ಯತ್ನಾಳ್, ತನ್ವೀರ್ ಹಾಶ್ಮಿ ಕುಟುಂಬ ಉದ್ಯಮದ ಪಾಲುದಾರರು: ವರದಿ

Update: 2023-12-08 06:10 GMT

Photo: Prajavani

ವಿಜಯಪುರ: ‘ಐಸಿಸ್ ಭಯೋತ್ಪಾದಕರೊಂದಿಗೆ ನಂಟಿದೆ’ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಆರೋಪಕ್ಕೆ ಒಳಗಾಗಿರುವ ಬಿಜಾಪುರ್ ಷರೀಫ್ ನ ಸೂಫಿ ವಿದ್ವಾಂಸ ತನ್ವೀರ್ ಹಾಶ್ಮಿ ಅವರು ಉದ್ಯಮವೊಂದರ ಪಾಲುದಾರರಾಗಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ಯತ್ನಾಳ್ ಹಾಗೂ ತನ್ವೀರ್ ಹಾಶ್ಮಿ ನಗರದ ಗಾಂಧಿಚೌಕದ ಬಳಿಯಿರುವ ‘ಟೂರಿಸ್ಟ್ ಹೋಟೆಲ್’ನ ಪಾಲುದಾರರಾಗಿದ್ದಾರೆ. ನಗರದ ಹೊರವಲಯದ ಮಹಲ್ ಐನಾಪುರ ಗ್ರಾಮದ ವಿಜಯಪುರ–ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಬಳಿ ಇಬ್ಬರ ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳು ಅಕ್ಕಪಕ್ಕದಲ್ಲಿವೆ ಎಂದು ವರದಿ ತಿಳಿಸಿದೆ.

ಈ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಅವರು, ‘ಟೂರಿಸ್ಟ್ ಹೋಟೆಲ್ನಲ್ಲಿ ಶಾಸಕ ಯತ್ನಾಳ್ ಮತ್ತು ತನ್ವೀರ್ ಹಾಶ್ಮಿ ಅವರ ಕುಟುಂಬದವರು ಪಾಲುದಾರಾಗಿರುವಾಗ ಮೌಲ್ವಿ ವಿರುದ್ಧ ಆರೋಪಿಸುವ ನೈತಿಕತೆ ಯತ್ನಾಳರಿಗೆ ಇದೆಯೇ’ ಎಂದು ಪ್ರಶ್ನಿಸಿದ್ದಾರೆ.

‘ಹಾಶ್ಮಿಯವರು ಐಸಿಸ್ ಜೊತೆ ನಂಟು ಹೊಂದಿದ್ದಾರೆ ಎಂಬುದು ಗೊತ್ತಿದ್ದಿದ್ದರೆ, ಇಷ್ಟು ವರ್ಷ ಏಕೆ ಯತ್ನಾಳ್ ಸುಮ್ಮನಿದ್ದರು? ಒಂದೋ ಯತ್ನಾಳ್ ಅವರು ಆರೋಪ ಸಾಬೀತು ಪಡಿಸಬೇಕು, ಇಲ್ಲವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜ್ಯ ಸರ್ಕಾರವು ಅವರ ವಿರುದ್ಧ ಕ್ರಮ ಜರುಗಿಸಿ, ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಮುಲ್ಲಾ, ‘ಯತ್ನಾಳ್ ಅವರು ಹಾಶ್ಮಿ ಅವರೊಂದಿಗೆ ಹೆಚ್ಚು ಒಡನಾಟವಿರಿಸಿಕೊಂಡಿದ್ದರು. ಚುನಾವಣೆ ಸಂದರ್ಭದಲ್ಲಿ ತನ್ವೀರ್ ಹಾಶ್ಮಿ ಮತ್ತು ಯತ್ನಾಳ್ ಅವರನ್ನು ನಮ್ಮ ಮನೆಯಲ್ಲೇ ಖುದ್ದು ಭೇಟಿ ಮಾಡಿಸಿದ್ದೇನೆ. ಒಟ್ಟಿಗೆ ಊಟ ಮಾಡಿದ್ದಾರೆ. ಇಬ್ಬರೂ ಹಲವು ವೇದಿಕೆ ಹಂಚಿಕೊಂಡಿದ್ದಾರೆ’ ಎಂದರು.

‘ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹಾಶ್ಮಿ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಇದ್ದರು ಎಂಬ ಒಂದೇ ಕಾರಣಕ್ಕೆ ಯತ್ನಾಳ್ ಅವರು, ಹಾಶ್ಮಿಯವರ ಫೇಸ್ಬುಕ್ನಲ್ಲಿರುವ ಚಿತ್ರಗಳನ್ನು ಇಟ್ಟುಕೊಂಡು ಐಸಿಸ್ ಜೊತೆ ನಂಟಿದೆ ಎಂದು ಅಪಪ್ರಚಾರ ಮಾಡಿ, ದ್ವೇಷ ಸಾಧಿಸುತ್ತಿರುವುದು ಖಂಡನೀಯ’ ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News