ಬೆಂಗಳೂರು: ಟೊಮೆಟೊ ತುಂಬಿದ್ದ ಬೊಲೆರೊ ವಾಹನ ಕಳವು; ಪ್ರಕರಣ ದಾಖಲು

Update: 2023-07-10 11:24 GMT
ಫೋಟೊ- PTI

ಬೆಂಗಳೂರು: ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಮತ್ತೊಂದು ಕಡೆ ಟೊಮೆಟೊ ಕಳವು ಪ್ರಕರಣಗಳು ಕೂಡ ವರದಿಯಾಗುತ್ತಿವೆ. ಇದರಿಂದ ಟೊಮೆಟೊ ಬೆಳೆದ ರೈತರು ತಮ್ಮ ಜಮೀನುಗಳಿಗೆ ಹಗಲಿರುಳು ಕಾವಲು ಕಾಯುವಂತಾಗಿದೆ. 

ಇಂಥದ್ದೇ ಪ್ರಕರಣದಲ್ಲಿ ಸುಮಾರು 2 ಸಾವಿರ ಕೆಜಿಗೂ ಹೆಚ್ಚು ಟೊಮೆಟೊ ಇದ್ದ ಬೊಲೆರೊ ವಾಹನವನ್ನೇ ಕಳವುಗೈದಿರುವ ಘಟನೆ ಬೆಂಗಳೂರಿನ ಯಲಹಂಕ ಬಳಿಯ ಚಿಕ್ಕಜಾಲ ಗ್ರಾಮದ ಬಳಿ ಶನಿವಾರ ಬೆಳಗ್ಗೆ ವರದಿಯಾಗಿದೆ. 

ಹಿರಿಯೂರಿನಿಂದ ಕೋಲಾರಕ್ಕೆ ಶನಿವಾರ ರೈತ ತಾನು ಬೆಳೆದ ಟೊಮೆಟೋವನ್ನು ಸಾಗಿಸುತ್ತಿದ್ದರು. ಈ ವೇಳೆ ಮೂವರು ಕಾರಿನಲ್ಲಿ ಟೊಮೆಟೊ ವಾಹನವನ್ನು ಹಿಂಬಾಲಿಸಿದ್ದಾರೆ. ಬೊಲೆರೋ ವಾಹನವನ್ನು ಹಿಂಬಾಲಿಸಿಕೊಂಡು ಬಂದ ಮೂವರು ಆರ್‌ಎಮ್‌ಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಬೊಲೆರೊ ವಾಹನವನ್ನು ಅಡ್ಡಗಟ್ಟಿ, ನಿಮ್ಮ ವಾಹನ ತಮ್ಮ ಕಾರಿಗೆ ಪೀಣ್ಯಾ ಬಳಿ ತಾಗಿದೆ ಎಂದು ವಾದಿಸಿದ್ದಾರೆ.  ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಹಲ್ಲೆ ಕೂಡ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಣಕ್ಕಾಗಿ ಬೇಡಿಕೆ ಕೂಟ ಇಟ್ಟಿದ್ದ ದುಷ್ಕರ್ಮಿಗಳು, ಹಣ ಇಲ್ಲ ಎಂದಿದ್ದಕ್ಕೆ ಬೊಲೆರೊ ಸಮೇತ ರೈತ ಮತ್ತು ಚಾಲಕನನ್ನು ಕರೆದುಕೊಂಡು ಚಿಕ್ಕಜಾಲ ತನಕ ಹೋಗಿದ್ದಾರೆ. ಚಿಕ್ಕಜಾಲ ಬಳಿ ರೈತನನ್ನು ಬಿಟ್ಟು ಚಾಲಕ​ ಮತ್ತು ಟೊಮೆಟೊ ತುಂಬಿದ್ದ ವಾಹನ ಸಮೇತ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಸದ್ಯ ಆರ್ ಎಂಸಿ ವಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News