ರೈಲ್ವೆ ಪ್ರವಾಸೋದ್ಯಮ ನಿಗಮದಿಂದ ಕೊರಿಯಾ, ಶ್ರೀಲಂಕಾ, ಅಯೋಧ್ಯೆ, ಕಾಶ್ಮೀರ ಸಹಿತ ವಿವಿಧ ಪ್ರವಾಸ ಪ್ಯಾಕೇಜ್

Update: 2025-04-08 18:27 IST
ರೈಲ್ವೆ ಪ್ರವಾಸೋದ್ಯಮ ನಿಗಮದಿಂದ ಕೊರಿಯಾ, ಶ್ರೀಲಂಕಾ, ಅಯೋಧ್ಯೆ, ಕಾಶ್ಮೀರ ಸಹಿತ ವಿವಿಧ ಪ್ರವಾಸ ಪ್ಯಾಕೇಜ್
  • whatsapp icon

ಮಂಗಳೂರು, ಎ.8: ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಇದೀಗ ರೈಲ್ವೆ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಜತೆಗೆ ದೇಶ ವಿದೇಶಗಳ ವಿವಿಧೆಡೆಗೆ ಪ್ರವಾಸ ಪ್ಯಾಕೇಜ್ ಕೂಡಾ ಒದಗಿಸುತ್ತಿದೆ.

ಇದೀಗ ಐಆರ್‌ಸಿಟಿಸಿಯಿಂದ ದಕ್ಷಿಣ ಕೊರಿಯಾ, ಯುರೋಪ್, ನೇಪಾಳ, ಶ್ರೀಲಂಕಾ, ಊಟಿ, ಅಯೋಧ್ಯೆ, ಕಾಶ್ಮೀರ ಮುಂತಾದ ದೇಶ- ವಿದೇಶಗಳ ವಿಶೇಷ ಆಕರ್ಷಣೆಯ ಪ್ರವಾಸಿ ಸ್ಥಳಗಳಿಗೆ ಪ್ರವಾಸ ಪ್ಯಾಕೇಜ್ ವ್ಯವಸ್ಥೆ ಮಾಡಲಾಗಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಐಆರ್‌ಸಿಟಿಸಿ ಯನ್ನು ಭಾರತೀಯ ರೈಲ್ವೆಯ ವಿಸ್ತೃತ ಅಂಗವಾಗಿ ಸ್ಥಾಪಿಸಲಾಗಿದೆ ಎಂದು

ಐಆರ್‌ಸಿಟಿಸಿ ಜಂಟಿ ಮಹಾ ಪ್ರಬಂಧಕ (ಪ್ರವಾಸೋದ್ಯಮ) ಸ್ಯಾಮ್ ಜೋಸೆಫ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಯೋಜನೆ ಕುರಿತು ಮಾಹಿತಿ ನೀಡಿದರು.

ಪ್ರವಾಸಿಗರನ್ನು ಆಕರ್ಷಿಸಲು ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಐಆರ್‌ಸಿಟಿಸಿ ಪ್ರವಾಸೋದ್ಯಮ ಮಾಹಿತಿ ಮತ್ತು ಸೌಲಭ್ಯ ಕೇಂದ್ರ ಪ್ರಾರಂಭಿಸಲಾಗಿದೆ. ಈ ಕೇಂದ್ರವು ವಿವಿಧ ಐಆರ್‌ಸಿಟಿಸಿ ಪ್ರಯಾಣ ಪ್ಯಾಕೇಜ್‌ಗಳ ವಿವರ ಒದಗಿಸುತ್ತದೆ ಮತ್ತು ಪ್ರವಾಸ ಬುಕ್ಕಿಂಗ್ ನಡೆಸುವವರಿಗೆ ನೆರವಾಗುತ್ತದೆ.

ಮಂಗಳೂರಿನಿಂದ ವಾರಣಾಸಿ, ಅಯೋಧ್ಯೆ, ಪ್ರಯಾಗ್ ರಾಜ್ ಏರ್ ಟೂರ್ ಪ್ಯಾಕೇಜ್ ಇದೆ. ಅಯೋಧ್ಯೆ ದರ್ಶನದೊಂದಿಗೆ ವಾರಣಾಸಿ ಎಂಬ ವಿಶೇಷ ವಿಮಾನ ಪ್ಯಾಕೇಜ್ ಅನ್ನು ನೀಡುತ್ತಿದೆ. ಈ ವಿಶೇಷ ಪ್ರವಾಸವು ಮಂಗಳೂರು ವಿಮಾನ ನಿಲ್ದಾಣದಿಂದ ಮೇ 16 ರಂದು ಹೊರಡಲಿದೆ. ತೀರ್ಥಯಾತ್ರೆಯು ಭಾರತದ ಅತ್ಯಂತ ಪವಿತ್ರ ನಗರವಾದ ವಾರಣಾಸಿಯಲ್ಲಿ ಪ್ರಾರಂಭವಾಗುತ್ತದೆ. ಈ ಪ್ರಯಾಣವು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸಂಗಮವಾಗುವ ಪವಿತ್ರ ತ್ರಿವೇಣಿ ಸಂಗಮದ ನೆಲೆಯಾದ ಪ್ರಯಾಗ್‌ರಾಜ್‌ಗೆ ಮುಂದುವರಿಯುತ್ತದೆ. ಈ ಪ್ರವಾಸವು ಭಗವಾನ್ ಶ್ರೀ ರಾಮನ ಜನ್ಮಸ್ಥಳವೆಂದು ಪೂಜಿಸಲ್ಪಡುವ ಸರಯೂ ನದಿಯ ದಡದಲ್ಲಿರುವ ಪ್ರಾಚೀನ ನಗರವಾದ ಅಯೋಧ್ಯೆಗೆ ಭೇಟಿ ನೀಡುವುದನ್ನೂ ಒಳಗೊಂಡಿದೆ. ಈ ಪ್ಯಾಕೇಜ್ ಪ್ರತಿ ವ್ಯಕ್ತಿಗೆ 36,700 ರೂ. ಆಗಿರುತ್ತದೆ.

ವಿಶೇಷ 6 ದಿನಗಳ ವಿಮಾನ ಪ್ರಯಾಣದೊಂದಿಗೆ ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲಾಗುವ ಕಾಶ್ಮೀರದ ಉಸಿರುಗಟ್ಟಿಸುವ ಸೌಂದರ್ಯವನ್ನು ಅನುಭವಿಸಿ ಎಂದು ಐಆರ್‌ಸಿಟಿಸಿ ಆಹ್ವಾನ ನೀಡುತ್ತದೆ. ಈ ಪ್ರವಾಸವು ಆ. 25 ರಂದು ಆರಂಭಗೊಳ್ಳಲಿದೆ. ಪ್ರಯಾಣ ವೆಚ್ಚ ಪ್ರತಿ ವ್ಯಕ್ತಿಗೆ 51,700 ರೂ. ರಿಂದ ಪ್ರಾರಂಭವಾಗುತ್ತವೆ.

ಪ್ರಸ್ತಾವಿತ ದೇಶೀಯ ವಿಮಾನ ಪ್ಯಾಕೇಜ್‌ಗಳಲ್ಲಿ ರೌಂಡ್-ಟ್ರಿಪ್ ವಿಮಾನ ದರ, ಸ್ಥಳೀಯ ಸಾರಿಗೆ, ಊಟದೊಂದಿಗೆ ಹೋಟೆಲ್ ವಸತಿ, ಪ್ರವಾಸ ಸಂಯೋಜಕರ ಸೇವೆ ಮತ್ತು ಪ್ರಯಾಣ ವಿಮೆ ಸೇರಿವೆ.

ಪ್ರತಿ ಗುರುವಾರ ಮಂಗಳೂರಿನಿಂದ ಹೊರಡುವ ಊಟಿಗೆ ಐಆರ್‌ಸಿಟಿಸಿ 5 ದಿನಗಳ ರೈಲು ಪ್ರವಾಸ ಪ್ಯಾಕೇಜ್ ಅನ್ನು ನೀಡುತ್ತಿದೆ. ಈ ಪ್ರವಾಸವು ಪ್ರಯಾಣಿಕರಿಗೆ ಊಟಿ ಮತ್ತು ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳನ್ನು ಅನ್ವೇಷಿಸುವ ಅವಕಾಶವನ್ನು ಒದಗಿಸುತ್ತದೆ. ಈ ಪ್ಯಾಕೇಜ್ ರೌಂಡ್ ಟ್ರಿಪ್ ರೈಲು ಟಿಕೆಟ್, ಸ್ಥಳೀಯ ಸಾರಿಗೆ, ಹೋಟೆಲ್ ವಸತಿ ಮತ್ತು ಪ್ರಯಾಣ ವಿಮೆ ಒಳಗೊಂಡಿದೆ. ಬೆಲೆ ಪ್ರತಿ ವ್ಯಕ್ತಿಗೆ 8,545 ರೂ.ನಿಂದ ಪ್ರಾರಂಭವಾಗುತ್ತದೆ.

ಅಂತಾರಾಷ್ಟ್ರೀಯ ಪ್ಯಾಕೇಜು

ಬೆಂಗಳೂರುನಿಂದ ಮೇ 3 ರಂದು ಎಂಟು ದಿನಗಳ ದಕ್ಷಿಣ ಕೊರಿಯಾ ಪ್ರವಾಸ ಆರಂಭಗೊಳ್ಳಲಿದೆ. ಪ್ರತೀ ವ್ಯಕ್ತಿಗೆ 2,19,000 ವೆಚ್ಚ ಬೀಳಲಿದೆ. ಬೆಂಗಳೂರುನಿಂದ ಮೇ 19 ರಂದು ಹೊರಡುವ 13 ದಿನ ಗಳ ಯುರೋಪ್ ಪ್ರವಾಸ ಪ್ಯಾಕೇಜ್ ಪ್ರಕಟಿಸಲಾಗಿದೆ. ಪ್ರತೀ ವ್ಯಕ್ತಿಗೆ ನಿದಿಪಡಿಸಿದ ದರ 3,78,500 ರಿಂದ ಪ್ರಾರಂಭವಾಗುತ್ತದೆ.

ಕೇರಳ ರಾಜ್ಯದ ಕೊಚ್ಚಿಯಿಂದ ಮೇ 22 ರಂದು ಹೊರಡುವ 6 ದಿನಗಳ ನೆಪಾಳ ಏರ್ ಟೂರ್ ಪ್ಯಾಕೇಜ್ ಪ್ರತಿಯೊಬ್ಬ ವ್ಯಕ್ತಿಗೆ 60,500 ರೂ. ವಿನಿಂದ ಆರಂಭವಾಗುತ್ತದೆ. ಕೊಚ್ಚಿಯಿಂದ ಮೇ 27 ರಂದು ಹೊರ ಡುವ 7 ದಿನಗಳ ಶ್ರೀಲಂಕಾ ಏರ್ ಟೂರ್ ಪ್ಯಾಕೇಜ್‌ನಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ 61,900 ರೂ ನಿಗದಿಪಡಿಸಲಾಗಿದೆ.

ರಜೆಯ ಪ್ರಯಾಣ ರಿಯಾಯಿತಿ (ಎಲ್ಟಿಸಿ) ಸೌಲಭ್ಯವು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳ ಉದ್ಯೋಗಿಗಳಿಗೆ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಎಲ್ಲಾ ದೇಶೀಯ ಪ್ರವಾಸ ಪ್ಯಾಕೇಜ್‌ಗಳಿಗೆ ಲಭ್ಯವಿದೆ.

ಹೆಚ್ಚಿನ ಮಾಹಿತಿಗೆ ಐಆರ್‌ಸಿಟಿಸಿ ಜಾಲತಾಣ www.irctctourism.com ಅಥವಾ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ- 8287932064 / 8287932042 ಸಂಪರ್ಕಿಸುವಂತೆ ಸೂಚಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ನಿಗಮದ ಸೀನಿಯರ್ ಎಕ್ಸಿಕ್ಯೂಟಿವ್ ವಿನೋದ್ ನಾಯರ್, ಮಂಗಳೂರು ಸೆಂಟ್ರಲ್ ನಿಲ್ದಾಣದ ರಾಜನ್ ನಂಬಿಯಾರ್, ಮೈಸೂರು ರೈಲ್ವೆ ನಿಲ್ದಾಣದ ಇಮ್ರಾನ್ ಅಹ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News