ʼಮೀಫ್ʼ ವತಿಯಿಂದ ವಿದ್ಯಾರ್ಥಿಗಳಿಗೆ ನಾಗರಿಕ ಸೇವಾ ಪರೀಕ್ಷೆಯ ಫೌಂಡೇಶನ್ ಕಾರ್ಯಾಗಾರ

ಮಂಗಳೂರು, ಎ.8: ದ.ಕ, ಉಡುಪಿ ಮತ್ತು ಕೊಡಗು ಜಿಲ್ಲಾ ಮೀಫ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ ಹೈಸ್ಕೂಲ್ ಮತ್ತು ಪದವಿಪೂರ್ವ ಹಂತದಲ್ಲಿ ನಾಗರಿಕ ಸೇವಾ ಪರೀಕ್ಷೆ ಮಾಹಿತಿಗೆ ಸಂಬಂಧಿಸಿ ಎರಡು ದಿವಸಗಳ ಫೌಂಡೇಶನ್ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ಮಂಗಳವಾರ ಬಲ್ಮಠದ ಯೆನೆಪೋಯ ಕಾಲೇಜಿನಲ್ಲಿ ನಡೆಯಿತು.
ಮಂಗಳೂರಿನ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತೆ ನಾಝಿಯಾ ಸುಲ್ತಾನ ಕಾರ್ಯಾಗಾರವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ದೇಶದ ಉತ್ತಮ ನಾಗರಿಕರನ್ನಾಗಿ ಸೃಷ್ಟಿಸುವಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಯಾಗಿ ಮಂಗಳೂರಿನ ತಜ್ಞ ವೈದ್ಯ ಡಾ. ಅಬ್ದುಲ್ ಮಜೀದ್ ಶುಭ ಹಾರೈಸಿದರು.
ನಿವೃತ್ತ ಐಎಎಸ್ ಅಧಿಕಾರಿ ಎ .ಬಿ ಇಬ್ರಾಹೀಂ ದಿಕ್ಸೂಚಿ ಭಾಷಣ ಮಾಡಿದರು. ಕರಾವಳಿಯ ಉಭಯ ಜಿಲ್ಲೆಗಳ ವಿದ್ಯಾರ್ಥಿಗಳು ಸರಕಾರಿ ಸೇವೆಯಲ್ಲಿ ಆಸಕ್ತಿ ಹೊಂದದಿರುವುದರಿಂದ, ಪ್ರೌಢ ಮತ್ತು ಪದವಿ ಹಂತದಲ್ಲೇ ನಾಗರಿಕ ಸೇವೆಗಳ (ಐಎಎಸ್, ಐಪಿಎಸ್) ಬಗ್ಗೆ ಅವರಲ್ಲಿ ಅರಿವು ಮೂಡಿಸಿ, ತಳಮಟ್ಟ ದಿಂದಲೇ ಪ್ರೇರಣೆ ನೀಡುವುದು ಕಾಲದ ಬೇಡಿಕೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ವಹಿಸಿ, ಸ್ವಾಗತಿಸಿ ದರು. ಐಎಎಸ್ ತರಬೇತುದಾರ ಮುಹಮ್ಮದ್ ಅಲಿ ರೂಮಿ ಹಾಗೂ ಪಿ.ಎ ಕಾಲೇಜಿನ ಡೀನ್ ಡಾ.ಸಯ್ಯದ್ ಅಮೀನ್ ಅಹ್ಮದ್ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ.
ಮೀಫ್ ವಿದ್ಯಾ ಸಂಸ್ಥೆಯ ಗುಣಮಟ್ಟವನ್ನು ತಳಮಟ್ಟದಿಂದಲೇ ಉತ್ತಮ ಪಡಿಸಲು ಕೈಗೊಂಡ ದೂರ ದೃಷ್ಟಿತ್ವದ ಈ ಮಹತ್ತರ ಯೋಜನೆಯ ರೂಪುರೇಖೆಯನ್ನು ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಆಹ್ಮದ್ ಕಣ್ಣೂರು ಸಭೆಯಲ್ಲಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಮೀಫ್ ಕೊಡಗು ಜಿಲ್ಲಾಧ್ಯಕ್ಷ ಶಾದಲಿ, ಪೂರ್ವ ವಲಯ ಉಪಾಧ್ಯಕ್ಷ ಕೆ. ಎಮ್. ಮುಸ್ತಫ ಸುಳ್ಯ, ಮಾಧ್ಯಮ ಕಾರ್ಯದರ್ಶಿ ಪಿ.ಎ ಇಲ್ಯಾಸ್ ಮತ್ತು ಸದಸ್ಯರುಗಳಾದ ಸಂಶುದ್ದೀನ್ ಕಾಪು, ರಝಾಕ್ ಗೊಳ್ತಮಜಲು, ಹೈದರ್ ಕಲ್ಲಡ್ಕ, ಬಿ.ಎ ನಝೀರ್ ಕೃಷ್ಣಾಪುರ, ಕೊಡಗು ಉಮ್ಮತ್ ಒನ್ ಸಂಸ್ಥೆಯ ಸಲೀಮ್ ನಾಪೋಕ್ಲು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ದ.ಕ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಒಟ್ಟು 38 ವಿದ್ಯಾಸಂಸ್ಥೆಗಳ ಶಿಕ್ಷಕರು ಮತ್ತು ಪದಾಧಿಕಾರಿಗಳು ಸೇರಿ 80 ಪ್ರತಿನಿಧಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ಶಾಹಾಮ್ ಮೂಡಬಿದ್ರೆ ಪ್ರಾರ್ಥಿಸಿದರು. ಕಾರ್ಯಕ್ರಮ ಕಾರ್ಯದರ್ಶಿ ಮುಹಮ್ಮದ್ ಶಾರಿಕ್ ಸ್ವಾಗತಿಸಿ, ಸಂಚಾಲಕ ಅನ್ವರ್ ಹುಸೈನ್ ವಂದಿಸಿದರು.