ರಕ್ತದಾನದ ಜಾಗೃತಿಗಾಗಿ ಮಂಗಳೂರಿನಿಂದ ಕಾರ್ಗಿಲ್ ಗೆ ಬ್ಯಾರಿ ದಂಪತಿಯ ಬೈಕ್ ಪಯಣ

Update: 2023-07-27 08:15 GMT

ಮಂಗಳೂರು, ಜು. 26: ಹವ್ಯಾಸಕ್ಕಾಗಿ ಹಲವು ಬಗೆಯ ಸಾಹಸ ಕಾರ್ಯಗಳನ್ನು ಮಾಡುವವರನ್ನು ಕಂಡಿದ್ದೇವೆ. ಆದರೆ ಇಲ್ಲೊಬ್ಬ ದಂಪತಿ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಂಗಳೂರಿನಿಂದ ಕಾರ್ಗಿಲ್ ಗೆ ಬೈಕ್ ಮೂಲಕ ಪ್ರಯಾಣಕ್ಕೆ ಮುಂದಾಗಿದ್ದಾರೆ. ಜೀವ ರಕ್ಷಕ ಕಲೆಯ ಕೋಚ್ ಹಾಗೂ ಪ್ರೇರಣಾತ್ಮಕ ಭಾಷಣಕಾರರಾಗಿ ಗುರುತಿಸಿಕೊಂಡಿರುವ ಸೈಫ್ ಸುಲ್ತಾನ್ ಮತ್ತು ಅದೀಲಾ ಪರ್ಹೀನ್ ಅವರೇ ಈ ದಂಪತಿ. ತಮ್ಮ ಬಿಎಂಡಬ್ಲು ಜಿಎಸ್ 310 ಬೈಕ್ ಮೂಲಕ ದಂಪತಿ ಪ್ರಯಾಣ ಬೆಳೆಸಲಿದ್ದಾರೆ.

ಇವರು ಸುಮಾರು 4000 ಕಿ.ಮೀ.ಗಳ 19 ದಿನಗಳ ತಮ್ಮ ಬೈಕ್ ಪಯಣದ ವೇಳೆ ದೇಶಪ್ರೇಮದ ಸಂದೇಶವನ್ನು ಸಾರುವ ಜತೆಗೆ, ಹಿಜಾಬ್ ಬಗೆಗಿನ ತಪ್ಪು ತಿಳುವಳಿಕೆಯನ್ನು ನಿವಾರಿಸುವ ಹಾಗೂ ರಕ್ತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. 

ತಮ್ಮ ಪ್ರಯಾಣದ ಬಗ್ಗೆ ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸೈಫ್ ಸುಲ್ತಾನ್, ಮಂಗಳೂರಿನ ಲಯನ್ಸ್ ಕ್ಲಬ್ ನಲ್ಲಿ ಜುಲೈ 28ರಂದು ತಮ್ಮ ಕಾರ್ಗಿಲ್ ಪ್ರಯಾಣದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ಅವರು ನಾವು ಸಂಚಾರ ಮಾಡಲಿರುವ ಬೈಕ್ ಅನಾವರಣಗೊಳಿಸಲಿದ್ದಾರೆ. ಬೈಕ್ ದಿನಕ್ಕೆ ಸುಮಾರು 300 ರಿಂದ 400 ಕಿ. ಮೀ. ಪ್ರಯಾಣಕ್ಕೆ ಯೋಗ್ಯ ವಾಗುವ ರೀತಿಯಲ್ಲಿ ಮಾರ್ಪಡಿಸಲಾಗಿದೆ ಎಂದರು.

ಹೊನ್ನಾವರ, ಬೆಳಗಾವಿ, ಪುಣೆ, ಮುಂಬೈ, ಸೂರತ್, ಅಹ್ಮದಾಬಾದ್, ಉದಯಪುರ, ಜೈಪುರ, ದಿಲ್ಲಿ, ಅಮೃತಸರ, ಜಮ್ಮು ಮತ್ತು ಶ್ರೀನಗರ ಮೂಲಕ ಸಾಗಿ ಆಗಸ್ಟ್ 15ರಂದು ಕಾರ್ಗಿಲ್ ತಲುಪಲಿದ್ದೇವೆ ಎಂದು ಸೈಫ್ ಸುಲ್ತಾನ್ ಹೇಳಿದರು.

‘‘ರಕ್ತದಾನದ ಮಹತ್ವವನ್ನು ಸಾರುವುದು ನಮ್ಮ ಪ್ರಯಾಣದ ಪ್ರಮುಖ ಉದ್ದೇಶವಾಗಿದೆ. ಇದೇ ವೇಳೆ, ಹಿಜಾಬ್ ಧಾರಣೆ ಬಗ್ಗೆ ಸಮಾಜದಲ್ಲಿರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವುದು ಮತ್ತು ಇದು ದಬ್ಬಾಳಿಕೆಯ ಪ್ರತೀಕವಲ್ಲ ಎಂಬುದನ್ನು ಸಾಬೀತುಪಡಿಸುವುದಾಗಿದೆ. ಪಯಣದುದ್ದಕ್ಕೂ ನನ್ನ ಪತ್ನಿ ಅದೀಲಾ ಅವರು ಹಿಜಾಬ್ ಧರಿಸಲಿದ್ದಾರೆ. ತಮ್ಮ ನಂಬಿಕೆಯ ಚೌಕಟ್ಟಿನಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಸ್ಲಿಂ ಮಹಿಳೆಯರು ಸಶಕ್ತರು, ಸಬಲರು ಮತ್ತು ವಿದ್ಯಾವಂತರು ಎಂಬುದನ್ನು ಸ್ಪಷ್ಟಪಡಿಸುವುದು ನಮ್ಮ ಉದ್ದೇಶವಾಗಿದೆ’’ ಎಂದು ಸೈಫ್ ಸುಲ್ತಾನ್ ಅಭಿಪ್ರಾಯಪಟ್ಟರು.

ಬೈಕ್ ರೈಡ್ ನನ್ನ ಹವ್ಯಾಸ. ಈಗ ನನ್ನ ಪತ್ನಿಯೂ ಜೊತೆಯಾಗಿದ್ದಾರೆ. ಈ ಬಾರಿ ಭಾರತ ಉದ್ದಗಲಕ್ಕೆ ಪ್ರಯಾಣ ಬೆಳೆಸಿ ದೇಶದ ಭಾವೈಕ್ಯ ಮತ್ತು ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಮಹತ್ತರ ಉದ್ದೇಶವಿದೆ. ಮುಂದಿನ ವರ್ಷ ಥೈಲ್ಯಾಂಡ್ - ಮಲೇಷಿಯಾ, ಬಳಿಕ ಯುರೋಪ್ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸುವ ಬಯಕೆಯೂ ಇದೆ.

-ಸೈಫ್ ಸುಲ್ತಾನ್

‘‘ಆರಂಭದಲ್ಲಿ ಕಾರ್ಗಿಲ್ ಗೆ ನಾನು ಏಕಾಂಗಿಯಾಗಿ ಪ್ರಯಾಣಿಸಬೇಕೆಂದಿದ್ದೆ. ಆದರೆ ನನ್ನ ಪತ್ನಿಯೂ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜತೆಯಾಗಿ ಪ್ರಯಾಣ ಬೆಳೆಸಲು ನಿರ್ಧರಿಸಿದ್ದೇವೆ.ಪ್ರಯಾಣದ ಅಂಗವಾಗಿ ಜು. 28ರಂದು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ, ರೆಡ್ ಕ್ರಾಸ್ ರಕ್ತನಿಧಿ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸೈಫ್ ಹೇಳಿದರು.

ನಮ್ಮ ಈ ಪ್ರಯಾಣಕ್ಕೆ ವಾರ್ತಾಭಾರತಿ ಪತ್ರಿಕಾ ಬಳಗ, ಎಕೆ ಆ್ಯಪಲ್ ಪ್ಲೈ ಮತ್ತು ಸುಲ್ತಾನ್ ಡೈಮಂಡ್ ಆ್ಯಂಡ್ ಗೋಲ್ಡ್ ಪ್ರಾಯೋಜಕತ್ವ ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೈಫ್ ಅವರ ಪತ್ನಿ ಅದೀಲ ಫರ್ಹೀನ್, ಬೈಕ್ ಮೆಕ್ಯಾನಿಕ್ ಜಾವದ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News