ಪೆಟ್ರೋಲ್ ಇಂಡೆಂಟ್ ದುರ್ಬಳಕೆ ಆರೋಪ; ಸರಕಾರದ ಮುಖ್ಯ ಕಾರ್ಯದರ್ಶಿಗೆ ಯತ್ನಾಳ್ ಪತ್ರ

Update: 2024-12-27 13:29 GMT

ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು : ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಹಾಗೂ ಹಜ್ ಇಲಾಖೆಯಲ್ಲಿ ನಕಲಿ ಇಂಡೆಂಟ್‍ಗಳನ್ನು ಬಳಸಿಕೊಂಡು ಸರಕಾರಿ ವಾಹನ ಚಾಲಕರು ಹಾಗೂ ಪೆಟ್ರೋಲ್ ಸರ್ವಿಸ್ ಸ್ಟೇಷನ್‍ಗಳು ಪೆಟ್ರೋಲ್ ದುರ್ಬಳಕೆ ಮಾಡುತ್ತಿದ್ದು, ಈ ಸಂಬಂಧ ‘ಇಂಧನ ಮಿತಿ ಮಾರ್ಗಸೂಚಿ’ ಹೊರಡಿಸಬೇಕೆಂದು ಕೋರಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಶುಕ್ರವಾರ ಈ ಸಂಬಂಧ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ‘ತೆರಿಗೆ ಹಣವನ್ನು ಜವಾಬ್ದಾರಿಯುತವಾಗಿ, ರಾಜ್ಯದ ಕಲ್ಯಾಣ ಕಾರ್ಯಗಳಿಗೆ, ಉದ್ಯೋಗ ಸೃಜನೆ, ಮೂಲಸೌಕರ್ಯ ಅಭಿವೃದ್ಧಿ, ಬಡವರ, ರೈತರ ಶ್ರೇಯೋಭಿವೃದ್ಧಿಗೆ, ಮಹಿಳಾ ಸಬಲೀಕರಣ ಉಪಯೋಗಿಸಬೇಕು.

ಆದರೆ, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಇಲಾಖೆಯಲ್ಲಿ ಮನಬಂದಂತೆ ಪೆಟ್ರೋಲ್ ಇಂಡೆಂಟ್‍ಗಳನ್ನು ಬಳಸಿಕೊಂಡು ಸರಕಾರಿ ವಾಹನ ಚಾಲಕರು ಹಾಗೂ ಪೆಟ್ರೋಲ್ ಸರ್ವಿಸ್ ಸ್ಟೇಷನ್‍ಗಳು ದೊಡ್ಡ ಭ್ರಷ್ಟಾಚಾರವನ್ನು ಎಸಗಿದ್ದಾರೆ. ಕಾರಿಗೆ ಪೆಟ್ರೋಲ್ ಹಾಕಿಸುವಾಗ ಸಂಬಂಧಪಟ್ಟ ಇಲಾಖೆಯ ಮೊಹರು ಇರಬೇಕು ಹಾಗೂ ಇಲಾಖೆಯ ಮುಖ್ಯಸ್ಥರ ಸಹಿ ಇರಬೇಕು. ಆದರೆ, ಅಲ್ಪಸಂಖ್ಯಾತ, ಹಜ್ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್‌ರ ವಾಹನ ಸಂ ಕೆಎ-01 ಜಿಬಿ-9990ಗೆ ಇಂಡೆಂಟ್‍ಗಳು ಇಲ್ಲದಿದ್ದರೂ ಪೆಟ್ರೋಲ್ ತುಂಬಿಸಲಾಗಿರುವುದನ್ನು ಮಾಧ್ಯಮಗಳು ದಾಖಲೆ ಸಮೇತ ಬಯಲು ಮಾಡಿವೆ.

ಕೇವಲ ಐದು ತಿಂಗಳಲ್ಲಿ ಈ ವಾಹನಕ್ಕೆ 390 ಲೀಟರ್ ಪೆಟ್ರೋಲ್ ತುಂಬಿಸಲಾಗಿದೆ. ಚಾಲಕ ಮಹೇಶ್ ಎನ್. ಎಂಬುವವರು 2023 ಡಿಸೆಂಬರ್, 2024 ಜನವರಿ, ಫೆಬ್ರವರಿ, ಮಾರ್ಚ್ ಮತ್ತು ಮೇ ತಿಂಗಳ ಇಂಧನ ಬಿಲ್‍ಗಳಲ್ಲಿ ವ್ಯತ್ಯಯ ಆಗಿರುವುದು ಗೊತ್ತಾಗಿದೆ. ಈ ಸಂಬಂಧ ಮಾಧ್ಯಮವೊಂದು ಬಿಡುಗಡೆ ಮಾಡಿರುವ ದಾಖಲೆಯನ್ನು ಈ ಪತ್ರದ ಮೂಲಕ ಲಗತ್ತಿಸಿರುತ್ತೇನೆ.

ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರಿಗೆ ಒದಗಿಸಿರುವ ವಾಹನಗಳಿಗೆ ದಿನನಿತ್ಯ ಇಷ್ಟೇ ಪ್ರಮಾಣದಲ್ಲಿ ಪೆಟ್ರೋಲ್ ಹಾಕಿಸಬೇಕೆಂದು ಯಾವುದೇ ನಿಯಮ ಅಥವಾ ಮಿತಿ ಇರುವುದಿಲ್ಲ. ತಾವು ಕೂಡಲೇ ಪ್ರಧಾನ ಕಾರ್ಯದರ್ಶಿಗಳೂ ಸೇರಿ ಸರಕಾರದ ವಾಹನ ಬಳಸುವ ಎಲ್ಲರಿಗೂ ಇಂಧನವನ್ನು ಬಳಸಲು ಒಂದು ಮಾರ್ಗಸೂಚಿಯನ್ನು ಸರಕಾರದ ವತಿಯಿಂದ ಹೊರಡಿಸಬೇಕು

ಮೂರು ತಿಂಗಳಿಗೊಮ್ಮೆ ವಾಹನ ಕ್ರಮಿಸಿರುವ ಕಿ.ಮೀ. ಮತ್ತು ಉಪಯೋಗಿಸಿರುವ ಇಂಧನವನ್ನು ಅಡಿಟ್ ಮಾಡಬೇಕೆಂದು ಮನವಿ, ತನ್ಮೂಲಕ ದುರುಪಯೋಗ ಮಾಡಿಕೊಳ್ಳುವುದನ್ನು ತಪ್ಪಿಸಬಹುದು. ತಾವು ಸರಕಾರದ ಎಲ್ಲ ಇಲಾಖೆಗಳಿಗೂ ನೀಡಿರುವ ವಾಹನಗಳಿಗೆ ‘ಇಂಧನ ನೀತಿ ಮಾರ್ಗಸೂಚಿ’ ಪರಿಚಯಿಸಿ ಸರಕಾರದ ಹಣವನ್ನು ಕೆಲ ಪಟ್ಟಭದ್ರರು, ಭ್ರಷ್ಟ ನೌಕರರು, ಚಾಲಕರು ದುರುಪಯೋಗ ಮಾಡಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News