ತುಮಕೂರು | ದಲಿತ ದೌರ್ಜನ್ಯ ಪ್ರಕರಣ: ಆರೋಪಿಗಳಿಗೆ ನ.16ಕ್ಕೆ ಶಿಕ್ಷೆ ಪ್ರಕಟ

Update: 2023-11-01 12:45 GMT

ಬೆಂಗಳೂರು, ನ.1: ತುಮಕೂರು ಜಿಲ್ಲೆಯ ದುಂಡ ಗ್ರಾಮದಲ್ಲಿ ದಶಕದ ಹಿಂದೆ ನಡೆದಿದ್ದ ದಲಿತ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿರುವ ಹೈಕೋರ್ಟ್ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದೆ. ಅಲ್ಲದೆ, ನ.16ಕ್ಕೆ ನ್ಯಾಯಾಲಯವು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.

ಆ ಮೂಲಕ ವಿಚಾರಣಾ ಕೋರ್ಟ್ 2011ರಲ್ಲಿ ಆರೋಪಿಗಳ ಪರವಾಗಿ ನೀಡಿದ್ದ ತೀರ್ಪನ್ನು ರದ್ದುಗೊಳಿಸಿರುವ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿದ್ದೀನ್ ಅವರಿದ್ದ ನ್ಯಾಯಪೀಠವು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದುಂಡ ಗ್ರಾಮದಲ್ಲಿ 2008ರ ಆ.14ರಂದು ಬಲವಂತವಾಗಿ ದಲಿತ ಕೇರಿಗೆ ನುಗ್ಗಿ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ಜಾತಿಯನ್ನು ಪ್ರಸ್ತಾಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪ್ರಕರಣ ನಡೆದಿತ್ತು. ಜೊತೆಗೆ ಅಲ್ಲಿ ಇದ್ದವರ ಮೇಲೆ ತೀವ್ರ ದೈಹಿಕ ಹಲ್ಲೆಯನ್ನೂ ನಡೆಸಲಾಗಿತ್ತು.

ಗೋವಿಂದರಾಜು, ನರಸಿಂಹಮೂರ್ತಿ, ಕೆಂಪ ಓಬಳಯ್ಯ, ದೊಡ್ಡಯ್ಯನ ಕೆಂಪ ಓಬಳಯ್ಯ, ವೆಂಕಟೇಶ್, ಮಂಜುನಾಥ್, ಉಮೇಶ್, ಮಹಾಲಕ್ಷ್ಮಮ್ಮ ಅವರ ಮೇಲೆ ದೊಣ್ಣೆ, ಕಲ್ಲುಗಳನ್ನು ಬಳಸಿ ದಾಳಿ ನಡೆಸಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು.

ಅದೇ ದಿನ ಪ್ರಕರಣದ ಮೇಲ್ಮನವಿದಾರ ದಂಡಿನಶಿವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹನ್ನೊಂದು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 324, 149 ಹಾಗೂ 1989ರ ಎಸ್‍ಸಿ ಎಸ್‍ಟಿ (ದೌರ್ಜನ್ಯ ತಡೆ) ಕಾಯಿದೆಯ ಸೆಕ್ಷನ್ 3 (10)ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ವಿಚಾರಣಾ ಕೋರ್ಟ್ 2011ರಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ದೂರುದಾರರು ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಅ.31ರಂದು ಪ್ರಕರಣ ಆಲಿಸಿದ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News