ಅ.8-14: ವೆಂಕಟರಮಣ ದೇವಾಲಯದಲ್ಲಿ ಶ್ರೀ ಶಾರದಾ ಮಹೋತ್ಸವ

Update: 2024-09-23 10:19 GMT

ಮಂಗಳೂರು, ಸೆ.23: ನಗರದ ವೆಂಕಟರಮಣ ದೇವಾಲಯದ ಆಚಾರ್ಯರ ಮಠ ವಠಾರದಲ್ಲಿರುವ ವಸಂತ ಮಂಟಪದಲ್ಲಿ 102ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಅ.8ರಿಂದ 14ರವರೆಗೆ ನಡೆಯಲಿದೆ ಎಂದು ತಂತ್ರಿಗಳಾದ ಡಾ. ಪಂಡಿತ್ ನರಸಿಂಹಾಚಾರ್ಯ ತಿಳಿಸಿದರು.

ನಗರದ ಪ್ರೆಸ್ಕ್ಲಬ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 8ರಂದು ಶಾರದಾ ಮಾತೆಯ ವಿಗ್ರಹವನ್ನು ರಾಜಾಂಗಣದಿಂದ ಶ್ರೀ ಉಮಾ ಮಹೇಶ್ವರ ದೇವಳ ರಸ್ತೆ, ರಾಮಮಂದಿರ, ನಂದಾದೀಪ ರಸ್ತೆ, ಹೂಮಾರುಕಟ್ಟೆ ರಸ್ತೆ, ರಥಬೀದಿಯಾಗಿ ಉತ್ಸವ ಸ್ಥಾನಕ್ಕೆ ತರಲಾಗುವುದು. ಅ. 9ರಂದು ಬೆಳಗ್ಗೆ 7 ಗಂಟೆಗೆ ಪ್ರತಿಷ್ಠಾಪನೆ ನಡೆಯಿದೆ. ಅ. 13ರಂದು ದೀಪಾಂಲಕಾರ ಸಹಿತ ರಂಗಪೂಜೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10ರವರೆಗೆ ಶ್ರೀ ಶಾರದಾ ಮಾತೆಯ ದರ್ಶನ ಪಡೆಯಬಹದು. ಅ. 13ರಂದು ಕಾಳಿಕಾ ದೇವಿಯ ವಿಶೇಷ ಅಲಂಕಾರ ಇರಲಿದೆ. ಅಂದು ಬೆಳಗ್ಗೆ 10ಕ್ಕೆ ವಿದ್ಯಾರಂಭ ಕಾರ್ಯಕ್ರಮ ನಡೆಯಲಿದೆ. ಅ. 14ರಂದು ಸಂಜೆ 5 ಗಂಟೆಗೆ ಶ್ರೀ ಶಾರದಾ ಮಾತೆಗೆ ಪೂರ್ಣಾಲಂಕಾರ ನಡೆಯಲಿದೆ. ರಾತ್ರಿ 8 ಗಂಟೆಗೆ ಶಾರದಾ ಮಾತೆಯ ವಿಸರ್ಜನೆಯ ಶೋಭಾ ಯಾತ್ರೆ ನಡೆಯಲಿದೆ. ಉತ್ಸವ ಸ್ಥಾನದಿಂದ ಹೊರಡುವ ಮೆರವಣಿಗೆ ಶ್ರೀ ಮಹಾಮಾಯಿ ದೇವಾಲಯವಾಗಿ, ಕೆನರಾ ಹೈಸ್ಕೂಲ್ನಿಂದ ನ್ಯೂಚಿತ್ರಾ ಟಾಕೀಸ್, ಬಸವನಗುಡಿ, ಚಾಮರಗಲ್ಲಿ, ರಥ ಬೀದಿಯಾಗಿ ಶ್ರೀ ಮಹಾಮಾಯಿ ತೀರ್ಥದಲ್ಲಿ ಸಮಾಪನಗೊಳ್ಳಲಿದೆ. ಅ. 10ರದು ರಾತ್ರಿ 8ಕ್ಕೆ ದುರ್ಗಾ ನಮಸ್ಕಾರ ನಡೆದು ಬಳಿಕ 10 ಗಂಟೆಯವರೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ದೇವಿಗೆ ಅರ್ಪಿಸಲಾದ ಸೀರೆಗಳ ಏಲಂ ಅ. 20ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ ಎಂದು ಅವರು ಹೇಳಿದರು.

ಡಿಜೆ- ನಾಸಿಕ್ ಬ್ಯಾಂಡ್ ಗೆ ಅವಕಾಶವಿಲ್ಲ

ಶ್ರೀ ಶಾರದಾ ಮಾತೆಯ ವಿಸರ್ಜನಾ ಮಹೋತ್ಸವದ ಶೋಭಾ ಯಾತ್ರೆಯಲ್ಲಿ ಡಿಜೆ ಅಥವಾ ನಾಸಿಕ್ ಬ್ಯಾಂಡ್ ಗಳಿಗೆ ಅವಕಾಶ ನೀಡದಂತೆ ಸಮಿತಿ ನಿರ್ಧರಿಸಿದೆ ಎಂದು ಅವರು ಹೇಳಿದರು.

ತಿರುಪತಿ ಲಡ್ಡು ಪ್ರಕರಣ: ಸಾಮೂಹಿಕ ಪ್ರಾರ್ಥನೆ

ಶಾರದಾ ಮಹೋತ್ಸವದ 100ನೆ ಸಮಾರಂಭದಲ್ಲಿ ತಿರುಪತಿಯಿಂದ ಲಡ್ಡು ತಂದು ವಿತರಿಸಲಾಗಿತ್ತು. ಪ್ರಸಾದದ ಕಲಬೆರಕೆ ಬಗ್ಗೆ ಮಹೋತ್ಸವ ಸಮಿತಿ ಖಂಡಿಸುತ್ತಿದೆ. ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂಬ ನಿಟ್ಟಿನಲ್ಲಿ ಶಾರದಾ ಮಾತೆಯ ಪ್ರತಿಷ್ಠೆಯ ವೇಳೆ ಸಾಮೂಹಿಕ ಪ್ರಾರ್ಥನೆ ಪ್ರಾಯಶ್ಚಿತ ರೂಪದಲ್ಲಿ ನಡೆಸಲಾಗುವುದು ಎಂದು ಡಾ. ಪಂಡಿತ್ ನರಸಿಂಹಾಚಾರ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಹೋತ್ಸವ ಸಮಿತಿಯ ಪ್ರಮುಖರಾದ ಗಣೇಶ್ ಬಾಳಿಗಾ, ದತ್ತಾತ್ರೇಯ ಭಟ್, ಬಾಲಕೃಷ್ಣ ಶೆಣೈ, ಸತೀಶ್ ಪ್ರಭು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News