ಚುನಾವಣೆ ಬಂದಾಗ ಮಾಧ್ಯಮಗಳು ಧರ್ಮದ ವಿಚಾರ ತರುವುದೇಕೆ? : ಡಿ.ಕೆ.ಸುರೇಶ್
ಬೆಂಗಳೂರು : ವಕ್ಫ್ ಆಸ್ತಿ ವಿಚಾರದಲ್ಲಿ ರೈತರ ಜಮೀನಿನ ಖಾತೆ ಬದಲಾವಣೆ ಮಾಡಿರುವುದು 2019ರಿಂದ 2022ರವರೆಗೆ. ಆಗ ಅಧಿಕಾರದಲ್ಲಿದ್ದಿದ್ದು ಬಿಜೆಪಿ ಸರಕಾರ. ಚುನಾವಣೆ ಬಂದಾಗ ಮಾಧ್ಯಮಗಳು ಧರ್ಮದ ವಿಚಾರ ತರುತ್ತೀರಿ. ಚನ್ನಪಟ್ಟಣದಲ್ಲೂ 2019ರಲ್ಲಿ ಖಾತೆ ಬದಲಾವಣೆಯ ಆರ್‌ಟಿಸಿ ನೀಡಿದ್ದಾರೆ. ಅವತ್ತಿನಿಂದ ಇಲ್ಲದಿರುವ ಜಾತಿ, ಧರ್ಮಗಳ ವಿಚಾರ, ಚುನಾವಣೆ ಸಮಯದಲ್ಲಿ ಮಾತ್ರ ಯಾಕೆ ಬಂತು? ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದರು.
ಶುಕ್ರವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿರೋಧ ಪಕ್ಷಗಳ ರಾಜಕೀಯಕ್ಕೆ ಮಾಧ್ಯಮಗಳು ಅಸ್ತ್ರವಾಗುತ್ತಿಲ್ಲವೇ? ದೇಶದ ಒಗ್ಗಟ್ಟಿಗಾಗಿ, ಸಮಾಜದ ಒಳಿತಿಗಾಗಿ ನೀವು ನಮ್ಮನ್ನು ತಿದ್ದುವ ಪ್ರಯತ್ನ ಮಾಡುತ್ತಿದ್ದೀರಾ? ನಾವು ನಿಮ್ಮನ್ನು ಬಹಳ ಗೌರವಿಸುತ್ತೇವೆ" ಎಂದು ಹೇಳಿದರು.
ʼಈ ಹಿಂದೆ ಮಾಧ್ಯಮಗಳು ತಮ್ಮದೇ ಆದ ಪಾತ್ರ ವಹಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಚುನಾವಣೆ ಬಂದಾಗ ಮಾತ್ರ ಮಾಧ್ಯಮಗಳು ಬೇರೆ ರೀತಿ ವರ್ತಿಸುತ್ತಿವೆ. ಮಾಧ್ಯಮಗಳ ನೈತಿಕತೆಯನ್ನು ತಕ್ಕಡಿಯಲ್ಲಿ ತೂಗಬೇಕಾಗಿದೆ ಎಂದು ಹೇಳಿದ ಸುರೇಶ್, ಮತದಾನದ ದಿನ ಮಧ್ಯಾಹ್ನ 3 ಗಂಟೆವರೆಗೂ ನೀವು ಆ ವಿಚಾರ ಚರ್ಚೆ ಮಾಡುತ್ತೀರಿ. ನಂತರ ಆ ಚರ್ಚೆ ನಿಲ್ಲಿಸುತ್ತೀರಿ. ನಮಗೆ ನೋವಾಗುವುದಿಲ್ಲವೇ?ʼ ಎಂದು ಹೇಳಿದರು.
ʼಝಮೀರ್ ಅಹ್ಮದ್ ಅವರ ಹೇಳಿಕೆ ಆಕ್ಷೇಪಾರ್ಹವಾಗಿದ್ದರೆ, ಅವರೂ ಆಕ್ಷೇಪಣೆ ಮಾಡಬೇಕಿತ್ತು. ಪ್ರತಿಪಕ್ಷಗಳು ಅನೇಕ ಸಂದರ್ಭದಲ್ಲಿ ಅನೇಕ ಹೇಳಿಕೆ ನೀಡುತ್ತವೆ. ಡಿ.ಕೆ.ಶಿವಕುಮಾರ್ ಅವರನ್ನು ಕಳ್ಳ, ಲೂಟಿಕೋರ, 100 ರೂಪಾಯಿಗೆ ಕೂಲಿಗೆ ಇದ್ದ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದಾಗ, ಅವರು ಎಲ್ಲಿ ಕದ್ದಿದ್ದಾರೆ ಎಂದು ಮಾಧ್ಯಮಗಳು ಏಕೆ ಪ್ರಶ್ನೆ ಮಾಡಲಿಲ್ಲ. ನಿಮ್ಮ ಮೌಲ್ಯಗಳು ಕೂಡ ಈ ಸಂದರ್ಭದಲ್ಲಿ ಪ್ರಶ್ನೆಗೆ ಒಳಪಟ್ಟಿವೆʼ ಎಂದು ಅವರು ತಿಳಿಸಿದರು.
ದೇವೇಗೌಡರ ಕುಟುಂಬವನ್ನೆ ಖರೀದಿ ಮಾಡುತ್ತೇನೆ ಎಂದು ಝಮೀರ್ ಹೇಳಿಕೆ ನೀಡಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಮಾಧ್ಯಮಗಳು ಝಮೀರ್ ಹೇಳಿಕೆ ತಿರುಚಿದ್ದಾರೆ. ಚುನಾವಣೆ ಸಮಯದಲ್ಲಿ ಜೆಡಿಎಸ್ ನವರು ಮತದಾರರಿಗೆ ಹಣ ಹಂಚಿ ಮತ ಖರೀದಿ ಮಾಡುತ್ತಿದ್ದಾರೆ. ನೀವು ಅದನ್ನು ಪಡೆಯಬೇಡಿ ಎಂದು ಹೇಳಿದ್ದಾರೆ.
ಅಲ್ಲದೇ, ಕುಮಾರಸ್ವಾಮಿ ಹಣದ ಹೊಳೆ ಹರಿಸುತ್ತಿದ್ದು, ನೀವು ಅದಕ್ಕೆ ಬಲಿಯಾಗಬೇಡಿ. ನಾವೇ ನಿಮಗೆ ಏನು ಬೇಕೋ ಕೊಡುತ್ತೇವೆ ಎಂದು ಝಮೀರ್ ಅಹ್ಮದ್ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೇ, ಅವರ ಹೇಳಿಕೆ ಕುರಿತು ಕೂಡಲೇ ಸ್ಪಷ್ಟನೆಯನ್ನು ನೀಡಿದ್ದಾರೆ ಎಂದು ಸುರೇಶ್ ತಿಳಿಸಿದರು.
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಹಣದ ಹೊಳೆ ಹರಿಸಿದ್ದಾರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚನ್ನಪಟ್ಟಣದವರನ್ನು ಹೋಗಿ ಕೇಳಿ. ಇಲ್ಲಿ ಕೆಲಸಕ್ಕೆ, ಸಮಾಜ ಸೇವೆಗೆ ಬೆಲೆ ಇಲ್ಲ. ಇಲ್ಲಿ ಹಣ, ಜಾತಿ, ಧರ್ಮ ಮಾತ್ರ ಜನರಿಗೆ ಬೇಕಾಗಿದೆ. ಕೆಲಸ ಮಾಡಿದ್ದೀನಿ ಮತ ಹಾಕಿ ಎಂದುಕೊಳ್ಳುವ ಪರಿಸ್ಥಿತಿಯಲ್ಲಿ ಯಾವುದಾದರೂ ರಾಜಕಾರಣಿ ಇದ್ದರೆ ಅವರ ರಾಜಕಾರಣ ಕಷ್ಟವಾಗುತ್ತದೆ. ಸುಳ್ಳು ಹೇಳುವುದನ್ನು ಕಲಿಯಬೇಕು. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಬೇರೆ ಬೇರೆ ಸುಳ್ಳು ಹೇಳಬೇಕು ಎಂದು ಹೇಳಿದರು.