"ಪ್ರಧಾನಿ ಮೋದಿ ವಾರಕ್ಕೆ 100 ಗಂಟೆವರೆಗೆ ಕೆಲಸ ಮಾಡುತ್ತಾರೆ": 6 ದಿನಗಳ ಕೆಲಸದ ಅವಧಿ ಪರ ತಮ್ಮ ನಿಲುವನ್ನು ಪುನರುಚ್ಚರಿಸಿದ ನಾರಾಯಣಮೂರ್ತಿ

Update: 2024-11-15 12:09 GMT

 ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ | PC : X 

ಬೆಂಗಳೂರು: ವಾರದಲ್ಲಿ ಆರು ದಿನಗಳ ಕಾಲ ಕೆಲಸದ ಅವಧಿಯನ್ನು ನಿಗದಿಪಡಿಸುವ ಪರ ತಮ್ಮ ನಿಲುವನ್ನು ದೃಢವಾಗಿ ಪುನರುಚ್ಚರಿಸಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ, ಭಾರತದ ಆರ್ಥಿಕ ಬೆಳವಣಿಗೆಗೆ ಕಠಿಣ ಪರಿಶ್ರಮ ಹಾಗೂ ಅರ್ಪಣಾ ಮನೋಭಾವದ ಅಗತ್ಯವಿದೆ ಎಂಬ ತಮ್ಮ ನಂಬಿಕೆಯನ್ನು ಪ್ರಕಟಿಸಿದ್ದಾರೆ.

ಕೆಲಸದ ನೈತಿಕತೆ ಕುರಿತು ಸದಾ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ನಾರಾಯಣಮೂರ್ತಿ, ವಾರದಲ್ಲಿ ಆರು ದಿನಗಳ ಕೆಲಸದ ಅವಧಿಯನ್ನು ಐದು ದಿನಗಳಿಗೆ ತಗ್ಗಿಸಿದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು ಈ ಬದಲಾವಣೆಗೆ ಎಂದೂ ಸಮ್ಮತಿ ವ್ಯಕ್ತಪಡಿಸಿಲ್ಲ.

CNBC Global Leadership Summit ಕಾರ್ಯಕ್ರಮದಲ್ಲಿ ಮಾತನಾಡಿದ ನಾರಾಯಣಮೂರ್ತಿ, ಈ ವಿಷಯದ ಕುರಿತು ತಮ್ಮ ನಿಲುವನ್ನು ಪುನರುಚ್ಚರಿಸಿದರು.

“ಕ್ಷಮೆಯಿರಲಿ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಕೆಲಸದ ಅವಧಿ ಕುರಿತು ನಾನು ಸತ್ತರೂ ನನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದಿಲ್ಲ” ಎಂದು ಶೆರೀನ್ ಭಾನ್ ರೊಂದಿಗಿನ ಮಾತುಕತೆಯಲ್ಲಿ ಹೇಳಿದ್ದಾರೆ.

ರಾಷ್ಟ್ರದ ಪ್ರಗತಿಗೆ ಕಠಿಣ ಪರಿಶ್ರಮ ಅಗತ್ಯ ಎಂದು ಪ್ರತಿಪಾದಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸಿ “ಪ್ರಧಾನಿ ಮೋದಿಯೇ ಅಷ್ಟು ಕಠಿಣ ಪರಿಶ್ರಮ ತೋರುತ್ತಿರುವಾಗ, ನಾವು ನಮ್ಮ ಸುತ್ತಲಿನ ಕೆಲಸಗಳನ್ನೂ ಅಷ್ಟೇ ಪರಿಶ್ರಮದಿಂದ ಮಾಡುವ ಮೂಲಕವಷ್ಟೇ ಅವರ ಕೆಲಸಕ್ಕೆ ಮೆಚ್ಚುಗೆ ಸಲ್ಲಿಸಬಹುದಾಗಿದೆ” ಎಂದು ಅಭಿಪ್ರಾಯ ಪಟ್ಟರು.

ಪ್ರಧಾನಿ ಮೋದಿ ಅವರು ವಾರಕ್ಕೆ 100 ಗಂಟೆವರೆಗೆ ಕೆಲಸ ಮಾಡುತ್ತಾರೆ. ದೇಶದ ಯುವಕರು ಅವರಿಗೆ ಮೆಚ್ಚುಗೆ ಸೂಚಿಸಬೇಕಾದರೆ ಅವರಂತೆಯೇ ವಾರಕ್ಕೆ ಕನಿಷ್ಠ 70 ತಾಸಾದರೂ ಕೆಲಸ ಮಾಡಬೇಕು ಎಂದಿದ್ದಾರೆ.

ಬಲಿಷ್ಠವಾದ ಕೆಲಸದ ನೈತಿಕತೆ ಇಲ್ಲದೆ ಹೋದರೆ, ದೇಶವು ಜಾಗತಿಕ ಸ್ಪರ್ಧಿಗಳೊಂದಿಗೆ ಹೋರಾಡಲು ತ್ರಾಸ ಅನುಭವಿಸಲಿದೆ ಎಂದೂ ಅವರು ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News