ಶಾಸಕರು ಮುಖ್ಯಮಂತ್ರಿಗಳ ಬಳಿ ನೋವು ಹೇಳಿಕೊಳ್ಳುವುದರಲ್ಲಿ ತಪ್ಪೇ‌ನಿದೆ?: ಡಿ. ಕೆ.ಶಿವಕುಮಾರ್

Update: 2023-09-02 07:15 GMT

ಬೆಂಗಳೂರು: "ಶಾಸಕರದ್ದು ಒಂದಷ್ಟು ಬೇಡಿಕೆಗಳು, ತೊಂದರೆಗಳು ಇರುತ್ತವೆ, ಅವುಗಳನ್ನು ಮುಖ್ಯಮಂತ್ರಿಗಳ ಬಳಿ ಹೇಳಿಕೊಳ್ಳಬಾರದೇ? ಶಾಸಕರು ತಮ್ಮ ನೋವು ಸಮಸ್ಯೆ ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ?" ಎಂದು ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ತಿಳಿಸಿದ್ದಾರೆ. 

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರು ಶಾಸಕ ಬಸವರಾಜ ರಾಯರೆಡ್ಡಿ ಅವರು ಸಿಎಂಗೆ ಬರೆದಿರುವ ಪತ್ರದ ವಿಚಾರವಾಗಿ ಕೇಳಿದ ಪಶ್ನೆಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು "ಪಕ್ಷದ ಒಳಗೆ ಶಿಸ್ತು ಇದೆ ಯಾವುದೇ ತೊಂದರೆ ಇಲ್ಲ. ಯಾವ ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿಲ್ಲ, ಇದೆಲ್ಲ ಮಾಧ್ಯಮಗಳ ಸೃಷ್ಟಿ" ಎಂದು ಸ್ಪಷ್ಟನೆ ನೀಡಿದರು.

ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆಗಳಿಗೆ ತೊಂದರೆಯಾಗಿ ಬಂದ್‌ಗೆ ಕರೆ ನೀಡಿದ್ದಾರೆ ಎನ್ನುವ ಪ್ರಶ್ನೆಗೆ "ಹೌದು ಖಾಸಗಿ ಬಸ್ ಮಾಲಕರಿಗೆ ತೊಂದರೆಯಾಗಿರುವುದು ನನ್ನ ಗಮನಕ್ಕೂ ಬಂದಿದೆ. ನಾನು ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರನ್ನು ಭೇಟಿಯಾಗಿ ಇದಕ್ಕೆ ಪರಿಹಾರ ಕಂಡು ಹಿಡಿಯುತ್ತೇವೆ'' ಎಂದರು. 

ಅನೇಕ ಊರುಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಪರ್ಕವೇ ಇಲ್ಲ, ಅವರೆಲ್ಲಾ ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ, ಆದ ಕಾರಣ ಒಂದು ಪರಿಹಾರ ಸೂತ್ರ ಕಂಡುಹಿಡಿಯಲಾಗುವುದು. ನನ್ನನ್ನೂ ಸಹ ಖಾಸಗಿ ಬಸ್ ಮಾಲಕರು ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಿದ್ದರು, ಈ ಸಮಸ್ಯೆ ಬೇಗ ಬಗೆಹರಿಸಲಾಗುವುದು" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News