ಡ್ರಗ್ಸ್ ಮುಕ್ತ ದಕ್ಷಿಣ ಕನ್ನಡ; ಶಾಶ್ವತ ಕಾರ್ಯವಿಧಾನದಲ್ಲಿ ಸಮಾಜದ ಪಾತ್ರ ಪ್ರಮುಖ: ಮುಲ್ಲೈ ಮುಹಿಲನ್

Update: 2023-07-15 09:54 GMT

ಮಂಗಳೂರು, ಜು. 15: ಡ್ರಗ್ಸ್ ಮುಕ್ತ ದಕ್ಷಿಣ ಕನ್ನಡ ಜಿಲ್ಲೆಗಾಗಿ ಜಿಲ್ಲಾಡಳಿತವು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶಾಶ್ವತ ಕಾರ್ಯವಿಧಾನವನ್ನು ಒಂದು ತಿಂಗಳ ಕಾಲ ಜಿಲ್ಲೆಯಾದ್ಯಂತ ವಿಸ್ತರಿಸಲಿದ್ದು, ಇದಕ್ಕೆ ಶಾಲಾ ಕಾಲೇಜು ಪ್ರಮುಖರು, ಪೋಷಕರು ಸೇರಿದಂತೆ ಸಮಾಜದ ಕೈಜೋಡಿಸುವಿಕೆ ಅತ್ಯಗತ್ಯವಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.

ದ.ಕ. ಜಿಲ್ಲಾಡಳಿತವು ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ಪೊಲೀಸ್ ಇಲಾಖೆ, ನಗರದ ಸಂತ ಅಲೋಶಿಯಸ್ ಕಾಲೇಜಿನ ಸಹಯೋಗದಲ್ಲಿ ಶನಿವಾರ ವಿವಿಧ ಶೈಕ್ಷಣಿಕ ಸಂಸ್ಥೆಗಳ ಪ್ರಮುಖರಿಗಾಗಿ ಹಮ್ಮಿಕೊಂಡ ‘ಮಾದಕ ವ್ಯಸನಮುಕ್ತ ದಕ್ಷಿಣ ಕನ್ನಡ ಜಿಲ್ಲೆ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಡ್ರಗ್ಸ್ ವ್ಯಸನ ಒಂದು ಕೆಟ್ಟ ಅಭ್ಯಾಸ ಮಾತ್ರವಲ್ಲದೆ ಅದು ಒಂದು ಮಾನಸಿಕ ರೋಗವಾಗಿದ್ದು, ಅದಕ್ಕೆ ಚಿಕಿತ್ಸೆ ಅಗತ್ಯವಾಗಿದೆ. ಈ ಪಿಡುಗನ್ನು ಬೇರು ಸಹಿತ ಕಿತ್ತು ಹಾಕುವ ದೃಷ್ಟಿಯಿಂದ ಜಿಲ್ಲಾಡಳಿತ ಶಾಶ್ವತ ಕಾರ್ಯವಿಧಾನವನ್ನು ರೂಪಿಸಿಕೊಂಡಿದೆ. ಜಿಲ್ಲೆಯು ಸಂಪೂರ್ಣವಾಗಿ ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗಿಲ್ಲ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಇಲ್ಲಿ ಡ್ರಗ್ಸ್ ಗಳ ಬೇಡಿಕೆ ಹಾಗೂ ಲಭ್ಯತೆ ತೀವ್ರಗೊಂಡಿರುವುದಕ್ಕೆ ಅಂಶುಕ ಹಾಕಬೇಕಾಗಿದೆ. ಸರಕಾರದಿಂದ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುವ ಜತೆಯಲ್ಲೇ ಸಾಮಾಜಿಕವಾಗಿ, ಸಾರ್ವಜನಿಕ ಪಾಲ್ಗೊಳ್ಳುವಿಕೆಯೂ ಅತೀ ಅಗತ್ಯವಾಗಿದೆ. ಶಾಲಾ ಕಾಲೇಜುಗಳಲ್ಲಿ ಈಗಾಗಲೇ ಡ್ರಗ್ಸ್ ವಿರೋಧಿ ಸಮಿತಿಗಳನ್ನು ರಚಿಸಲು ಸೂಚಿಸಲಾಗಿದೆ. ಅವುಗಳನ್ನು ವಿಸ್ತರಿಸುವ ಕಾರ್ಯ ಈ ಅಭಿಯಾನದಲ್ಲಿ ಆಗಲಿದೆ ಎಂದರು.

ಇದೇ ವೇಳೆ ಪೊಲೀಸ್ ಇಲಾಖೆಯು ವ್ಯಸನಿಗಳಿಗೆ ಕೌನ್ಸೆಲಿಂಗ್ ಮಾಡುವ ಕಾರ್ಯವನ್ನು ನಡೆಸುತ್ತಿದೆ. ಶಾಲಾ ಕಾಲೇಜುಗಳ ಘನತೆಯನ್ನು ಕಾಯ್ದುಕೊಂಡು ಗೌಪ್ಯವಾಗಿ ಡ್ರಗ್ಸ್ ವ್ಯಸನಿಗಳನ್ನು ಪತ್ತೆ ಹಚ್ಚಿ ಅವರನ್ನು ಅದರಿಂದ ಹೊರ ತರುವಲ್ಲಿ ಶಾಲಾ ಪ್ರಮುಖರು ಸಹಕರಿಸಬೇಕಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಐದಾರು ಸಭೆಗಳನ್ನು ನಡೆಸಿ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಂಡಿದೆ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಅಥವಾ ಅಗತ್ಯ ಶಿಕ್ಷಣ ಸಂಸ್ಥೆಗಳಲ್ಲಿ ನಿಯಮಿತವಾಗಿ ಡ್ರಗ್ಸ್ ಸೇವನೆ ಬಗ್ಗೆ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ಅಗತ್ಯತೆಯ ಬಗ್ಗೆಯೂ ಚರ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.

ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಅಭಿಯಾನ ಆಗಸ್ಟ್ 15ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಡ್ರಗ್ಸ್ ಮುಕ್ತ ದಕ್ಷಿಣ ಕನ್ನಡ ಜಿಲ್ಲೆಯನ್ನಾಗಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಹಿರಿಯ ಮನೋರೋಗ ತಜ್ಞ ಡಾ. ರವೀಶ್ ತುಂಗ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.

ಸೈಂಟ್ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ.ಡಾ. ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಐಎಎಸ್ಪ್ರೊಬೆಷನರ್ ಅಧಿಕಾರಿ ಮುಕುಲ್ ಜೈನ್, ಡಿಸಿಪಿ ದಿನೇಶ್ ಕುಮಾರ್, ಲಿಂಕ್ ಡಿಎಡಿಕ್ಷನ್ ಸೆಂಟರ್ನ ಲಿಡಿಯಾ ಲೋಬೋ, ವೆನ್ಲಾಕ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಸದಾಶಿವ ಶ್ಯಾನುಬೋಗ್, ಡಾ. ಸುಪ್ರಿತಾ ಮೊದಲಾದವರು ಉಪಸ್ಥಿತರಿದ್ದರು.

ಡಾ. ಸುದರ್ಶನ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News