ನೇಪಾಳ ಮೂಲದ ಮಹಿಳೆಯ ಭೀಕರ ಹತ್ಯೆ ಪ್ರಕರಣ | ಆರೋಪಿಯ ಗುರುತು ಪತ್ತೆ, ಶೀಘ್ರವೇ ಬಂಧಿಸುತ್ತೇವೆ : ಬಿ.ದಯಾನಂದ್
ಬೆಂಗಳೂರು : ನೇಪಾಳ ಮೂಲದ ಮಹಾಲಕ್ಷ್ಮೀ ಎಂಬ ಮಹಿಳೆಯ ಹತ್ಯೆಗೈದು, ಮೃತದೇಹವನ್ನು 30ಕ್ಕೂ ಹೆಚ್ಚು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಆರೋಪಿಯ ಗುರುತು ಪತ್ತೆಯಾಗಿದೆ. ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪಿಯು ಹೊರ ರಾಜ್ಯದವನು ಎಂಬ ಮಾಹಿತಿ ಲಭ್ಯವಾಗಿದ್ದು, ಆತನಿಗಾಗಿ ಹುಡುಕಾಟ ಮುಂದುವರೆದಿದೆ. ಆರೋಪಿ ಬೆಂಗಳೂರಿನಲ್ಲಿ ವಾಸವಾಗಿದ್ದ ಎಂಬುವುದು ತಿಳಿದುಬಂದಿದ್ದು, ಈ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.
ಪ್ರಕರಣ ಸಂಬಂಧ ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಪ್ರಮುಖ ಆರೋಪಿಯನ್ನು ಗುರುತಿಸಿ ಆತನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ಆತನ ಬಂಧನದ ಬಳಿಕ ಸ್ಪಷ್ಟವಾದ ಮತ್ತಷ್ಟು ಸತ್ಯಗಳು ಹೊರಬರಬರುತ್ತವೆ ಎಂದು ಅವರು ಹೇಳಿದರು.
ವರದಿ ಕೇಳಿದ ಮಹಿಳಾ ಆಯೋಗ..!
ನೇಪಾಳ ಮೂಲದ ಮಹಾಲಕ್ಷ್ಮೀ ಎಂಬ ಮಹಿಳೆಯ ಮೃತದೇಹವನ್ನು ಆರೋಪಿಯು 30ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿಟ್ಟಿದ್ದ ಫ್ರಿಡ್ಜ್ ಅನ್ನು ವಶಕ್ಕೆ ಪಡೆದು ಲ್ಯಾಬ್‍ಗೆ ಗೂಡ್ಸ್ ವಾಹನದ ಮೂಲಕ ಅದನ್ನು ಕಳುಹಿಸಿರುವುದಾಗಿ ಗೊತ್ತಾಗಿದೆ. ಇನ್ನು ಪ್ರಕರಣದ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗವು ಆರೋಪಿಯನ್ನು ತ್ವರಿತವಾಗಿ ಬಂಧಿಸಬೇಕೆಂದು ಒತ್ತಾಯಿಸಿದೆ. ಈ ಪ್ರಕರಣದ ತನಿಖೆ ಪಾರದರ್ಶಕವಾಗಿರಬೇಕು. ಮೂರು ದಿನಗಳೊಳಗಾಗಿ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ವರದಿ ನೀಡಬೇಕೆಂದು ಮಹಿಳಾ ಆಯೋಗವು ತಿಳಿಸಿದೆ.