ನಿರಾಳತೆ

Update: 2025-04-20 08:38 IST
ನಿರಾಳತೆ
  • whatsapp icon

ಮಾನಸಿಕ ಆರೋಗ್ಯದ ವಿಷಯದಲ್ಲಿ ನಿರಾಳತೆ ಬಹಳ ಪ್ರಮುಖ ಪಾತ್ರವಹಿಸುತ್ತದೆ.

ನಿರಾಳತೆ ಎಂದರೆ ಮನಸ್ಸು ಉದ್ವೇಗವಿಲ್ಲದೆ, ಒತ್ತಡವಿಲ್ಲದೆ, ಆತಂಕವಿಲ್ಲದೆ ಮತ್ತು ಆತುರವಿಲ್ಲದೆ ಇರುವುದು. ಸಾಮಾನ್ಯವಾದ ಬದುಕಿನಲ್ಲಿ ಯಾವುದಾದರೂ ಕೆಲಸವೋ, ಪರಿಸ್ಥಿತಿಯೋ ಒತ್ತಡವನ್ನು ತಂದೇ ತರುವುದು. ಇನ್ನು ವ್ಯಕ್ತಿಗಳಲ್ಲಂತೂ ಕೆಲವರು ನಮ್ಮ ತಾಳ್ಮೆಯ ಮಹಾ ಪರೀಕ್ಷಕರು. ನಮಗೆ ಎಷ್ಟರ ಮಟ್ಟಿಗೆ ಸಹನೆ ಇದೆ ಎಂದು ತಮ್ಮ ನಡವಳಿಕೆಗಳ ಮತ್ತು ಮಾತುಗಳ ಮಾಪನದಿಂದ ಪರೀಕ್ಷೆ ಮಾಡುತ್ತಲೇ ಇರುವರು. ಅದಕ್ಕೆ ಸರಿಯಾದ ರೀತಿಯಲ್ಲಿ ಉತ್ತರಿಸಲು ಬಾರದೇ ತೊಳಲಾಡುವರು. ಸರಿಯಾದ ಪದಗಳು ಸಿಗದೆ ಕೂಗಾಡುವರು. ಮನಸ್ಸು ಸ್ಪಷ್ಟತೆಯನ್ನು ಮತ್ತು ಭಾವನೆಗಳು ಹದವರಿಯದೇ ಹೋದಾಗ ದೈಹಿಕ ದಾಳಿಯೂ ಆಗುವುದು.

ಮನಸ್ಸಿನ ಸಮತೋಲನಕ್ಕೆ ಅಗತ್ಯವಿರುವ ಪ್ರಾಥಮಿಕ ಗುಣಗಳಾದ ಅರಿವು ಮತ್ತು ಗವಾಹಿತನ ಅಂದರೆ ಸಾಕ್ಷೀಕರಿಸುವ ರೂಢಿ ಇದ್ದಲ್ಲಿ ನಿರಾಳತೆಯನ್ನು ಸಾಧಿಸುವುದು ಸುಲಭ.

ತನ್ನತನದ ಬಗ್ಗೆ, ತಾನು ವರ್ತಿಸುತ್ತಿರುವವರ ಬಗ್ಗೆ ಮತ್ತು ಆ ಹೊತ್ತಿನ ಪರಿಸ್ಥಿತಿಯ ಬಗ್ಗೆ ಅರಿವು ಇದ್ದು, ಅದನ್ನು ಗವಾಹಿತನದಲ್ಲಿ, ಅಂದರೆ ಭಾವೋದ್ರೇಕದಿಂದ ಭಾಗವಹಿಸದೆ ತಟಸ್ಥವಾಗಿ ಸಾಕ್ಷೀಕರಿಸುವ ಸ್ವಭಾವವನ್ನು ರೂಢಿ ಮಾಡಿಕೊಂಡಲ್ಲಿ ವ್ಯಕ್ತಿಯು ಸಹಜವಾಗಿ ನಿರಾಳತೆಯನ್ನು ಅನುಭವಿಸುತ್ತಾರೆ.

ನಿರಾಳತೆ ಎಂದರೆ ಬೇಜವಾಬ್ದಾರಿತನವೋ, ಪಲಾಯನವೋ ಅಥವಾ ನಿರ್ಲಕ್ಷಿಸುವುದೋ ಅಲ್ಲ. ಮನಸ್ಸನ್ನು ಅನುದ್ವೇಗದಿಂದಲೂ, ಭಾವನೆಗಳಲ್ಲಿ, ವಿಷಯದಲ್ಲಿ ಸಮತೋಲನದಿಂದಲೂ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿರ್ವಹಿಸುವುದು. ಇದೊಂದು ಶೀತಲ ಸ್ವಭಾವ ಖಂಡಿತ ಅಲ್ಲ. ಆದರೆ ತಾವೂ ಉದ್ವೇಗಗೊಂಡು ಇತರರನ್ನೂ ಉದ್ವೇಗಕ್ಕೆ ಒಳಮಾಡಿ ಗೊಂದಲವನ್ನು ಎಬ್ಬಿಸುವುದಿಲ್ಲ. ಪ್ರಶಾಂತವಾಗಿ, ಸ್ಪಷ್ಟವಾಗಿ ಮತ್ತು ನಿಖರವಾಗಿ ಆಲೋಚನೆಗಳನ್ನು ಮಾಡಲು ಸಾಧ್ಯ ಮಾಡಿಕೊಳ್ಳುವುದು.

ಏನೇ ಆದರೂ ಆ ವ್ಯಕ್ತಿ ತಲೆನೇ ಕೆಡಿಸಿಕೊಳ್ಳಲ್ಲ. ಆದುದ್ದಾಗಲಿ, ಹೋಗೋದು ಹೋಗಲಿ ಎಂದು ಕೂಲ್ ಆಗಿ ಇರುತ್ತಾನೆ ಎಂದು ಹೇಳುತ್ತಾರಲ್ಲಾ, ಅವರು ತಲೆ ಕೆಡಿಸಿಕೊಳ್ಳಲ್ಲ ನಿಜ. ಆದರೆ ಅವರಲ್ಲಿ ಆಲೋಚನೆಗಳು ಇರುತ್ತವೆ. ಆದರೆ ಉದ್ವೇಗ ಮತ್ತು ಆತಂಕಗಳು ಇರುವುದಿಲ್ಲ ಅಷ್ಟೇ!

ಪ್ರಶಾಂತವಾಗಿ, ವಿಶ್ರಾಮಸ್ಥಿತಿಯಲ್ಲಿ ಮತ್ತು ಅನುದ್ವೇಗ ಸ್ಥಿತಿಯಲ್ಲಿ ವಿಷಯಗಳನ್ನು ಗ್ರಹಿಸುವ ಮತ್ತು ನಿಭಾಯಿಸುವ ಮನಸ್ಥಿತಿಯೇ ನಿರಾಳತೆ.

ಈ ನಿರಾಳತೆಯಿಂದಾಗಿ ಮೆದುಳಿನಲ್ಲಿ ಒತ್ತಡದ ಹಾರ್ಮೋನುಗಳಾದ ಕಾರ್ಟಿಸಲ್ ಮಟ್ಟ ಕಡಿಮೆಯಾಗುತ್ತದೆ. ಒತ್ತಡ ರಹಿತವಾದ ಮನಸ್ಸು ತನ್ನ ಕಾರ್ಯ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ತನಗೆ ಆತಂಕ, ಭೀತಿ ಉಂಟಾದಾಗ ಹೋರಾಡುವ ಅಥವಾ ಪಲಾಯನ ಮಾಡುವ ಮನಸ್ಸು ಮತ್ತು ಮೈಯಲ್ಲಿ ಆಗ್ರಹವನ್ನು ತುಂಬುವಂತಹ ಸಿಂಪಥೆಟಿಕ್ ನರವ್ಯವಸ್ಥೆ ಶಾಂತವಾಗಿ, ವಿಶ್ರಾಂತಿಯಿಂದ ಗ್ರಹಿಸು ಎನ್ನುವಂತಹ ಪ್ಯಾರಾಸಿಂಪಥೆಟಿಕ್ ವ್ಯವಸ್ಥೆಯು ಸಕ್ರಿಯಗೊಳ್ಳುತ್ತದೆ. ಇದರಿಂದ ಆಗುವ ಲಾಭವೆಂದರೆ ನಿರ್ಣಯಗಳನ್ನು ತೆಗೆದುಕೊಳ್ಳುವ ಮೆದುಳಿನ ಕೇಂದ್ರ (ಪ್ರಿಫ್ರಂಟಲ್ ಕಾರ್ಟೆಕ್ಸ್) ಬಲಗೊಳ್ಳುತ್ತದೆ. ನಮ್ಮ ಸ್ಮರಣೆಯ ಕೇಂದ್ರವಾದ ಹಿಪ್ಪೊಕ್ಯಾಂಪಸ್ ಕೂಡಾ ಇದರಿಂದ ಬಲಗೊಳ್ಳುತ್ತದೆ.

ಯಾವ ಖಿನ್ನತೆ, ಒತ್ತಡ ಮತ್ತು ಆತಂಕಗಳಿಂದ ರಕ್ತದೊತ್ತಡ, ಹೃದಯದ ಬಡಿತ ಏರುಗತಿಗೆ ಹೋಗುತ್ತದೆಯೋ ಅದು ನಿರಾಳತೆಯಿಂದ ನಿಯಂತ್ರಣದಲ್ಲಿರುತ್ತದೆ. ರೋಗ ನಿರೋಧಕ ಶಕ್ತಿ, ಜೀರ್ಣ ಕ್ರಿಯೆ ಅಗತ್ಯದ ಗತಿಯಲ್ಲಿ ಇರುವುದಲ್ಲದೆ ಸ್ನಾಯುಗಳಲ್ಲಿ ಒತ್ತಡಗಳು ಕಡಿಮೆಯಾಗಿ ದೇಹ ಮತ್ತು ಮನಸ್ಸು ಎರಡೂ ಲವಲವಿಕೆಯಿಂದ ಕೂಡಿರುತ್ತದೆ.

ಈ ನಿರಾಳತೆಯೇ ಮನಸ್ಸಿನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಮತ್ತು ಸಕಾರಾತ್ಮಕ ಚಿಂತನೆಗಳನ್ನು ರೂಢಿಸುವುದು. ಎಲ್ಲದಕ್ಕಿಂತ ಮುಖ್ಯವಾಗಿ ಉದ್ವೇಗದಿಂದ ಏರಿಳಿಯುವ ಭಾವನೆಗಳು ಸ್ಥಿರತೆಯಿಂದ ಕೂಡಿರುತ್ತವೆ. ಎದುರಿನವರ ಕ್ರಿಯೆಗೆ ತಟ್ಟನೆ ಪ್ರತಿಕ್ರಿಯೆ ನೀಡುವುದಿಲ್ಲ. ಜಿದ್ದುಗೇಡಿತನದಿಂದ ಅಥವಾ ಹಟಮಾರಿತನದಿಂದ ಮುಯ್ಯಿಗೆ ಮುಯ್ಯಿ ಎಂಬಂತಹ ಧೋರಣೆ ಇಲ್ಲದೆ, ನಾನು ಹೆಚ್ಚೋ ಅಥವಾ ನೀನು ಹೆಚ್ಚೋ ಎಂಬ ಅಹಂಕಾರದ ಘರ್ಷಣೆ ಇಲ್ಲದೆ, ತಮ್ಮನ್ನು ಅಪಮಾನಿಸುತ್ತಿದ್ದಾರೆ ಅಥವಾ ತಾನೇ ಗೆಲ್ಲಬೇಕು ಎಂಬ ಆವೇಗ ಇಲ್ಲದೇ ಸ್ಪಂದಿಸುತ್ತಾರೆ. ಇಲ್ಲಿ ರಿಯಾಕ್ಷನ್ ಕೊಡುವ ಬದಲು ರೆಸ್ಪಾನ್ಸ್ ಕೊಡುವ ಹೊಣೆಗಾರಿಕೆ ನಿರಾಳತೆಯಿಂದ ಲಭಿಸುತ್ತದೆ.

ಈಗ ಯಾವುದಾದರೂ ತಪ್ಪಿ ಹೋದರೂ, ನಷ್ಟವಾದರೂ ಅದನ್ನೇ ದೊಡ್ಡದು ಮಾಡಿಕೊಂಡಿರುವ ಬದಲು, ಹೋದರೆ ಹೋಗಲಿ ಬಿಡು ಎಂಬ ಧೋರಣೆಯನ್ನು ನಿರಾಳತನದಲ್ಲಿ ಹೊಂದಿರುತ್ತಾರೆ. ಇತರರ ಮನಸ್ಸಿನ ಮೇಲೆ ನಮ್ಮ ನಿಯಂತ್ರಣವೇ ಆಗಲಿ, ಅವುಗಳನ್ನು ನಿರ್ದೇಶಿಸುವುದೇ ಆಗಲಿ ನಮ್ಮಿಂದಾಗದು. ಆದರೆ ನಮ್ಮ ಮನಸ್ಸಿನ ಮೇಲೆ ಹೊಂದುವ ನಿಯಂತ್ರಣ ಮತ್ತು ನಮ್ಮ ನಡೆ ನುಡಿಗಳನ್ನು ನಿರ್ದೇಶಿಸಿಕೊಳ್ಳುವು ದರಿಂದ ನಮ್ಮಲ್ಲಿ ಉಂಟಾಗುವ ವರ್ತನೆಗೆ ಪ್ರತಿವರ್ತನೆಯಾಗಿ ಒಟ್ಟಾರೆ ಸಂಘರ್ಷಮಯ ಪರಿಸ್ಥಿತಿ ಸಂಬಂಧಗಳಲ್ಲಿ ತಪ್ಪಬಹುದು.

ನಿರಾಳತೆಯಿಂದಾಗಿ ನಮ್ಮ ಎದುರಿರುವವರ ಉರಿಯುವ ಬೆಂಕಿಗೆ ನಮ್ಮ ನಡೆ ನುಡಿಗಳು ಇಂಧನ ಒದಗಿಸಲಾರವು. ಆಗ ಸಹಜವಾಗಿ ಸಂಘರ್ಷದ ಕಾವು ತಗ್ಗುವುದಲ್ಲದೆ, ವಿಪರೀತಕ್ಕೆ ಹೋಗಿ ಅನಾಹುತಗಳಾಗುವುದನ್ನು ತಪ್ಪಿಸಲು ಸಾಧ್ಯ.

ನಿರಾಳವಾಗಿರುವುದು ಒಂದು ಜೀವನ ಶೈಲಿ. ಅದನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು.

ನಿರಾಳವಾಗಿರಲು ಹಲವು ತಂತ್ರಗಳನ್ನು ಬಳಸಬಹುದು. ನಿಧಾನವಾಗಿ ಉಸಿರಾಡುವುದು, ಉದ್ವೇಗವಿಲ್ಲದೆ ಕೆಲಸಗಳನ್ನು ಮಾಡುವುದು, ವಿಶ್ರಾಂತಿಯ ತಂತ್ರಗಳನ್ನು ಅನುಸರಿಸುವುದು, ಪ್ರಕೃತಿಯಲ್ಲಿ ಕಾಲ ಕಳೆಯುವುದು, ಸಾಕುಪ್ರಾಣಿಗಳ ಜೊತೆ ಸಮಯ ಕಳೆಯುವುದು, ಅಕ್ವೇರಿಯಂನಲ್ಲಿ ಚಲಿಸುವ ಮೀನುಗಳನ್ನು ನೋಡುತ್ತಿರುವುದು, ನವಿರಾದ ವಾದ್ಯ ಸಂಗೀತಗಳನ್ನು ಕಣ್ಮುಚ್ಚಿಕೊಂಡು ಕೇಳುವುದು. ನಡಿಗೆ, ವ್ಯಾಯಾಮಗಳೂ ಕೂಡಾ ನಿರಾಳತೆಗೆ ಸಹಕಾರಿ. ಸೂರ್ಯನ ಎಳೆ ಮತ್ತು ಇಳಿ ಬಿಸಿಲಿನಲ್ಲಿ ಕೂರುವುದು, ಆಲೋಚನೆಗಳನ್ನು, ಒತ್ತಡ ಮತ್ತು ಆತಂಕಗಳನ್ನು ಬಿಟ್ಟು ಆರಾಮವಾಗಿರುವುದು, ಊಟ ಮಾಡುವಾಗ ಆಹಾರವನ್ನು ಸೇವಿಸುವಾಗ ಅದರ ಬಣ್ಣ, ರುಚಿ, ವಾಸನೆಗಳನ್ನೆಲ್ಲಾ ಬರೀ ಗಮನಿಸುವುದು ಮಾತ್ರವಲ್ಲದೆ ಆನಂದಿಸುತ್ತಾ, ಪ್ರಶಂಸಿಸುವುದು. ಧನ್ಯತಾಭಾವದಲ್ಲಿ ಎಲ್ಲರಿಗೂ ಮತ್ತು ಎಲ್ಲಕ್ಕೂ ಮುಕ್ತವಾಗಿ ಧನ್ಯವಾದಗಳನ್ನು ಅರ್ಪಿಸುವುದು. ಓದುವುದು, ಚಿತ್ರಕಲೆ, ಸಂಗೀತ, ನೃತ್ಯ, ನಾಟಕದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು; ಇವೆಲ್ಲವೂ ನಿರಾಳತೆಯನ್ನು ಅಭ್ಯಾಸ ಮಾಡಲು ನೆರವಾಗುವವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್,

contributor

Similar News

ಹೊಣೆಗಾರಿಕೆ

ಪರಿಣಾಮಕಾರಿ

ಬೂದ ವಲಯ

ಮುಪ್ಪದರು

ಭಾವಮೂಲ

ದೇಹಾಪಮಾನ