ಇಬ್ಬರನ್ನು ಚೂರಿಯಿಂದ ಇರಿದು ಕೊಲೆಗೈದ ಪ್ರಕರಣ: ಮೂವರಿಗೆ ಶಿಕ್ಷೆ

Update: 2025-04-08 22:46 IST
ಇಬ್ಬರನ್ನು ಚೂರಿಯಿಂದ ಇರಿದು ಕೊಲೆಗೈದ ಪ್ರಕರಣ: ಮೂವರಿಗೆ ಶಿಕ್ಷೆ
  • whatsapp icon

ಮಂಗಳೂರು, ಎ.8: ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡಿದ ಚಿನ್ನದ ಗಟ್ಟಿ ಮಾರಾಟದಲ್ಲಿ ತಕರಾರು ನಡೆದು ಇಬ್ಬರನ್ನು ಉಪಾಯದಿಂದ ಕರೆಸಿ ಮಲಗಿದಲ್ಲಿಗೆ ಚೂರಿಯಿಂದ ಇರಿದು ಕೊಲೆಗೈದ ಪ್ರಕರಣದಲ್ಲಿ ಮೂವರ ವಿರುದ್ಧದ ಆರೋಪ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

ಕಾಸರಗೋಡು ತಾಲೂಕು ಚೆರ್ಕಳ ಮುಹಮ್ಮದ್ ಮುಹಜೀರ್ ಸನಾಫ್ (34), ಕಾಸರಗೋಡು ಆಣಂಗೂರು ಟಿ.ವಿ.ಸ್ಟೇಷನ್ ರಸ್ತೆ ನಿವಾಸಿ ಎ.ಮುಹಮ್ಮದ್ ಇರ್ಷಾದ್ (35), ಎ.ಮುಹಮ್ಮದ್ ಸಫ್ವಾನ್ (35) ಶಿಕ್ಷೆಗೊಳಗಾದ ಅಪರಾಧಿಗಳು. ನಾಫೀರ್ ಹಾಗೂ ಪಹೀಮ್ ಕೊಲೆಯಾದವರು.

* ಪ್ರಕರಣದ ಹಿನ್ನೆಲೆ: ಮೃತ ನಾಫೀರ್ ವಿದೇಶದಿಂದ ಚಿನ್ನದ ಗಟ್ಟಿಗಳನ್ನು ತಂದಿದ್ದು, ಫಹೀಮ್ ಆತನ ಸ್ನೇಹಿತನಾಗಿದ್ದ. ಅಪರಾಧಿಗಳು ಮೃತ ನಾಫೀರ್ ನಲ್ಲಿದ್ದ ಚಿನ್ನವನ್ನು ಮಾರಾಟ ಮಾಡಿ ಬಂದ ಹಣದಲ್ಲಿ ನಾಫೀರ್ ಮತ್ತು ಪಹೀಮ್ ತಕರಾರು ಮಾಡಿದರೆಂಬ ದ್ವೇಷದಿಂದ ಕೊಲೆ ಮಾಡುವ ಸಂಚು ರೂಪಿಸಿ ದ್ದರು. 2014 ಮೇ 15ರಂದು ಕಾಸರಗೋಡು ಬೇಡಡ್ಕ ಗ್ರಾಮದಲ್ಲಿ 10 ಸೆಂಟ್ಸ್ ಜಾಗವನ್ನು ಚಿನ್ನ ಮಾರಾಟ ಮಾಡಿ ಬಂದ ಹಣದಿಂದ ಖರೀದಿಸಿ, ಅಪರಾಧಿ ಸಫ್ವಾನ್ ಹೆಸರಿಗೆ ನೋಂದಣಿ ಮಾಡಿಸಿದ್ದರು. ಆ ಜಾಗದಲ್ಲಿ ನಾಫೀರ್ ಮತ್ತು ಫಹೀಮ್ ಅವರನ್ನು ಕೊಲೆ ಮಾಡಿದ ಬಳಿಕ ಅವರಿಬ್ಬರ ಹೆಣಗಳನ್ನು ಮಣ್ಣಿನಡಿ ಹಾಕಲು ಹೊಂಡಗಳನ್ನು ತೋಡಿ ಸಂಚು ರೂಪಿಸಿದ್ದರು.

ಅಪರಾಧಿಗಳು 2014 ಮೇ 15ರಂದು ಅತ್ತಾವರದಲ್ಲಿ ಬಾಡಿಗೆ ಮನೆ ಮಾಡಿದ್ದರು. ಮರುದಿನ ನಾಫೀರ್ ಮತ್ತು ಫಹೀಮ್ ಅವರನ್ನು ಕಾರಿನಲ್ಲಿ ಅತ್ತಾವರದಲ್ಲಿದ್ದ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿ ಒಡನಾಡಿಗಳಂತೆ ನಡೆದುಕೊಂಡು ವಾಸವಿದ್ದರು. ಅವರನ್ನು ಕೊಲೆ ಮಾಡಲು ಚೂರಿ ಖರೀದಿಸಿದ್ದರು. 2014 ಜು.1ರಂದು ಬೆಳಗ್ಗೆ ಕೊಠಡಿಯಲ್ಲಿ ಗಾಢ ನಿದ್ರೆಯಲ್ಲಿದ್ದ ಫಹೀಮ್ ಮತ್ತು ನಫೀರ್ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದರು. ಬಳಿಕ ಇಬ್ಬರ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿ ಮೊದಲೇ ಜಾಗ ಖರೀದಿಸಿ ಹೊಂಡ ತೋಡಿ ಸಿದ್ದಪಡಿಸಿದ್ದ ಸ್ಥಳದಲ್ಲಿ ಹೂತು ಹಾಕಿ ಸಾಕ್ಷ ನಾಶ ಮಾಡಲು ಯತ್ನಿಸಿದ್ದರು. ನಫೀರ್ ಮತ್ತು ಫಹೀಮ್ ಮಲಗಿದ್ದ ಕೋಣೆಗಳನ್ನು ಸ್ವಚ್ಛಗೊಳಿಸಿ, ರಕ್ತ ಸಿಕ್ತ ಹಾಸಿಗೆ, ಬಟ್ಟೆಗಳನ್ನು ಕಾರಿನಲ್ಲಿ ತುಂಬಿಸಿ ಕಾಸರಗೋಡು ಚಂದ್ರಗಿರಿ ನದಿಗೆ ಹಾಕಿ ಸಾಕ್ಷ ನಾಶ ಮಾಡಿದ್ದರು. ಜು.6ರಂದು ಉಳಿದ ಬಟ್ಟೆಗಳನ್ನು ಕಪ್ಪು ಬಣ್ಣದ ಗಾರ್ಬೇಜ್ ಚೀಲದಲ್ಲಿ ತುಂಬಿಸಿ ಕಾರಿನಲ್ಲಿ ಕೊಂಡೊ ಯ್ಯುತ್ತಿದ್ದಾಗ ಆಗಿನ ಇನ್‌ಸ್ಪೆಕ್ಟರ್ ವೆಲೆಂಟೈನ್ ಡಿಸೋಜ ಅವರಿಗೆ ಮಹಾಕಾಳಿ ಪಡ್ಪು ಬಳಿ ಸಿಕ್ಕಿ ಬಿದ್ದಿದ್ದರು. ಬಳಿಕ ದಕ್ಷಿಣ ಠಾಣೆಯ ಠಾಣಾಧಿಕಾರಿಯಾಗಿದ್ದ ದಿನಕರ್ ಶೆಟ್ಟಿ ಅವರ ಎದುರು ಹಾಜರುಪಡಿಸಿದ್ದರು. ಶವ ಹೂತ ಸ್ಥಳವಾದ ಕಾಸರಗೋಡಿನ ಬೇಡಡ್ಕ ಗ್ರಾಮದ ಶಂಕರಂಕಾಡು ಎಂಬಲ್ಲಿಗೆ ಅಪರಾಧಿಗಳೊಂದಿಗೆ ತೆರಳಿ ಕಾಸರಗೋಡು ತಹಶೀಲ್ದಾರರ ಸಮಕ್ಷಮ ಶವವನ್ನು ಹೂತ ಸ್ಥಳದಿಂದ ತೆಗೆದು ಶವಪರೀಕ್ಷೆ ನಡೆಸಿ ನಫೀರ್‌ನಿಗೆ ಸಂಬಂಧಪಟ್ಟ ಚಿನ್ನದ ಗಟ್ಟಿಗಳನ್ನು ಮಾರಾಟ ಮಾಡಿದ್ದ ವ್ಯಾಪಾರಿಯಿಂದ ಸುಮಾರು 2.500 ಕಿ.ಗ್ರಾಂ ಮತ್ತು ಅಪರಾಧಿಯ ಮನೆಯಿಂದ 200 ಗ್ರಾಂ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಫೋರೆನ್ಸಿಕ್ ವಿಭಾಗದ ವೈದ್ಯ ಡಾ.ಮಹಾಬಲ ಶೆಟ್ಟಿ ಅವರು ಶವ ಹೂತ ಸ್ಥಳಕ್ಕೆ ತಂಡದೊಂದಿಗೆ ತೆರಳಿ ಶವಪರೀಕ್ಷೆ ನಡೆಸಿ ವರದಿ ನೀಡಿದ್ದರು.

ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ಕೈಗೆತ್ತಿಕೊಂಡು 47 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿ ಒಟ್ಟು 97 ದಾಖಲೆಗಳನ್ನು ಗುರುತಿಸಲಾಗಿದೆ.

ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರ ನಿವೃತ್ತ ಸರ್ಕಾರಿ ಅಭಿಯೋಜಕ ರಾಜು ಪೂಜಾರಿ 14 ಸಾಕ್ಷಿದಾರರ ವಿಚಾರಣೆ ಮಾಡಿದ್ದು, ಸರ್ಕಾರಿ ಅಭಿಯೋಜಕರಾದ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಅವರು ಉಳಿದ ಸಾಕ್ಷಿ ವಿಚಾರಣೆ ನಡೆಸಿ, ಸರಕಾರದ ಪರ ವಾದ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News