ರೈತರಿಗೆ ತೊಂದರೆ ಕೊಟ್ಟರೆ ಬಿಜೆಪಿ ಬೀದಿಗಿಳಿಯಲಿದೆ : ಬಿ.ವೈ.ವಿಜಯೇಂದ್ರ

Update: 2024-11-15 12:36 GMT

ಬಿ.ವೈ.ವಿಜಯೇಂದ್ರ

ಬೆಂಗಳೂರು : ವಕ್ಫ್ ಆಸ್ತಿ ನೆಪದಲ್ಲಿ ಉಳುಮೆ ಮಾಡುವ ರೈತರಿಗೆ ಅಧಿಕಾರಿಗಳು ಕಿರುಕುಳ ಅಥವಾ ತೊಂದರೆ ಕೊಟ್ಟರೆ ಬಿಜೆಪಿ ರೈತರ ಪರವಾಗಿ ಬೀದಿಗಿಳಿಯಲಿದೆ. ಅನ್ನದಾತರ ಮೇಲೆ ಲಾಠಿ ಪ್ರಯೋಗಿಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸರಕಾರ ಈ ಕೂಡಲೇ ಕ್ರಮ ಜರುಗಿಸಲಿ. ಈ ಘಟನೆಯ ಕುರಿತು ರಾಜ್ಯದ ರೈತ ಸಮುದಾಯಕ್ಕೆ ಸಿಎಂ ಸ್ಪಷ್ಟನೆ ನೀಡಿ ಈ ಕುರಿತು ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಆಗ್ರಹಿಸಿದ್ದಾರೆ.

ಶುಕ್ರವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ವಕ್ಫ್ ಆಸ್ತಿ ಕಿಚ್ಚು ದಿನದಿಂದ ದಿನಕ್ಕೆ ರೈತರ ನೆಮ್ಮದಿಗೆ ದಕ್ಕೆ ತರುವ ಹಂತಕ್ಕೆ ತಲುಪುತ್ತಿರುವುದನ್ನು ಗಮನಿಸಿದರೆ ಮೂರು ಕ್ಷೇತ್ರಗಳ ಉಪಚುನಾವಣೆ ಮುಗಿದ ಬೆನ್ನಲ್ಲೇ ರೈತರ ಭೂಮಿ ಕಿತ್ತುಕೊಳ್ಳಲು ಕಾಂಗ್ರೆಸ್ ಸರಕಾರವೇ ಅಧಿಕಾರಿಗಳಿಗೆ ಸೂಚಿಸಿರುವ ಶಂಕೆ ವ್ಯಕ್ತವಾಗುತ್ತಿದೆ’ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

‘ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಜಮೀನಿನಲ್ಲಿ ಉಳುಮೆ ಮಾಡಲು ಮುಂದಾಗಿದ್ದ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಖಂಡನೀಯ. ಅಲ್ಲದೇ ರೈತರ ಟ್ರ್ಯಾಕ್ಟರ್‌ ಅನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿರುವ ನಡೆ ತುಘಲಕ್ ದರ್ಬಾರ್ ನೆನಪಿಸುವಂತಿದೆ’ ಎಂದು ಅವರು ಟೀಕಿಸಿದ್ದಾರೆ.

ಸರಕಾರವನ್ನು ಸುಡುವ ದಿನ ದೂರವಿಲ್ಲ: ‘ಸಿಎಂ ಸಿದ್ದರಾಮಯ್ಯನವರೇ, ರೈತರ ಜಮೀನಿನ ಮೇಲೆ ಕಬ್ಜಾ ಮಾಡಿದ್ದು ಅಲ್ಲದೆ, ಅವರ ಮೇಲೆ ಲಾಠಿ ಪ್ರಹಾರ ಮಾಡಿ, ಟ್ರ್ಯಾಕ್ಟರ್ ವಶಕ್ಕೆ ಪಡೆದು ಅವರ ವಿರುದ್ಧ ದೂರು ದಾಖಲಿಸಿಕೊಂಡಿದ್ದೀರಲ್ಲ, ನಿಮಗೆ ನಾಡಿನ ರೈತರಿಗಿಂತ ಓಲೈಕೆ ರಾಜಕಾರಣವೇ ಹೆಚ್ಚಾಯ್ತ?. ಅನ್ನ ಹಾಕುವ ಕೈಗಳಿಗೆ ಕೋಳ ತೊಡಿಸುವ ಸರಕಾರದ ಪಾಪದ ಕೊಡ ತುಂಬಿದೆ. ಅನ್ನದಾತರ ಶಾಪ ಈ ಸರಕಾರವನ್ನು ಸುಡುವ ದಿನ ದೂರವಿಲ್ಲ’

-ಆರ್.ಅಶೋಕ್ ವಿಪಕ್ಷ ನಾಯಕ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News