ಪಿಯುಸಿ ಫಲಿತಾಂಶ: ದ್ವಿತೀಯ ಸ್ಥಾನಕ್ಕಿಳಿದ ದ.ಕ. ಜಿಲ್ಲೆ; ವಾಣಿಜ್ಯ, ವಿಜ್ಞಾನದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್
ಮಂಗಳೂರು, ಎ.8: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಳೆದ ಐದು ವರ್ಷಗಳಿಂದ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿರುವ ದ.ಕ. ಜಿಲ್ಲೆ ಈ ಬಾರಿ ಶೇ. 93.57 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಇದೇ ವೇಳೆ ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಪಶ್ರೀ ಹಾಗೂ ವಿಜ್ಞಾನ ವಿಭಾಗದಲ್ಲಿ ಎಕ್ಸ್‌ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ತಲಾ 599 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ದಾಖಲಿಸಿದ್ದಾರೆ.
ಪಿಯುಸಿ ಪರೀಕ್ಷೆಯಲ್ಲಿ ಕಳೆದ ಬಾರಿ ಪ್ರಥಮ ಸ್ಥಾನ ಪಡೆದಿದ್ದ ದ.ಕ. ಜಿಲ್ಲೆ, ಶೇ. 97.37 ಫಲಿತಾಂಶ ದಾಖಲಿಸಿತ್ತು. ಈ ಬಾರಿ ಪ್ರಥಮ ಸ್ಥಾನ ಪಡೆದಿರುವ ನೆರೆಯ ಉಡುಪಿ ಜಿಲ್ಲೆ ಶೇ. 93.90 ಫಲಿತಾಂಶ ವನ್ನು ದಾಖಲಿಸಿಕೊಂಡಿದೆ.
ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಗೆ ದ.ಕ. ಜಿಲ್ಲೆಯಿಂದ ಒಟ್ಟು 36043 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 32903 ಮಂದಿ ಉತ್ತೀರ್ಣರಾಗಿದ್ದಾರೆ. ಪ್ರಥಮ ಬಾರಿಗೆ ಪರೀಕ್ಷೆ ಬರೆದ 34186 ಅಭ್ಯರ್ಥಿಗಳಲ್ಲಿ 31989 ಮಂದಿ ಉತ್ತೀರ್ಣರಾಗದ್ದಿು, ಖಾಸಗಿಯಾಗಿ 1556 ಮಂದಿ ಪರೀಕ್ಷೆ ಬರೆದಿದ್ದು, ಅವರಲ್ಲಿ 833 ಮಂದಿ ಉತ್ತೀರ್ಣರಾಗಿದ್ದಾರೆ. ಇದೇ ವೇಳೆ ಪ್ರಸಕ್ತ ಸಾಲಿನಲ್ಲಿ 301 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 81 ಮಂದಿ ಉತ್ತೀರ್ಣರಾಗಿದ್ದಾರೆ.
ಬಾಲಕಿಯರದ್ದೇ ಮೇಲುಗೈ
ದ.ಕ. ಜಿಲ್ಲೆಯಲ್ಲಿ ಒಟ್ಟು 17852 ಪುರುಷ ಅಭ್ಯರ್ಥಿಗಳಲ್ಲಿ 15852 ಮಂದಿ ಉತ್ತೀರ್ಣರಾಗಿ ಶೇ. 88.8 ಫಲಿತಾಂಶ ದಾಖಲಾಗಿದೆ. ಪರೀಕ್ಷೆ ಬರೆದ 18191 ವಿದ್ಯಾರ್ಥಿನಿಯರಲ್ಲಿ 17051 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಶೇ. 93.73 ಫಲಿತಾಂಶ ದಾಖಲಾಗುವ ಮೂಲಕ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಆಂಗ್ಲ ಮಾಧ್ಯಮದಲ್ಲಿ 32195 ಮಂದಿ ಪರೀಕ್ಷೆ ಬರೆದಿದ್ದು, 29950 ಮಂದಿ ಉತ್ತೀರ್ಣರಾಗಿ ಶೇ. 93.03 ಫಲಿತಾಂಶ ದಾಖಲಾಗಿದೆ. ಕನ್ನಡ ಮಾಧ್ಯಮದಲ್ಲಿ 3848 ಮಂದಿ ಪರೀಕ್ಷೆ ಬರೆದಿದ್ದು, ಅವರಲ್ಲಿ 2953 ಮಂದಿ ಉತ್ತೀರ್ಣರಾಗಿ ಶೇ. 76.74 ಫಲಿತಾಂಶ ದಾಖಲಾಗಿದೆ.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ 2265 ಮಂದಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 2000 ಮಂದಿ ಉತ್ತೀರ್ಣರಾಗಿ ಶೇ. 88.3 ಫಲಿತಾಂಶ ದಾಖಲಾಗಿದೆ. ಪರಿಶಿಷ್ಟ ಪಂಗಡದ 1354 ಅಭ್ಯರ್ಥಿಗಳಲ್ಲಿ 1224 ಮಂದಿ ಉತ್ತೀರ್ಣರಾಗಿ ಶೇ. 90.4 ಫಲಿತಾಂಶ ದಾಖಲಾಗಿದೆ.
ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ
ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪರೀಕ್ಷೆ ಬರೆದಿರುವ ಜತೆಗೆ ಶೇಕಡಾವಾರು ಫಲಿತಾಂಶದಲ್ಲಿಯೂ ಅಗ್ರಸ್ಥಾನವನ್ನು ವಿಜ್ಞಾನ ವಿಭಾಗ ಪಡೆದಿದೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 17598 ವಿದ್ಯಾರ್ಥಿಗಳಲ್ಲಿ 16869 ಮಂದಿ ಉತ್ತೀರ್ಣರಾಗಿ ಶೇ. 95.86 ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 14510 ಮಂದಿಯಲ್ಲಿ 12852 ಮಂದಿ ಉತ್ತೀರ್ಣರಾಗಿ ಶೇ. 88.57 ಫಲಿತಾಂಶ ದೊರಕಿದೆ.
ಕಲಾ ವಿಭಾಗದಲ್ಲಿ 3935 ಮಂದಿ ಪರೀಕ್ಷೆ ಬರೆದಿದ್ದು, 3182 ಉತ್ತೀರ್ಣರಾಗಿದ್ದು, ಶೇ. 80.86 ಫಲಿತಾಂಶ ದೊರಕಿದೆ.