ಭಟ್ಕಳದಲ್ಲಿ ಮುಂದುವರಿದ ಮಳೆ; ಜಿಲ್ಲಾಧಿಕಾರಿ ಭೇಟಿ, ಸಾರ್ವಜನಿಕರ ಆಕ್ರೋಶ

Update: 2023-07-06 10:33 GMT

ಭಟ್ಕಳ: ಪಟ್ಟಣದಲ್ಲಿ ನೀರು ಸುಗಮವಾಗಿ ಹರಿದು ಹೋಗಲು ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಐಆರ್‌ಬಿ, ಪುರಸಭೆ ಹಾಗೂ ತಾಲೂಕಾಡಳಿತಕ್ಕೆ ಸೂಚನೆ ನೀಡಿದ್ದು ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ ಹೇಳಿದ್ದಾರೆ.

ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆ ಸುರಿದಿದ್ದು ರಸ್ತೆಗಳೆಲ್ಲಾ ಜಲಾವೃತವಾಗಿತ್ತು. ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು ಮಾತ್ರವಲ್ಲದೆ ಪಾದಾಚಾರಿಗಳು ಸಂಕಷ್ಟ ಅನುಭವಿಸಿದ್ದರು. ವಿದ್ಯಾರ್ಥಿಗಳಿಗೂ ರಸ್ತೆ ದಾಟಲು ಸಾಕಷ್ಟು ಅನಾನುಕೂಲವಾಗಿದ್ದು ಸಾರ್ವಜನಿಕರು ತಾಲೂಕಾಡಳಿತ ಮಾತ್ರವಲ್ಲದೆ ಜಿಲ್ಲಾಡಳಿತಕ್ಕೂ ಬಹಿರಂಗವಾಗಿ ಹಿಡಿಶಾಪ ಹಾಕಿದ್ದರು. ಭಟ್ಕಳದಲ್ಲಿ ಸಾರ್ವಜನಿಕರ ಅಸಮಾಧಾನ ಹೆಚ್ಚುತ್ತಿರುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ ಭಟ್ಕಳಕ್ಕೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

ನಂತರ ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ತಂಝೀಮ್, ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸಾರ್ವಜನಿಕರೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದು, ಅಪೂರ್ಣ ಹೆದ್ದಾರಿ ಕಾಮಗಾರಿ, ಅಸಮರ್ಪಕ ಒಳಚರಂಡಿ ಕಾಮಗಾರಿ ಕುರಿತಂತೆ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಮಳೆಗಾಲದ ಪೂರ್ವದಲ್ಲಿ ಈ ಕುರಿತು ಕ್ರಮ ಕೈಗೊಳ್ಳುವ ಬದಲು ಹಾನಿಯಾದ ಮೇಲೆ ಕ್ರಮಕ್ಕೆ ಬಂದಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಸೈನಿಕ ಶ್ರೀಕಾಂತ ಮಾತನಾಡಿ, ಭಟ್ಕಳದಲ್ಲಿ ರಾಜಕಾಲುವೆ ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ನೀರು ಸುಗಮವಾಗಿ ಹರಿದು ಹೋಗುತ್ತಿಲ್ಲ. ಮೊದಲು ಇದನ್ನು ಸರಿಪಡಿಸಿ ಎಂದು ಆಗ್ರಹಿಸಿದರು. ನಾಗರಿಕ ವೇದಿಕೆಯ ಸತೀಶ ಕುಮಾರ್ ನಾಯ್ಕ ಮಣಕುಳಿ, ಭೈಪಾಸ್ ಭಾಗದಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಸಂಕಷ್ಟದ ಕುರಿತು ಮಾಹಿತಿ ನೀಡಿದರು.

ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಕೆಲವು ತುರ್ತು ಕ್ರಮ ಕೈಗೊಳ್ಳುವಂತೆ ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ, ತಹಶಿಲ್ದಾರ ತಿಪ್ಪೆಸ್ವಾಮಿ ಅವರಿಗೆ ಸೂಚಿಸಿದರು. ಭಟ್ಕಳದ ಸಮಸ್ಯೆಗಳ ಕುರಿತು ಯಾಕೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿಲ್ಲ ಎಂದು ಪುರಸಭೆ ಅಧಿಕಾರಿ ಸುರೇಶ ಕುಮಾರ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ನಾಮಧಾರಿ ಸಮಾಜದ ಮುಖಂಡ ಎಂ.ಆರ್.ನಾಯ್ಕ, ರಾಬಿತಾ ಸೂಸೈಟಿಯ ಪ್ರಧಾನ ಕಾರ್ಯದರ್ಶಿ ಉದ್ಯಮಿ ಅತಿಕುರ್ರಹ್ಮಾನ್ ಮುನೀರಿ, ಮುಹಿದ್ದೀನ್ ರುಕ್ನುದ್ದೀನ್ ಕೊಚ್ಚಾಪ್ಪೋ, ಪುರಸಭೆ ಮಾಜಿ ಅಧ್ಯಕ್ಷ ಅಲ್ತಾಫ್ ಖರೂರಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಇದ್ದರು.

ಗುರುವಾರವೂ ಶಾಲೆ ಕಾಲೇಜುಗಳಿಗೆ ರಜೆ: ಭಟ್ಕಳ ತಾಲೂಕಿನಲ್ಲಿ ಅತಿಯಾಗಿ ಮಳೆ ಸುರಿಯುತ್ತಿರುವ ಕಾರಣ ಮಾನ್ಯ ಸಹಾಯಕ ಆಯುಕ್ತರ ನಿರ್ದೇಶನದ ಮೇರೆಗೆ ಜು.6 ರಂದು ಭಟ್ಕಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೊಗೇರ್ ಮಾಹಿತಿ ನೀಡಿದ್ದು, ಮುಂದಿನ ರಜಾದಿನಗಳಲ್ಲಿ ಶಾಲಾ ಕರ್ತವ್ಯದ ದಿನವನ್ನು ಸರಿದೂಗಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News