ಯುವಜನಾಂಗಕ್ಕೆ ಭೂತಬಾಧೆ
A ghost haunting the youthಬಹಳಷ್ಟು ಯುವ ಪೀಳಿಗೆಯವರು ಸುಮಾರು ಇಪ್ಪತ್ತು ಇಪ್ಪತ್ತೈದು ವಯಸ್ಸಿನ ನಂತರ ತಮ್ಮ ಬೌದ್ಧಿಕ ಮತ್ತು ಇತರ ಆಯಾಮಗಳಲ್ಲಿ ಬೆಳವಣಿಗೆಯನ್ನು ನಿಲ್ಲಿಸಿಕೊಂಡುಬಿಡುತ್ತಾರೆ. ಓದು ಮೊಟಕಾಗಿದ್ದರೆ ಮುಂದುವರಿಸಲ್ಲ, ಸಂಪಾದನೆಗೆ ತಾವು ಎಲ್ಲಿಯಾದರೂ ಕೆಲಸ ಕಂಡುಕೊಂಡಿದ್ದರೆ ಬರಬೇಕಾಗಿರುವಷ್ಟು ಹಣದ ಬಗ್ಗೆ ಮಾತ್ರ ಆಲೋಚಿಸುತ್ತಾರೆ. ತಮ್ಮ ಆರ್ಥಿಕ ಮತ್ತು ಉದ್ಯಮಶೀಲತೆಯ ಸಾಧ್ಯತೆಗಳ ಬಗ್ಗೆ ಕೂಡಾ ಆಲೋಚನೆ ಮಾಡುವುದಿಲ್ಲ. ಮದುವೆಯಾಗಬೇಕು, ಮನೆ ಕಟ್ಟಬೇಕು, ಗಾಡಿ ತೆಗೆದುಕೊಳ್ಳಬೇಕು, ಮನೆಯಲ್ಲಿ ತಂಗಿಯದ್ದೋ ಅಥವಾ ಅಕ್ಕನದ್ದೋ ಮದುವೆ ಮಾಡಬೇಕು; ಇತ್ಯಾದಿಗಳ ಹೊಣೆಗಾರಿಕೆಯನ್ನಷ್ಟೇ ತಮ್ಮದು ಎಂದುಕೊಂಡು ಹೊಸ ಭಾಷೆ ಕಲಿಯುವುದೋ, ಶಿಕ್ಷಣ, ಸ್ವಾವಲಂಬಿ ಉದ್ಯೋಗ, ಉದ್ಯಮ, ಪ್ರತಿಭೆ, ಕೌಶಲ್ಯ ಇತ್ಯಾದಿಗಳಲ್ಲಿ ಸಾಧ್ಯತೆಗಳನ್ನು ಕಂಡುಕೊಳ್ಳುವುದೋ ಮಾಡುವುದಿಲ್ಲ.
ತುಂಬಾ ಬೆರಳೆಣಿಕೆಯಷ್ಟೇ ಯುವಜನ ತಮ್ಮ ಸಾಧ್ಯತೆಗಳನ್ನು ಕಂಡುಕೊಳ್ಳುವ ಸಾಹಸ ಮಾಡುತ್ತಾರೆ.
ಅವರು ಯಾಕೆ ತಮ್ಮ ವ್ಯಕ್ತಿತ್ವ ಮತ್ತು ಬದುಕಿನ ಮಟ್ಟವನ್ನು ಉತ್ತಮಗೊಳಿಸಿಕೊಳ್ಳುವ ಅಥವಾ ವಿಸ್ತರಿಸಿಕೊಳ್ಳುವ ಆಲೋಚನೆ ಮಾಡುವುದಿಲ್ಲ ಅಥವಾ ಅಂತಹ ಪ್ರಯತ್ನಗಳನ್ನು ಮಾಡುವ ಗೋಜಿಗೇ ಹೋಗುವುದಿಲ್ಲ ಎಂದು ನೋಡಿದರೆ ಮೂಲ ಕಾರಣ ಬಹುಪಾಲು ಅವರ ಪೋಷಕರು ಅವರನ್ನು ಬೆಳೆಸಿದ ರೀತಿ ಮತ್ತು ಬಿತ್ತಿದ ಆಲೋಚನೆಗಳನ್ನು ಗುರುತಿಸಬಹುದಾಗಿರುತ್ತದೆ.
ಬಹುಪಾಲು ಹಿರಿಯರು ತಮ್ಮ ಮಕ್ಕಳು ಅಥವಾ ಮುಂದಿನ ಪೀಳಿಗೆಯವರು ವಿಕಾಸ ಹೊಂದಿದ್ದಾರೆ ಮತ್ತು ಪ್ರಗತಿಪರವಾಗಿರುತ್ತಾರೆ ಎಂಬ ಕಾಲದ ನಿಯಮವನ್ನೇ ಮರೆತಿರುತ್ತಾರೆ. ತಮ್ಮ ಪೀಳಿಗೆಯ ಸಂಪ್ರದಾಯವಾದವನ್ನೇ (Generational Conservatism) ಮುಂದಿಟ್ಟು ಅದರಂತೆ ಅವರನ್ನು ರೂಪಿಸಲು ಯತ್ನಿಸುತ್ತಾರೆ. ತಮ್ಮ ಕಾಲದ ಮೌಲ್ಯ ಮತ್ತೊಂದು ಕಾಲಕ್ಕೆ ಬದಲಾಗುತ್ತದೆ ಎಂಬ ಸಾಮಾನ್ಯವಾದ ಕಾಲಘಟ್ಟಗಳ ಬದಲಾವಣೆಯ ಅರಿವನ್ನು ಹೊಂದಿರುವುದಿಲ್ಲ.
ಮಕ್ಕಳ ಮನಸ್ಥಿತಿ ಮತ್ತು ವ್ಯಕ್ತಿತ್ವ ರೂಪುಗೊಳ್ಳುವ ಅವಧಿಯಲ್ಲಿ (Formation period) ಅವರಿಗೆ ಬೆಳವಣಿಗೆಯ ಹೊಸ ಹೊಸ ಆಯಾಮಗಳ, ವಿಧ ವಿಧ ಸಾಧ್ಯತೆಗಳ ಪರಿಚಯವಾಗಬೇಕಾಗಿರುತ್ತದೆ. ಅವರು ಅದನ್ನು ಪ್ರಾಯೋಗಿಕವಾಗಿ ಅನ್ವೇಷಿಸುತ್ತಾ ತಮ್ಮ ಗ್ರಹಿಕೆಯ ಮತ್ತು ಅನುಭವದ ಸಾಧ್ಯತೆಗಳನ್ನು ಕಂಡುಕೊಳ್ಳಬಹುದಾಗಿರುತ್ತದೆ. ಆದರೆ ಆ ಸಮಯದಲ್ಲಿ ಸಾಮಾಜೀಕರಣದ (Socialization) ನೆಪದಲ್ಲಿ ಹಿರಿಯರು ಸಮಾಜದ, ಧರ್ಮದ, ಸಂಸ್ಕೃತಿಯ ಸ್ಥಾಪಿತ ಮೌಲ್ಯಗಳನ್ನೇ ಅಂತಿಮವೆಂಬಂತೆ ಅವರ ಮನವೊಲಿಸಿ ತಮ್ಮನ್ನು ತಾವು ಆ ರೀತಿಗಳಿಗೆ, ವರ್ತನೆಗಳಿಗೆ ಮತ್ತು ಆಲೋಚನೆಗಳಿಗೆ ಅರ್ಪಿಸಿಕೊಳ್ಳುವಂತೆ ಮಾಡಿರುತ್ತಾರೆ. ಇದರಿಂದ ಅವರು ಕುದುರೆಗೆ ಹಾಕಿದ ಕಾಟೇವಾಡದಂತೆ ಆಚೀಚೆ ನೋಡದ ಹಾಗೆ ಮಾಡುತ್ತಾರೆ. ತಮ್ಮ ಬದುಕಿನ ಸಾಮಾಜಿಕ ಪ್ರಯಾಣದಲ್ಲಿ ಇತರ ವಿಷಯಗಳನ್ನು ಕಂಡರೂ ತಮ್ಮದ್ದಷ್ಟೇ ಶ್ರೇಷ್ಠ ಎಂಬ ವ್ಯಸನಕ್ಕೂ ಈಡಾಗಿರುತ್ತಾರೆ. ಇದರಿಂದ ಚೌಕಟ್ಟುಗಳ ಆಚೆಗೆ ಆಲೋಚನೆಗಳನ್ನು ಮಾಡುವ ಅಥವಾ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವ ಪ್ರಯತ್ನಗಳನ್ನು ತಮಗೆ ಮಾಡಿಕೊಳ್ಳುವುದಿಲ್ಲ. ಹಾಗೆ ಮಾಡಿದರೆ ತಾವು ತಾವಿರುವ ಸಮಾಜದ ತಿರಸ್ಕಾರಕ್ಕೆ ಗುರಿಯಾಗುವ ಭಯವನ್ನು ಹೊಂದಿರುತ್ತಾರೆ. ನಾಲ್ಕು ಜನ ನೋಡಿದವರು ಏನು ಹೇಳುವುದಿಲ್ಲ ಎಂದು ಹಿರಿಯರೂ ಆ ಭಯದ ಉತ್ಪಾದಕರಾಗಿರುತ್ತಾರೆ.
ಬಹಳಷ್ಟು ಸಲ ಸಾಂಸ್ಕೃತಿಕ ನಿರ್ಬಂಧ (Cultural Conditioning) ವ್ಯಕ್ತಿಯ ಆಲೋಚನೆಗಳನ್ನು, ಭಾವನೆಗಳನ್ನು ಮತ್ತು ವರ್ತನೆಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುತ್ತದೆ. ಏಕೆಂದರೆ ಸಂಸ್ಕೃತಿ ಬಹಳ ಮಹತ್ವದ್ದು, ಅದನ್ನು ನಾವು ಉಳಿಸಬೇಕು, ಇತರ ವಿಷಯಗಳಿಗೆ ಮಾರುಹೋಗದೆ, ತಮ್ಮದನ್ನು ಬಿಟ್ಟುಕೊಡಬಾರದು ಎಂಬ ಹಟಮಾರಿತನದಿಂದ ಜಿಗಟು ವ್ಯಕ್ತಿತ್ವವನ್ನು ಬೆಳೆಸಿಕೊಂಡುಬಿಡುತ್ತಾರೆ. ಸಂಸ್ಕೃತಿಯಾಗಲಿ, ಧಾರ್ಮಿಕತೆಯಾಗಲಿ, ಸಾಮಾಜಿಕ ವ್ಯವಸ್ಥೆಯಾಗಲಿ ಆಯಾ ಕಾಲಘಟ್ಟದ ಬೆಳವಣಿಗೆ ಮತ್ತು ವಿಸ್ತರಣೆಗೆ ಅನುಗುಣವಾಗಿ ತನ್ನನ್ನು ತಾನು ಹಿಗ್ಗಿಸಿಕೊಳ್ಳುವ ಸಲಿಲತೆಯನ್ನು ಹೊಂದಿದ್ದರೆ ಅದಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅವಗಾಹನೆಗೆ ಯೋಗ್ಯವಾಗಿರುವವನ್ನು ಅನುಸರಣೆ ಮಾಡಲು ಹೋದರೆ ವಾಸ್ತವ ಜೀವನದಲ್ಲಿ ತಾಕಲಾಟಗಳು ಪ್ರಾರಂಭವಾಗುತ್ತವೆ. ಇದರಿಂದ ಅವರು ಕಪಟಿಗಳಾಗಬೇಕಾಗುತ್ತದೆ ಅಥವಾ ಜಿಗಟುಗೇಡಿಗಳಾಗಬೇಕಾಗುತ್ತದೆ.
ಕುಟುಂಬ ಮತ್ತು ಸಮಾಜದ ಇಂತಹ ಪ್ರಭಾವಗಳಿಂದ ಸೀಮಿತ ಮನೋಬಲವನ್ನು ಹೊಂದಿರುವಂತಹ ಯುವಪೀಳಿಗೆಗಳು ಹಲವಾರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿ ಮುಖ್ಯವಾಗಿ ವಿಶ್ವದೃಷ್ಟಿ ಅಥವಾ ಜಾಗತಿಕ ಮಟ್ಟದ ದೃಷ್ಟಿಯನ್ನು ಹೊಂದಲಾಗದೇ ಸಂಕುಚಿತವಾದ ಮತ್ತು ಮಿತಿಯಾದ ಗ್ರಹಿಕೆಯನ್ನು ಹೊಂದಿರುತ್ತಾರೆ. ಇದರಿಂದ ವಿವಿಧ ಕುಶಲ-ಕಲ್ಪನೆಗಳನ್ನು (Ideas) ಮತ್ತು ಅನುಭವಗಳಿಗೆ ತೆರೆದುಕೊಳ್ಳಲಾಗದೆ ಇರುವುದರಿಂದ ಅವನ ಜೀವನಾನುಭವವು ಮೊಟಕಾಗುತ್ತದೆ ಮತ್ತು ಅವರ ಮುಂದಿನ ಪೀಳಿಗೆಗಳ ಬೌದ್ಧಿಕ ಮತ್ತು ಜಾಗತಿಕ ವಿಕಾಸಕ್ಕೆ ಹಿನ್ನಡೆಯನ್ನು ಉಂಟು ಮಾಡುವ ಸಾಧ್ಯತೆಗಳಿರುತ್ತವೆ.
ಎರಡನೆಯದಾಗಿ ಯಾವ ವಯಸ್ಸಿನಲ್ಲಿ ಸೃಜನಶೀಲ ಮತ್ತು ಪ್ರಯೋಗಶೀಲವಾಗಬೇಕಾಗಿರುವುದೋ ಆಗ ಯುವಜನರ ಸೃಜನಶೀಲತೆ ಉಸಿರುಗಟ್ಟುತ್ತದೆ. ಸಂಪ್ರದಾಯ ಬದ್ಧತೆಯ ಕಟ್ಟರ್‌ವಾದದಿಂದ ಪ್ರಗತಿ ಮತ್ತು ವಿಕಾಸಗಳು ಕುಂಠಿತವಾಗುತ್ತದೆ ಮತ್ತು ಆಯಾ ಕಾಲಘಟ್ಟದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ದಿಕ್ಕಿನಲ್ಲಿ ಹಿಂದುಳಿಯುತ್ತಾರೆ. ತಮ್ಮಿಂದ ಪ್ರಗತಿಪರ ನಡೆ ಸಾಧ್ಯವಿಲ್ಲದೆ ಹೋಗುವ ಹತಾಶೆಯಲ್ಲಿ ಅವರು ವಿಕಾಸಮುಖವಾಗಿರುವ ಇತರರೊಂದಿಗೆ ಸಂಘರ್ಷಕ್ಕೆ ಇಳಿಯುವ ಎಲ್ಲಾ ಸಾಧ್ಯತೆಗಳೂ ಕೂಡಾ ಉಂಟು.
ಎಲ್ಲದಕ್ಕಿಂತ ಮುಖ್ಯವಾಗಿ ಲೌಕಿಕ ಮತ್ತು ಬೌದ್ಧಿಕ ಅಗತ್ಯಗಳಿಗೆ ಯುವಜನ ಸ್ವತಂತ್ರವಾಗಿರದೆ ಆರ್ಥಿಕತೆಗೂ, ಆಲೋಚನೆಗಳಿಗೂ ಇತರರ ಮೇಲೆ ಅವಲಂಬಿತವಾಗಿರುತ್ತಾರೆ. ಆತ್ಮವಿಶ್ವಾಸ ಮತ್ತು ಧೈರ್ಯದ್ದೇ ಅವರಲ್ಲಿ ಬಹಳ ದೊಡ್ಡ ಕೊರತೆ ಇರುತ್ತದೆ.
ಹಿರಿಯರಾದವರು ಕಿರಿಯರ ಪರವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕಿಂತ ಅವರಿಗೆ ತಮ್ಮದೇ ನಿರ್ಣಯಗಳನ್ನು ತೆಗೆದುಕೊಳ್ಳಲು ಮುಕ್ತವಾದ ಅವಕಾಶಗಳನ್ನು ನೀಡುತ್ತಾ ಅವರ ಮುನ್ನಡೆಯುವಿಕೆಯಲ್ಲಿ ತಮ್ಮ ನಡೆಯನ್ನು ಜೊತೆಗೂಡಿಸಿದರೆ ಉತ್ಪಾದಕ ಮತ್ತು ಫಲಪ್ರದವಾದ ಯುವಜನಾಂಗಗಳನ್ನು ನಮ್ಮ ಕಣ್ಣೆದುರಲ್ಲೇ ಕಾಣಬಹುದಾಗಿರುತ್ತದೆ. ಯುವಜನಾಂಗವು ಹಿರಿಯರ ಭೂತಬಾಧೆಯಿಂದ ಮುಕ್ತವಾಗಲಿ.