ಸುಳ್ಯ | ವಿದ್ಯಾರ್ಥಿನಿ ಜೊತೆ ಅನುಚಿತ ವರ್ತನೆ ಆರೋಪ: ಯುವಕನಿಗೆ ತಂಡದಿಂದ ಹಲ್ಲೆ

Update: 2024-09-23 07:54 GMT

ಸುಳ್ಯ: ಬಸ್ಸಿನಲ್ಲಿ ಸಹ ಪ್ರಯಾಣಿಕಳಾಗಿದ್ದ ವಿದ್ಯಾರ್ಥಿನಿ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಯುವಕನೋರ್ವನಿಗೆ ತಂಡವೊಂದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಇಂದು ಬೆಳಗ್ಗೆ ಸುಳ್ಯ ಬಸ್ ನಿಲ್ದಾಣದಲ್ಲಿ ನಡೆದಿದೆ.

ಅಬ್ದುಲ್ ನಿಯಾಝ್ ಹಲ್ಲೆಗೊಳಗಾದ ಯುವಕ. ಆತನನ್ನು ಹಲ್ಲೆಕೋರರಿಂದ ರಕ್ಷಿಸಿದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದು ಆತ ಅಲ್ಲಿಂದ ತೆರಳಿರುವುದಾಗಿ ತಿಳಿದುಬಂದಿದೆ.

ಘಟನೆ ವಿವರ: ಬೆಂಗಳೂರಿನಿಂದ ಸುಬ್ರಹ್ಮಣ್ಯ ಮೂಲಕ ಸುಳ್ಯಕ್ಕೆ ಬರುತ್ತಿದ್ದ ಸರಕಾರಿ ಬಸ್ಸಿಗೆ ಬಿಸಿಲೆ ಘಾಟ್ ಬಳಿ ಸುಳ್ಯದ ಕಾಲೇಜೊಂದರ ವಿದ್ಯಾರ್ಥಿನಿ ಏರಿದ್ದಾಳೆ. ಯುವಕನೋರ್ವ ಕುಳಿತಿದ್ದ ಸೀಟಿನ ಪಕ್ಕದ ಸೀಟು ಖಾಲಿ ಇದ್ದುದರಿಂದ ಆಕೆ ಅಲ್ಲಿ ಕುಳಿತಿದ್ದಳೆನ್ನಲಾಗಿದೆ. ಈ ವೇಳೆ ಆಕೆಯ ಜೊತೆ ಯುವಕ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಚಾರವನ್ನು ಬಸ್ ನಿರ್ವಾಹಕನ ಗಮನಕ್ಕೆ ತಂದ ಯುವತಿ ಬಳಿಕ ತನ್ನ ಸಹಪಾಠಿಗಳಿಗೂ ಕರೆ ಮಾಡಿ ಮಾಹಿತಿ ನೀಡಿದ್ದಾಳೆ.

ಈ ನಡುವೆ ಬಸ್ ಸುಬ್ರಹ್ಮಣ್ಯಕ್ಕೆ ತಲುಪಿದಾಗ ಆರೋಪಿ ಯುವಕ ಬಸ್ಸಿನಿಂದ ಇಳಿದಿದ್ದಾನೆ. ವಿದ್ಯಾರ್ಥಿನಿ ಅದೇ ಬಸ್ಸಿನಲ್ಲಿ ಸುಳ್ಯಕ್ಕೆ ಬಂದಿದ್ದಾಳೆ. ಅಲ್ಲಿ ವಿದ್ಯಾರ್ಥಿನಿಯ ಸಹಪಾಠಿಗಳು ಜಮಾಯಿಸಿದ್ದರು. ಬಳಿಕ ತಂಡವೊಂದು ಆರೋಪಿ ಯುವಕನನ್ನು ಹುಡುಕಿ ಕಾರಿನಲ್ಲಿ ಹೊರಟಿದೆ. ಆರೋಪಿ ಕೇರಳದ ಮೂಲದವನಾಗಿರುವ ಬಗ್ಗೆ ಶಂಕೆ ಇದ್ದುದರಿಂದ ತಂಡವು ಪೈಚಾರ್ ನಲ್ಲಿ ಕಾದು ನಿಂತಿತ್ತು. ಅಷ್ಟರಲ್ಲಿ ಸುಬ್ರಹ್ಮಣ್ಯದಿಂದ ಬಸ್ಸಿನಲ್ಲಿ ಬಂದು ಪೈಚಾರಿನಲ್ಲಿ ಇಳಿದ ಅಬ್ದುಲ್ ನಿಯಾಝ್ ಎಂಬಾತನ್ನನು ಹಿಡಿದು ಬಲವಂತವಾಗಿ ಕಾರಲ್ಲಿ ಕುಳ್ಳಿರಿಸಿದ ತಂಡ ಸುಳ್ಯ ಬಸ್ ನಿಲ್ದಾಣಕ್ಕೆ ಕರೆತಂದಿದೆ. ಆ ವೇಳೆಗೆ ಬಸ್ ನಿಲ್ದಾಣದಲ್ಲಿದ್ದ ಸಂತ್ರಸ್ತ ವಿದ್ಯಾರ್ಥಿನಿ ಮತ್ತು ಇತರ ಸಹಪಾಠಿಗಳು ಸೇರಿ ನಿಯಾಝ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದರೆನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನನ್ನು ಗುಂಪಿನಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಈ ನಡುವೆ ಹಲ್ಲೆಗೊಳಗಾದ ನಿಯಾಝ್ ಆಸ್ಪತ್ರೆಯಿಂದು ಬಿಡುಗಡೆಗೊಂಡು ತೆರಳಿರುವುದಾಗಿ ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News