತುವಾರಿಯನ್ನು ಸಿಎಂ ಅವರೇ ವಹಿಸಿಕೊಂಡಿದ್ದಾರೆ. ಸಿಎಂ ತಮ್ಮ ಪತ್ನಿ ಹೆಸರಲ್ಲಿ 15 ಸೈಟು ಪಡೆಯಲು ನಮ್ಮ ವಿರೋಧ ಇಲ್ಲ. ಆದರೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಸೈಟು ಪಡೆದಿದ್ದಾರೆ ಎಂದು ಹೇಳಿದರು.

ಏಕವಚನ ನನಗೂ ಬರುತ್ತದೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಏನು ಪ್ರಶ್ನೆಗಳನ್ನು ಹಾಕಿದಾರೋ ಅದಕ್ಕೆ ಉತ್ತರ ಕೊಡಲು ಇಲ್ಲಿದ್ದೇನೆ. ನನ್ನ ಬಗ್ಗೆ, ವಿಜಯೇಂದ್ರ ಬಗ್ಗೆ ಏಕವಚನದಲ್ಲಿ ಮಾತಾಡಿದ್ದಾರೆ. ನಾವೂ ಹಳ್ಳಿಯ ಮಕ್ಕಳೇ, ನಿಮಗಿಂತಲೂ ಏಕವಚನದಲ್ಲಿ ಮಾತಾಡಲು ನಮಗೂ ಗೊತ್ತು. ಆದರೆ ಆ ಕೆಳಮಟ್ಟಕ್ಕೆ ನಾವು ಇಳಿಯಲ್ಲ ಎಂದು ತಿರುಗೇಟು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News