ಭಾವನಾತ್ಮಕ ತಂತುಗಳು

ಸಿನೆಮಾ, ನಾಟಕ ಮತ್ತು ಸಂಗೀತಗಳ ಯಶಸ್ಸು ಇರುವುದೇ ಅವು ಎಷ್ಟರಮಟ್ಟಿಗೆ ನಮ್ಮಲ್ಲಿ ಭಾವನೆಗಳನ್ನು ಹುಟ್ಟಿಸುವುದು ಎನ್ನುವುದರ ಆಧಾರದ ಮೇಲೆ. ದುಃಖವೋ, ಸಂತೋಷವೋ, ಆಕ್ರೋಶವೋ, ಆವೇಗವೋ, ಜಿಗುಪ್ಸೆಯೋ; ಎಂತದ್ದೋ, ಒಟ್ಟಾರೆ ಭಾವನೆಗಳನ್ನು ಹುಟ್ಟಿಸಲಿಲ್ಲವೆಂದರೆ ಅವುಗಳು ತಮ್ಮ ನಿರೂಪಣೆಯ ತಂತ್ರದಲ್ಲಿ ಸೋತಿವೆ ಎಂದು.
ಅದೇ ರೀತಿಯಲ್ಲಿ ಬೋಧಪ್ರದವಾದ, ವೈಚಾರಿಕವಾದ, ಭಾವನೆಗಳ ಬದಲಾಗಿ ಆಲೋಚನೆಗಳಿಗೆ ಹಚ್ಚುವಂತಹ ಸಿನೆಮಾ, ನಾಟಕಗಳಾದರೆ; ‘‘ಸಂದೇಶವೇನೋ ಇದೆ. ಆದರೆ ಕತೆನೇ ಇಲ್ಲ’’ ಎಂದುಬಿಡುತ್ತಾರೆ ಪ್ರೇಕ್ಷಕರು. ಅಂತಹವು ಯಶಸ್ಸು ಕಾಣುವುದು ಇಲ್ಲವೇ ಇಲ್ಲವೆನಿಸುವಷ್ಟು ತೀರಾ ಕಡಿಮೆ.
ಮನುಷ್ಯ ವಿಚಾರಗಳಿಗೆ ಬದಲಾಗಿ ಭಾವನೆಗಳಿಗೆ ಸೋಲುವುದು ತೀರಾ ಸಹಜ. ಈ ಭಾವನೆಗಳ ಹುಟ್ಟು, ಕೆಲಸ ಮತ್ತು ನಿಯಂತ್ರಣಗಳ ಬಗ್ಗೆ ಅರಿಯುವ ಅಗತ್ಯವಿದೆ. ಇವುಗಳ ಮೂಲ ಮತ್ತು ಚಟುವಟಿಕೆಗಳ ಬಗ್ಗೆ ನಾನಾ ಬಗೆಯ ವ್ಯಾಖ್ಯಾನಗಳಿವೆ. ಜೇಮ್ಸ್ ಲೇಂಜ್ ಸಿದ್ಧಾಂತದ ಪ್ರಕಾರ ಹೊರಗಿನಿಂದ ಆಗುವ ಪ್ರಚೋದನೆಗಳಿಗೆ ನೀಡುವ ಶರೀರದ ಪ್ರತಿಕ್ರಿಯೆಗಳೇ ಭಾವನೆಗಳ ಮೂಲ ಎಂದರೆ, ಕ್ಯಾನಾನ್ ಬಾರ್ಡ್ ಸಿದ್ಧಾಂತವು ನಮಗೆ ಸಿಗುವ ಪ್ರಚೋದನೆಗಳಿಗೆ ಸ್ಪಂದಿಸುವ ಅರಿವಿನಿಂದಾಗಿಯೇ ಭಾವನೆಗಳು ಹುಟ್ಟುವುದು ಎನ್ನುತ್ತದೆ.
ಆದರೆ ವಾಸ್ತವದಲ್ಲಿ ಭಾವನೆಗಳ ಮೂಲ ಯಾವುದೋ ಒಂದು ನಿರ್ದಿಷ್ಟ ಸಿದ್ಧಾಂತದಂತೆ ಅಥವಾ ವ್ಯಾಖ್ಯಾನದಂತೆ ರೂಪುಗೊಳ್ಳುವುದಲ್ಲ. ವಿವಿಧ ರೀತಿಯ ಸನ್ನಿವೇಶಗಳಲ್ಲಿ, ಪ್ರಸಂಗಗಳಲ್ಲಿ ನಾನಾ ಬಗೆಗಳಲ್ಲಿ ರೂಪುಗೊಳ್ಳುತ್ತವೆ. ಒಟ್ಟಾರೆ ಪ್ರಚೋದನೆ ಮತ್ತು ಸ್ಮರಣೆಗಳೆರಡೂ ನೀಡುವ ಅನುಭವದ ಪ್ರಭಾವ ಭಾವನೆಗಳಾಗುತ್ತವೆ. ದೇಹಕ್ಕೆ ನೋವಾದಾಗಲೂ, ಹಿತವಾದಾಗಲೂ ಭಾವನೆಗಳು ಹುಟ್ಟುವಂತೆ, ಯಾವುದೋ ಒಂದು ತಿಳುವಳಿಕೆ ಅಥವಾ ಅರಿವು ಉಂಟಾದಾಗಲೂ ಸಂತೋಷವೋ, ನಿರಾಳವೋ, ಸಂಕಟವೋ ಆಗುವ ಮೂಲಕ ಆಯಾ ಭಾವನೆಗಳು ಹುಟ್ಟುತ್ತವೆ.
ಒಟ್ಟಾರೆ ಭಾವನೆಗಳು ಮುನ್ನಡೆಸುವ ಶಕ್ತಿಯಾಗಿ ಅನುಭವಕ್ಕೆ ಬರುತ್ತದೆ. ಅವು ನಾನಾ ಬಗೆಯ ಉದ್ದೇಶಗಳನ್ನು ನೆರವೇರಿಸುತ್ತವೆ. ವ್ಯಕ್ತಿ ತನ್ನ ಗುರಿ ಸಾಧಿಸಲು ಭಾವನಾತ್ಮಕವಾದ ಒಲವನ್ನು ಹೊಂದಿದ್ದರೆ ಮಾತ್ರವೇ ಸಾಧ್ಯವಾಗುವುದು. ಹಾಗೆಯೇ ಯಾರೊಬ್ಬರು ಭಯಗೊಂಡಾಗ ಹೆಚ್ಚು ಎಚ್ಚರಿಕೆಯಿಂದ ಎದುರಾಗುವ ಬೆದರಿಕೆಗಳನ್ನು ನಿವಾರಿಸಿಕೊಳ್ಳುತ್ತಾರೆ. ವ್ಯಕ್ತಿಗತವಾದ, ಕೌಟುಂಬಿಕವಾದ ಮತ್ತು ಸಾಮಾಜಿಕವಾದ ಸಂಬಂಧಗಳನ್ನು ಹೊಂದುವುದಕ್ಕೂ ಭಾವನಾತ್ಮಕವಾದ ಪ್ರೇರಣೆ ಇರಲೇ ಬೇಕು. ರಕ್ತಸಂಬಂಧ ಎಂದೋ, ವೃತ್ತಿ ಸಂಬಂಧವೆಂದೋ ಜೊತೆಯಲ್ಲಿರುವುದು ಅನಿವಾರ್ಯದ ಬಂಧನವೇ ಆಗಿರುತ್ತದೆ. ಆದರೆ ಯಾವುದೇ ರೀತಿಯ ಸಂಬಂಧವಾದರೂ ಅದು ಭಾವನಾತ್ಮಕವಾಗಿ ಇದ್ದರೆ ಮಾತ್ರವೇ ಅದು ಪರಿಣಾಮಕಾರಿಯಾಗಿಯೂ, ಆಪ್ತವಾಗಿಯೂ ಇರುವುದು. ಗಮನಿಸುವುದಾದರೆ, ಗಂಡ ಹೆಂಡತಿ ಸಂಬಂಧ ಎನ್ನುವುದು ಕೌಟುಂಬಿಕ ಮತ್ತು ವ್ಯಕ್ತಿಗತ ಎನ್ನುವುದಕ್ಕಿಂತ ಅದು ಸಾಮಾಜಿಕ ಸಂಬಂಧವೇ ಆಗಿದೆ. ಅದು ಭಾವನಾತ್ಮಕವಾಗಿ ಇದ್ದರೆ ಮಾತ್ರವೇ ಕುಟುಂಬ ಮತ್ತು ಸಮಾಜ ಹಚ್ಚಿರುವ ಹಣೆಪಟ್ಟಿಗಿಂತ ಮಿಗಿಲಾಗಿ ಆಪ್ತತೆಯ ಸಂಬಂಧವನ್ನು ಹೊಂದಲು ಸಾಧ್ಯ. ಇಲ್ಲವೇ ಅನಿವಾರ್ಯವಾಗಿ ಕಟ್ಟಿರುವ ಹಣೆಪಟ್ಟಿಯನ್ನು ನಿಭಾಯಿಸಿಕೊಂಡು ಹೋಗಲಷ್ಟೇ ಹೆಣಗಾಡುತ್ತಾರೆ. ಹಾಗೆಯೇ ಸೋದರ ಸಂಬಂಧಗಳಲ್ಲಿಯೂ ಕೂಡಾ. ಎಷ್ಟೋ ಬಾರಿ ಮುಕ್ತವಾಗಿ ಆತ್ಮೀಯವಾಗಿ ತಮಗೆ ಯಾರೊಂದಿಗೆ ಭಾವನಾತ್ಮಕ ಸಂಬಂಧವು ಇರುವುದೋ ಅವರೊಂದಿಗೆ ವ್ಯಕ್ತಿಗಳು ತೆರೆದುಕೊಳ್ಳುತ್ತಾರೆ. ರಕ್ತಸಂಬಂಧದವರೊಡನೆ ಅನಿವಾರ್ಯವಾದ ಜೊತೆಗೂಡುವಿಕೆ ಇರುತ್ತದೆ. ಒಟ್ಟಾರೆ ಭಾವನಾತ್ಮಕವಾದ ತಂತುಗಳೇ ವ್ಯಕ್ತಿಯ ಬದುಕಿನಲ್ಲಿ ಪರಿಣಾಮಕಾರಿಯಾದ ಆಪ್ತತೆಯನ್ನು ಮತ್ತು ಆತ್ಮೀಯತೆಯನ್ನು ಒದಗಿಸುವ ಪ್ರೇರಣೆಯಾಗುತ್ತವೆ.
ಇನ್ನು ಭಾವನಾತ್ಮಕವಾದ ಒಲವು ನಿಲುವುಗಳ ಆಧಾರದಲ್ಲಿಯೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯೊಡನೆ ಸಂವಹನೆ ನಡೆಸುವುದು. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯೊಡನೆ ಯಾವ ರೀತಿಯಲ್ಲಿ ತನ್ನ ವಿಷಯಗಳನ್ನು ರವಾನೆ ಮಾಡುತ್ತಾನೆ ಎಂಬುದು ಅವನ ಭಾವನಾತ್ಮಕವಾದ ಪ್ರಭಾವವೇ ಆಗಿರುತ್ತದೆ. ಸಹಾನುಭೂತಿಯಿಂದ ವರ್ತಿಸುತ್ತಾನೋ, ಕರುಣೆಯಿಂದ ಕಾಣುತ್ತಾನೋ, ತಿರಸ್ಕಾರದಿಂದ ದೂರುತ್ತಾನೋ; ಏನೇ ಆದರೂ ವ್ಯಕ್ತಿಯಲ್ಲಿ ಹುಟ್ಟುವ ಅಥವಾ ಆ ಹೊತ್ತಿಗೆ ಕ್ರಿಯಾತ್ಮಕವಾಗಿರುವ ಭಾವನೆಗಳೇ ಕಾರ್ಯ ನಿರ್ವಹಿಸುವುದು. ವ್ಯಕ್ತಿಗತವಾಗಿಯಾಗಲಿ, ಕೌಟುಂಬಿಕವಾಗಿಯಾಗಲಿ ಅಥವಾ ಸಾಮಾಜಿಕವಾಗಿಯಾಗಲಿ ಪರಸ್ಪರ ಸಂವಹನ ನಡೆಸುವ ಬಗೆಯೂ ಭಾವನಾತ್ಮಕವಾದ ತಂತುಗಳ ಪರಿಣಾಮಗಳೇ ಕೆಲಸ ಮಾಡುವುದು.
ಇಷ್ಟೇ ಅಲ್ಲದೆ ಇವೇ ಭಾವನೆಗಳು ನಮ್ಮ ಒತ್ತಡ ನಿರ್ವಹಣೆ, ಪರಿಸ್ಥಿತಿಗೆ ಮತ್ತು ಪರಿಸರಕ್ಕೆ ಹೊಂದಾಣಿಕೆ ಮತ್ತು ಮನುಷ್ಯನೆಂದು ಒಪ್ಪಿಕೊಂಡಿರುವ ಗುರುತಿನ ನಿರ್ವಹಣೆಯನ್ನೂ ಕೂಡಾ ಮಾಡುವುದು. ಎಲ್ಲದಕ್ಕಿಂತ ಮುಖ್ಯವಾಗಿ ಮನುಷ್ಯ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡು ಅಥವಾ ಓಡಿ ಹೋಗು ಎನ್ನುವ ನೈಸರ್ಗಿಕ ಸ್ವಭಾವವು ಅವಲಂಬಿತವಾಗಿರುವುದೇ ಈ ಭಾವನೆಗಳಿಂದ.
ಭಾವನೆಗಳ ಮೂಲಗಳು ಅತ್ಯಂತ ತೀವ್ರವಾದ ಉಳಿಯುವ ಬಯಕೆಯೇ ಆಗಿರುತ್ತದೆ. ಮನಶಾಸ್ತ್ರೀಯವಾಗಿ ಹೇಳುವುದಾದರೆ, ಜೀವನದ ಪರಮೋದ್ದೇಶವೆಂದರೆ ಜೀವಿಸುವುದು. ಹೇಗೆ ಜೀವಿಸುವುದು? ಸಂತೋಷವಾಗಿ, ನೆಮ್ಮದಿಯಿಂದ ಜೀವಿಸುವುದು! ಅಷ್ಟೇ. ಈ ಆಸೆಯ ಭಾವುಕತೆಯನ್ನು ತೃಪ್ತಿ ಪಡಿಸಿಕೊಳ್ಳಲೆಂದೇ ವ್ಯಕ್ತಿ ಎಲ್ಲಾ ಬಗೆಯ ಪ್ರಯತ್ನಗಳನ್ನು ಮಾಡುತ್ತಾನೆ. ಭಾವುಕತೆಯೆಂದರೇನೇ ಹಸಿವು ಅಥವಾ ದಾಹ. ಅದು ಸದಾ ತೃಪ್ತವಾಗಲು ಕಾಯುತ್ತಿರುತ್ತದೆ. ದುಃಖವಾದರೆ ಅತ್ತು ತೃಪ್ತವಾಗಬೇಕು. ಸಂತೋಷವಾದರೆ ನಕ್ಕು ತೃಪ್ತವಾಗಬೇಕು. ಕೋಪವೆಂಬುದನ್ನು ಕೂಡಾ ಜಗಳವಾಡಿ ತೃಪ್ತಿಪಡಿಸಿಕೊಳ್ಳಬೇಕು. ಹೀಗೆ ಭಾವನೆಯ ತಂತುಗಳು ಮಿಡಿಯುವುದು ತೃಪ್ತಿಗಾಗಿ. ಮನಸ್ಸಿನ ಆಳದಲ್ಲಿ ಹೊರಗಿನ ಆಲೋಚನೆಗಳಿಗೇ ಎಟಕದಂತೆ ಯಾವುದ್ಯಾವುದೋ ತಂತ್ರಗಳನ್ನು, ಸಿದ್ಧಾಂತಗಳನ್ನು ಮತ್ತು ಆಲೋಚನೆಗಳನ್ನು ಹೊಂದಿರುತ್ತವೆ. ಅವೆಲ್ಲವೂ ಭಾವನಾತ್ಮಕ ತಂತುಗಳ ತೃಪ್ತಿಗಾಗಿಯೇ.