ತಪ್ಪು ವರದಿ ನೀಡಿದ ಪ್ರಕರಣ: ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಡಿಎಚ್‌ಒ ನೇತೃತ್ವದ ತನಿಖಾ ತಂಡ ಭೇಟಿ

Update: 2024-09-22 22:23 IST
ತಪ್ಪು ವರದಿ ನೀಡಿದ ಪ್ರಕರಣ: ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಡಿಎಚ್‌ಒ ನೇತೃತ್ವದ ತನಿಖಾ ತಂಡ ಭೇಟಿ
  • whatsapp icon

ಸುರತ್ಕಲ್:‌ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ 4 ತಿಂಗಳ ಮಗುವಿಗೆ ಥೈರಾಯಿಡ್‌ ಇರುವುದಾಗಿ ತಪ್ಪು ವರದಿ ನೀಡಿರುವ ಕುರಿತು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ತಿಮ್ಮಯ್ಯ ನೇತೃತ್ವದ ತನಿಖಾ ತಂಡ ಶನಿವಾರ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಭೇಡಿ ನೀಡಿ ಮಾಹಿತಿ ಪಡೆದುಕೊಂಡಿದೆ.

ತಿಂಗಳ ಚುಚ್ಚುಮದ್ದು ಪಡೆದುಕೊಳ್ಳಲೆಂದು ಹೋಗಿದ್ದ ನನ್ನ ಮಗುವಿಗೆ ಥೈರಾಯ್ಡ್‌ ಇದೆ ಎಂದು ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ತಪ್ಪು ವರದಿ ನೀಡಿ ವಂಚಿಸಲಾಗಿದೆ ಎಂದು ಆರೋಪಿಸಿ ಮುಕ್ಕ ಸಸಿಹಿತ್ಲು ನಿವಾಸಿ ರಾಮ ಸಾಲ್ಯಾನ್‌ ಎಂಬವರು ಸುರತ್ಕಲ್‌ ಪೊಲೀಸರು ಮತ್ತು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ತಿಮ್ಮಯ್ಯ ಅವರನ್ನು ಭೇಟಿ ಮಾಡಿ ದೂರು ನೀಡಿ ನ್ಯಾಯ ನೀಡುವಂತೆ ಆಗ್ರಹಿಸಿದ್ದರು.

ಇದರ ಪರಿಣಾಮವಾಗಿ ಮಂಗಳೂರು ತಾಲೂಕು ವೈದ್ಯಾಧಿಕಾರಿ, ಓರ್ವ ಮಕ್ಕಳ ತಜ್ಞ ಮತ್ತು ಪರಿಣಿತ ಹಿರಿಯ ಮೈಕ್ರೋ ವ್ಯಾಲಿಜಿಸ್ಟ್‌ ಒಬ್ಬರನ್ನೊಳಗೊಂಡ ತಂಡ ಶನಿವಾಸ ಮುಕ್ಕ ಶ್ರೀನಿವಾಸ್‌ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತೆರೆಯ ವೈದ್ಯಾಧಿಕಾರಿಗಳಿಂದ ಮಾಹಿತಿಯನ್ನು ಕಲೆಹಾಕಿದೆ ಎಂದು ತಿಳಿದು ಬಂದಿದೆ. ಅಲ್ಲದೆ, ಈ ತಂಡ ಮಗುವಿನ ಹೆತ್ತವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಮಾಹಿತಿಗಳನ್ನು ಕಲೆ ಹಾಕಲಿದೆ ಎಂದು ತಿಳಿದು ಬಂದಿದೆ.‌

ನನ್ನ ಮಗುವಿನ ಥೈರಾಯ್ಡ್‌ ವರದಿಯ ಕುರಿತಾಗಿ ತಪ್ಪು ವರದಿ ನೀಡಿರುವ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸೆ.5ರಂದು ದೂರು ನೀಡಲಾಗಿತ್ತು. ದೂರು ಸ್ವೀಕರಿಸಿದ್ದ ಅವರು 15ದಿನಗಳಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ದೂರು ನೀಡಿ 17ದಿನಗಳಾಗಿದ್ದು, ಅವರಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಸಂತ್ರಸ್ತ ರಾಮ ಸಾಲ್ಯಾನ್‌ ದೂರಿದ್ದಾರೆ.

"ಮಗುವಿನ ತಂದೆ ನೀಡಿದ್ದ ದೂರನನ್ವಯ ಮೂವರು ವೈದ್ಯರ ತಂಡವನ್ನು ಪರಿಶೀಲನೆಗೆ ನೇಮಿಸಲಾಗಿದ್ದು, ಅವರು ಪರಿಶೀಲನೆ ಮಾಡುತ್ತಿದ್ದಾರೆ. ಸದ್ಯ ಪ್ರಕರಣ ತನಿಖಾ ಹಂತದಲ್ಲಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು".

- ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ

"ನನ್ನ ಮಗಳಿಗಾದ ಅನ್ಯಾಯ ಇನ್ನು ಮುಂದೆ ಯಾರಿಗೂ ಶ್ರೀನಿವಾಸ್‌ ಆಸ್ಪತ್ರೆಯಲ್ಲಿ ಆಗಬಾರದು ಎನ್ನುವುದು ಸಂತ್ರಸ್ತ ನಾಗಿ ಹಾಗೂ ನಾಗರೀಕ ಸಮಾಜದ ಪ್ರಜೆಯಾಗಿ ನನ್ನ ಕಳಕಳಿ.  ಆಸ್ಪತ್ರೆಯ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡು ಅವರ ವಿರುದ್ಧ ಎಫ್‌ ಐ ಆರ್‌ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು".

- ರಾಮ ಸಾಲ್ಯಾನ್‌, ಸಂತ್ರಸ್ತ ಮಗುವಿನ ತಂದೆ

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News