40 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ಯತ್ನಾಳ್ ಆರೋಪ ನಂಬಲು ಸಾಧ್ಯವಿಲ್ಲ: ಎಚ್‍ಡಿಕೆ

Update: 2023-12-30 14:52 GMT

ಬೆಂಗಳೂರು: ಬಿಜೆಪಿ ಸರಕಾರದ ಅವಧಿಯಲ್ಲಿ 40 ಸಾವಿರ ಕೋಟಿ ರೂ.ಕೋವಿಡ್ ಅವ್ಯವಹಾರ ನಡೆದಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ನಂಬಲು ಸಾಧ್ಯವಿಲ್ಲ. ಒಂದು ವೇಳೆ ಸತ್ಯವಾಗಿದ್ದರೆ, ರಾಜ್ಯ ಸರಕಾರ ಜನರ ಮುಂದೆ ಅವ್ಯವಹಾರವನ್ನು ಬಯಲು ಮಾಡಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಶನಿವಾರ ಇಲ್ಲಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯತ್ನಾಳ್ ಆರೋಪದಲ್ಲಿ ಸತ್ಯ ಇದ್ದರೆ, ಸರಕಾರ ಜನರ ಮುಂದೆ ಅವ್ಯವಹಾರವನ್ನು ಬಯಲು ಮಾಡಲಿ. ಅಲ್ಲದೆ, ಈಗಾಗಲೇ ಕಾಂಗ್ರೆಸ್ ಶಾಸಕ ಟಿ.ಬಿ.ಜಯಚಂದ್ರ ಸಮಿತಿ ಕೊಟ್ಟ ನೈಸ್ ವರದಿಯನ್ನು ಏನು ಮಾಡುತ್ತಿದ್ದಾರೆ?. ಕೆಂಪಣ್ಣ ಆಯೋಗದ ವರದಿ ಎಲ್ಲಿದೆ?. ಈಗ ಯತ್ನಾಳ್ ಆರೋಪ ತನಿಖೆ ಮಾಡಿ, ಸತ್ಯಾಂಶ ಹೊರಗಿಡಿ ಎಂದು ಹೇಳಿದರು.

ಕೊರೊನಾ ನಿರ್ವಹಣೆಯಲ್ಲಿ ಕೆಲ ಲೋಪದೋಷ ಆಗಿರಬಹುದು. ಅದನ್ನೇ ಈಗಿನ ಸರಕಾರ ಟೀಕೆ ಮಾಡಲು ಬಳಸುತ್ತಿದೆ. ಸರಕಾರದಲ್ಲಿ ಪಾರದರ್ಶಕತೆ ಇದ್ದರೆ ಯತ್ನಾಳ್ ಆರೋಪದ ಬಗ್ಗೆ ತನಿಖೆ ನಡೆಸಲಿ. ಇದನ್ನು ಬಿಟ್ಟು ಬರೀ ಬಿಜೆಪಿ ತೆಗಳಲು ಬಳಸಿಕೊಂಡರೆ ಹೇಗೆ ಎಂದು ಪ್ರಶ್ನಿಸಿದರು.  ಯತ್ನಾಳ್ ಪಕ್ಷದೊಳಗಿನ ಭಿನ್ನಾಭಿಪ್ರಾಯದಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ಜತೆಗೆ ಈಗ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದೆ. ಸಚಿವ ದಿನೇಶ್ ಗುಂಡೂರಾವ್ ಈ ಬಗ್ಗೆ ತನಿಖೆ ನಡೆಸಿ ಅಂಕಿಅಂಶ ಬಯಲು ಮಾಡಲಿ ಎಂದು ಹೇಳಿದರು.

ಈ ಹಿಂದೆ ಮಾಜಿ ಸ್ಪೀಕರ್ ಆಗಿದ್ದ ರಮೇಶ್‍ಕುಮಾರ್ ಫ್ರೀಡಂ ಪಾರ್ಕ್‍ನಲ್ಲಿ ಭಾಷಣ ಮಾಡಿ ಗಾಂಧಿ ಹೆಸರಲ್ಲಿ ತಿಂದು ತೇಗುವಷ್ಟು ಹಣ ಮಾಡಿದ್ದೇವೆ ಅಂದಿದ್ದರು. ಆಗ ಏಕೆ ಚರ್ಚೆ ಮಾಡಿಲ್ಲ. ಅದೇ ರೀತಿ, ಪಿಎಸ್ಸೈ ನೇಮಕಾತಿ ಅಕ್ರಮದ ಬಗ್ಗೆ ಆಯೋಗ ನನಗೆ ನೋಟಿಸ್ ನೀಡಿದೆ. ಆದರೆ, ಸಚಿವ ಪ್ರಿಯಾಂಕ್ ಖರ್ಗೆಗೆ ನೋಟಿಸ್ ಕೊಟ್ಟಿಲ್ಲ. ಪ್ರಿಯಾಂಕ್ ಅಕ್ರಮದ ಬಗ್ಗೆ ಆಡಿಯೋ ದಾಖಲಾತಿಗಳನ್ನು ಬಿಡುಗಡೆ ಮಾಡಿದ್ದರು. ಅವರಿಗೆ ಮೊದಲು ನೋಟಿಸ್ ಕೊಡಬೇಕಾಗಿತ್ತು. ಆದರೆ, ಅವರಿಗೆ ಏನೂ ಕಳುಹಿಸಿಲ್ಲ. ನಾನು ಪಿಎಸ್ಸೈ ಅಕ್ರಮದ ಬಗ್ಗೆ ಏನೂ ಹೇಳೇ ಇಲ್ಲ. ಆದರೂ ನೋಟಿಸ್ ನೀಡಿದ್ದಾರೆ ಎಂದು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News