ಅರಿವಿನಿಂದ ಆರಂಭ

ಮನಸ್ಸಿನ ಆರೋಗ್ಯದ ನಿರಂತರತೆಯನ್ನು ಕಾಪಾಡಿಕೊಳ್ಳಲು ಬೇಕಾದ ಅಂಶಗಳಲ್ಲಿ ಮೊದಲು ಅಗತ್ಯವಾಗಿರುವುದು ಅರಿವು. ಸರಳವಾಗಿ ಅರಿವು ಎಂದರೆ ತಿಳಿಯದೇ ಇರುವುದನ್ನು ತಿಳಿಯುವುದು. ಮಾಹಿತಿ ಅಥವಾ ಜ್ಞಾನವನ್ನು ಹೊಂದುವುದು. ಎಲ್ಲಾ ತಿಳುವಳಿಕೆಗಳೂ ಕೆಲವು ಮೂಲಭೂತ ಗುಣಗಳನ್ನು ಹೊಂದಿರಬೇಕಾಗಿರುತ್ತದೆ.
ಮೊದಲನೆಯದಾಗಿ ತಮಗೆ ಯಾವುದೋ ಒಂದು ಮಾಹಿತಿ ಅಥವಾ ಜ್ಞಾನ ಇಲ್ಲ ಎಂಬ ತಿಳುವಳಿಕೆ ಬೇಕು. ಅದೇ ಒಂದು ತಿಳುವಳಿಕೆ. ನಂತರ ಅದನ್ನು ಪಡೆಯುವ ಆಸಕ್ತಿ ಮತ್ತು ತೆರೆದ ಮನಸ್ಸು ಇರಬೇಕು. ನಂತರ ಯಾವ ಯಾವ ಮೂಲದಿಂದ ಆ ತಿಳುವಳಿಕೆ ಬಂದರೂ ಅದನ್ನು ಆದರಿಸುವ, ಸ್ವೀಕರಿಸುವ ಮತ್ತು ತಮ್ಮದಾಗಿಸಿಕೊಳ್ಳುವ ಮನಸ್ಥಿತಿ ಹೊಂದಿರಬೇಕು. ಈ ಅಂಶಗಳ ಬಗ್ಗೆ ಸ್ಪಷ್ಟತೆ ಮತ್ತು ತವಕ (ಪ್ಯಾಶನ್) ಇದ್ದಲ್ಲಿ ಅರಿವನ್ನು ಹೊಂದಲು ಸಾಧ್ಯ.
ಅರಿವನ್ನು ತಮ್ಮದಾಗಿಸಿಕೊಳ್ಳುವ ಆಸಕ್ತಿಯನ್ನು ತಮ್ಮದೇ ಸಹಜ ತಿಳುವಳಿಕೆಯ ಭಾಗವಾಗಿಸಿಕೊಳ್ಳದ ಹೊರತು ಅರಿವು ಬರಿಯ ಕುತೂಹಲವಾಗಿಯೇ ಉಳಿದಿರುತ್ತದೆ. ಆಸಕ್ತಿ ಎಂಬುದು ಕುತೂಹಲಕ್ಕಿಂತಲೂ ಹಿರಿದು ಮತ್ತು ಭಿನ್ನ. ಅಲ್ಪ ಕಾಲದ ಆಯಸ್ಸುಳ್ಳ ಕುತೂಹಲ ಎಂಬುದು ಪ್ರಾಯಶಃ ಪ್ರಾರಂಭಿಕ ಎಳೆಯಾಗಲು ಸಾಧ್ಯ. ಆದರೆ ಅದೇ ಆಸಕ್ತಿ ಅಲ್ಲ. ಆಸಕ್ತಿ ದೀರ್ಘಕಾಲದ್ದು. ಪಡೆಯುವ ಹಂಬಲದ್ದು. ಸಾಧ್ಯವಾದ ಮೂಲಗಳಿಂದ ಮತ್ತು ಎಡೆಗಳಿಂದ ನಿರೀಕ್ಷಿಸುತ್ತಾ ಹುಡುಕಾಡುವಂತಹದ್ದು. ಆಸಕ್ತಿ ತೀವ್ರವಾಗಿದ್ದು ಭಾವುಕವಾಗಿ ಅದರ ಬಗ್ಗೆ ತುಡಿತವನ್ನು, ತವಕವನ್ನು ಹೊಂದಿರುತ್ತಾರೆ. ಅದನ್ನೇ ಇಂಗ್ಲಿಷ್‌ನಲ್ಲಿ ಪ್ಯಾಶನ್ ಎನ್ನುವುದು. ಅದನ್ನು ಕನ್ನಡದಲ್ಲಿ ತೀವ್ರ ಆಸಕ್ತಿ ಅಥವಾ ಗಾಢ ಒಲವು ಎನ್ನುವುದಾದರೂ, ಸರಿಯಾದ ಪದ ಅಲ್ಲ ಎಂದು ನನ್ನ ಅಭಿಪ್ರಾಯ.
ಒಟ್ಟಾರೆ ಯಾವುದೋ ಒಂದು ಹವ್ಯಾಸ, ಪ್ರಾಣಿಗಳನ್ನು ಸಾಕುವುದು, ನಾಣ್ಯ ಅಥವಾ ಅಂಚೆಚೀಟಿ ಸಂಗ್ರಹಣೆ, ಕಲೆ, ಸಾಹಿತ್ಯ, ನೃತ್ಯ, ಸಂಗೀತವೇ ಮೊದಲಾದ ಲಲಿತ ಕಲೆಗಳಲ್ಲಿ ಇರುವಂತಹ ಪ್ಯಾಶನ್ ಅಥವಾ ತೀವ್ರವಾದ ಆಸಕ್ತಿಯು ನಮ್ಮ ಮನಸ್ಸಿನ ಒಲವು ಮತ್ತು ನಿಲುವುಗಳನ್ನು ರೂಪಿಸುವಂತಹ ಅರಿವನ್ನು ಹೊಂದುವುದರಲ್ಲಿಯೂ ಇರಬೇಕಾಗುತ್ತದೆ.
ನಮ್ಮ ಮನಸ್ಸಿನ ಆರೋಗ್ಯವನ್ನು ಹೊಂದುವುದರಲ್ಲಿ ಇರಬೇಕಾದ ಅರಿವು ಯಾವುವು ಮತ್ತು ಎಂತಹ ಅರಿವನ್ನು ಹೊಂದಿರಬೇಕೆಂಬುದನ್ನು ಗಮನಿಸಬೇಕು.
ಮೊದಲನೆಯದಾಗಿ ಈ ಜಗತ್ತು, ವ್ಯಕ್ತಿಯಾಗಿ ನಾನು ಮತ್ತು ನನ್ನಂತೆ ಇತರರು, ಮನಸ್ಥಿತಿಗಳು, ಪರಿಸ್ಥಿತಿಗಳು ಅಚ್ಚು ಹೊಡೆದಿರುವಂತೆ ಅಥವಾ ಎರಕ ಹೊಯ್ದಿರುವಂತೆ ಸಿದ್ಧಮಾದರಿಯ ಚೌಕಟ್ಟುಗಳಲ್ಲಿ ಇಲ್ಲ ಎಂಬುದು.
ವ್ಯಕ್ತಿಯಾಗಿ ನಾನಾಗಲಿ, ಇತರರಾಗಲಿ; ಪರಿಪೂರ್ಣರಲ್ಲ, ಪರಿಪಕ್ವರಲ್ಲ, ಒಳ್ಳೆಯ ಅಥವಾ ಕೆಟ್ಟ ಎಂಬ ಚೌಕಟ್ಟುಗಳಲ್ಲಿ ಹೊಂದುವಂತಹವರಲ್ಲ. ಕಪ್ಪು ಮತ್ತು ಬಿಳುಪಿನ ನಿರ್ಣಾಯಕ ಬದಿಗಳಲ್ಲದೆ ಬೂದುವಲಯದಲ್ಲಿ ಇದ್ದೇವೆ ಎಂಬ ಅರಿವು. ಯಾವಾಗ ಒಳ್ಳೆಯ ಅಥವಾ ಕೆಟ್ಟ ಎಂಬ ಎರಡು ಸಿದ್ಧ ಮಾದರಿಯ ಚೌಕಟ್ಟುಗಳಲ್ಲಿ ಬಂಧಿತರಾಗುವರೋ ಅವರು ಒತ್ತಡಕ್ಕೆ, ಆತಂಕಕ್ಕೆ ಒಳಗಾಗುತ್ತಾರೆ. ಭಾವನಾತ್ಮಕವಾಗಿ ಬಳಲುತ್ತಾರೆ. ಬೂದುವಲಯದ ಅರಿವೇ ನಮ್ಮನ್ನು ನಾವೂ, ನಾವು ಇತರರನ್ನು ನಿರ್ಣಾಯಕವಾಗಿ ನೋಡದೆಯೇ ಅನುಕಂಪದಿಂದ ಅಥವಾ ನಿರ್ಬಂಧಗಳಿಲ್ಲದೇ ನೋಡಲು ಸಾಧ್ಯವಾಗುತ್ತದೆ. ತಪ್ಪುಗಳನ್ನು ಕ್ಷಮಿಸಲು ಸಾಧ್ಯವಾಗುವುದಲ್ಲದೆ, ಹೊಸ ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ನಿರ್ಮಾಣ ಮಾಡುವುದರಲ್ಲಿ ಆಸಕ್ತಿ ತೋರಲು ಸಾಧ್ಯವಾಗುತ್ತದೆ. ಬೂದುವಲಯದ (ಗ್ರೇ ಏರಿಯಾ) ಅರಿವು ಸಹನೆ, ಕ್ಷಮೆ ಮತ್ತು ನಿರಾಳತೆಗೆ ದಾರಿ ಮಾಡಿಕೊಡುತ್ತದೆ.
ಹಾಗೆಯೇ ತನ್ನದೇ ಆಗಲಿ, ಇತರರದ್ದೇ ಆಗಲಿ ಮನಸ್ಥಿತಿ ಬದಲಾವಣೆಗೆ ಒಳಪಡುವಂತಹದ್ದು, ಪರಿಸ್ಥಿತಿ, ಪರಿಸರ, ಪ್ರಕೃತಿ; ಎಲ್ಲವೂ ಬದಲಾವಣೆಗೆ ಒಳಪಡುತ್ತಿರುತ್ತವೆ ಎಂಬ ಅರಿವು. ಯಾವ ಪ್ರಕೃತಿ ರಮ್ಯ ಮನೋಹರವಾಗಿದ್ದು ಸಂತೋಷದಾಯಕವಾಗಿರುತ್ತದೆಯೋ ಅದೇ ನಮಗೆ ರುದ್ರ ಬೀಭತ್ಸಮಯವಾಗಿ ಬದಲಾಗುತ್ತದೆ. ಪ್ರಕೃತಿಯಲ್ಲಿ ಎಲ್ಲಾ ಕಾಲವೂ ವಸಂತವೇ ಆಗಿರುವುದಿಲ್ಲ. ಇಂತಹ ಬದಲಾವಣೆ ಅಗತ್ಯ, ಅನಿವಾರ್ಯ, ಮಿಗಿಲಾಗಿ ಸ್ವಾಭಾವಿಕ.
ಪೋಷಕರು ತಮ್ಮ ಮಕ್ಕಳ ಆದ್ಯತೆಯಲ್ಲಿ ಮೊದಲಿಗರಾಗಿರುತ್ತಾರೆ. ನಂತರ ಮಕ್ಕಳು ಬೆಳೆದಂತೆ ಅವರ ಆದ್ಯತೆಗಳು ಬದಲಾಗುತ್ತವೆ. ಸದಾ ಅವರ ಪ್ರಥಮ ಆದ್ಯತೆಯಲ್ಲಿಯೇ ತಾವಿರಬೇಕು ಅಥವಾ ಇರುತ್ತೇವೆ ಎಂಬ ಭ್ರಮೆ ಪೋಷಕರಿಗೆ ಸಲ್ಲದು. ಅವರ ಪಾಲಿನ ಕರ್ತವ್ಯಗಳನ್ನು ಅವರು ಮಾಡಬಹುದಾದರೂ ಆಸಕ್ತಿ, ಆದ್ಯತೆ ಸಹಜವಾಗಿ ಬದಲಾಗುತ್ತದೆ. ಪ್ರಕೃತಿಯಲ್ಲಿನ ಬದಲಾವಣೆಯಂತೆ ಮನಸ್ಸಿನಲ್ಲಿಯೂ, ವರ್ತನೆಯಲ್ಲಿಯೂ ಬದಲಾವಣೆ ಸ್ವಾಭಾವಿಕ.
ಯಾರೊಬ್ಬರೂ ಯಾರೊಬ್ಬರಿಗೂ ಇಪ್ಪತ್ತನಾಲ್ಕು ಗಂಟೆಗಳ ನಿರಂತರ ಪ್ರೇಮದ ದೃಷ್ಟಿ, ಒಲವು, ಸ್ವೀಕಾರ ಮನೋಭಾವವನ್ನೇ ಹೊಂದಿರಲು ಆಗದು. ಅವುಗಳಲ್ಲಿ ಏರಿಳಿತ, ವ್ಯತ್ಯಯ ಮತ್ತು ವ್ಯತ್ಯಾಸಗಳಾಗುತ್ತವೆ. ಅದನ್ನು ಸಹಜವೆಂದು ಪರಿಗಣಿಸುವ ಅರಿವು ಆಯಾ ಹೊತ್ತಿನಲ್ಲಿ ಉಂಟಾಗುವ ಭಾವನೆಗಳನ್ನು ನಿರ್ವಹಿಸಲು ಮತ್ತು ಉಚಿತವಾಗಿ ವರ್ತಿಸಲು ನೆರವಾಗುತ್ತದೆ.
ಆಂಬಿಗ್ವಿಟಿ ಟಾಲರೆನ್ಸ್ ಅಥವಾ ಅಸ್ಪಷ್ಟತೆಯ ತಾಳಿಕೆಯನ್ನು ಹೊಂದಲು ಬಹಳ ನೆರವಾಗುತ್ತದೆ. ಉದಾಹರಣೆಗೆ ಪೋಷಕರು ಮಕ್ಕಳ ಮೇಲೆ ಅಪಾರವಾದ ಪ್ರೇಮ ಮತ್ತು ಕಾಳಜಿಯನ್ನು ಹೊಂದಿದ್ದರೂ ಸಿದ್ಧ ಮಾದರಿಯ ಚೌಕಟ್ಟುಗಳಲ್ಲಿಯೇ ಅವರ ಬದುಕು ಮತ್ತು ಭವಿಷ್ಯವನ್ನು ನೋಡುವ ಕಾರಣದಿಂದ ಅವರ ಮೆದುಳಿನ ಅಮಿಗ್ದಲ ಎಚ್ಚರಿಕೆಯ ಗಂಟೆ ಮೊಳಗುವ ಕಾರಣದಿಂದ ಆತಂಕ ಮತ್ತು ಒತ್ತಡಗಳಿಗೆ ಒಳಗಾಗುತ್ತಾರೆ. ಅವರ ಭಯ, ಒತ್ತಡ ಮತ್ತು ಆತಂಕವನ್ನು ಮಕ್ಕಳಿಗೆ ರವಾನಿಸುತ್ತಾರೆ. ಇದರಿಂದ ಮಕ್ಕಳೂ ತಮ್ಮ ಪೋಷಕರಂತೆಯೇ ಚೌಕಟ್ಟುಗಳಲ್ಲಿಯೇ ಚಿಂತಿಸುವ, ಯೋಜಿಸುವ ರೂಢಿಯಾಗಿ ಒಳಿತು ಕೆಡುಕು, ಲಾಭ ನಷ್ಟ, ಪಾಪ ಪುಣ್ಯ, ಸ್ವರ್ಗ ನರಕಗಳಂತೆ ಎರಡು ವಿರುದ್ಧದ ಚೌಕಟ್ಟುಗಳಲ್ಲಿ ಬಂಧಿತರಾಗಿ ಈ ಎರಡರಿಂದ ಹೊರತಾಗಿ ಯಾವುದನ್ನೂ ಒಪ್ಪಿಕೊಳ್ಳಲಾಗದೆ ಸಂಕೀರ್ಣತೆಯಲ್ಲಿ ಬಳಲುತ್ತಾ ಸಂಕಷ್ಟಗಳಿಗೆ ಒಳಗಾಗುತ್ತಾರೆ. ಸ್ಪಷ್ಟವಾಗಿ ಒಂದು ಅಂಶ ಅಥವಾ ವಿಷಯದಿಂದ ಮತ್ತೊಂದು ಸಿದ್ಧಾಂಶ ಅಥವಾ ವಿಷಯಗಳಿಗೆ ಹೋಗದಿದ್ದರೆ ವಿಹ್ವಲಗೊಳ್ಳುತ್ತಾರೆ. ತಾಳಿಕೊಳ್ಳುವುದಿಲ್ಲ. ಆದರೆ ಬೂದುವಲಯದ ಅರಿವು ಅಸ್ಪಷ್ಟತೆಯನ್ನು ಒಪ್ಪುವ ಮತ್ತು ತಾಳಿಕೊಳ್ಳುವ ಸಾಮರ್ಥ್ಯವನ್ನು ನೀಡುತ್ತದೆ. ಇದು ತಮ್ಮ ಮೌಲ್ಯವನ್ನು ಬಿಟ್ಟುಕೊಡುವುದಲ್ಲ. ಆದರೆ ಭಾವೋದ್ರೇಕಕ್ಕೆ ಒಳಗಾಗದೆ ವಿಷಯಗಳನ್ನು ಗಮನಿಸುವ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಉಪಚರಿಸುವ ಸಾಮರ್ಥ್ಯವನ್ನು ಹೊಂದುವುದು.
ಭಾವನೆಗಳು ಸಂಕೀರ್ಣವಾದವು. ಏಕಕಾಲದಲ್ಲಿ ಹಲವು ಭಾವನೆಗಳು ಮೂಡುವವು. ವಯಸ್ಸಾಗಿ ದೀರ್ಘಕಾಲದಿಂದ ಹಾಸುಗೆ ಹಿಡಿದಿರುವ ತಾಯಿ ಮರಣಿಸಿದಾಗ ದುಃಖವೂ ಆಗುತ್ತದೆ, ಅದೇ ರೀತಿಯಲ್ಲಿ ಸಮಾಧಾನವೂ ಆಗುತ್ತದೆ. ಮನಸ್ಸಿನ ಯೋಚನೆ ಮತ್ತು ಯೋಜನೆಗಳು ಯಾವುದೋ ಒಂದು ಸಿದ್ಧ ಭಾವುಕ ಚೌಕಟ್ಟಿನಲ್ಲಿಯೂ ಇರಲು ಸಾಧ್ಯವಾಗದು. ರಸ್ತೆ ಅಪಘಾತಕ್ಕೆ ಒಳಗಾದ ವ್ಯಕ್ತಿ ತನ್ನ ಕಾಲು ಮುರಿದ ನೋವಿನಲ್ಲಿದ್ದರೂ ತನ್ನ ಜೀವ ಉಳಿದ ಸಂತಸವನ್ನು ಪಡುವಂತೆ. ಈ ಬೂದುವಲಯ ಮನುಷ್ಯನ ಭಾವುಕತೆಯ, ಮನಸ್ಸಿನ ಪರಿಸ್ಥಿತಿ ಮತ್ತು ಸಂಬಂಧಗಳಲ್ಲಿ ಸಹಜವಾದದ್ದು. ಬೂದುವಲಯದ ಚಟುವಟಿಕೆಗಳ ವ್ಯಾಪ್ತಿ ಅತ್ಯಂತ ಹೆಚ್ಚಿನದ್ದಾಗಿರುವುದರಿಂದಲೇ ಬದಲಾವಣೆ, ರೂಪಾಂತರಗಳು, ಪಲ್ಲಟಗಳು ಅತ್ಯಂತ ಸಹಜ ಮತ್ತು ಸ್ವಾಭಾವಿಕ.
ವ್ಯಕ್ತಿಗತ ಸಂಬಂಧಗಳಲ್ಲಿ ಘರ್ಷಣೆ ಮತ್ತು ಸಾಮಾಜಿಕ ಸಂಘರ್ಷಗಳಿಗೂ ಕಾರಣವೇ ಬೂದುವಲಯದ ಅರಿವು ಇಲ್ಲದಿರುವುದು, ಬದಲಾವಣೆಯನ್ನು ಒಪ್ಪದಿರುವುದು, ಕಪ್ಪು ಬಿಳಿ ಮತ್ತದರ ನಡುವಿನ ಬೂದುವಲಯ ನಮ್ಮ ಅಸ್ತಿತ್ವದಲ್ಲಿ ಇದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದಿರುವುದು. ಅಸ್ಪಷ್ಟತೆಯ ತಾಳಿಕೆಗೆ ಮೂಲವೆಂದರೆ ಅರಿವು.