ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ ಖರೀದಿ | 20 ಸಾವಿರ ರೈತರಿಗೆ ಅನುಕೂಲ : ಕೆ.ಎಚ್.ಮುನಿಯಪ್ಪ

Update: 2024-11-15 13:43 GMT

ಕೆ.ಎಚ್.ಮುನಿಯಪ್ಪ

ಬೆಂಗಳೂರು : ನಮ್ಮ ಸರಕಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳವನ್ನು ಖರೀದಿಸುತ್ತಿದ್ದು, ಸುಮಾರು 20 ಸಾವಿರಕ್ಕೂ ಅಧಿಕ ರೈತರಿಗೆ ಅನುಕೂಲವಾಗುತ್ತಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ಶುಕ್ರವಾರ ಜಿಕೆವಿಕೆ ಆವರಣದಲ್ಲಿ ಕೃಷಿ ವಿಶ್ವವಿದ್ಯಾಲಯವು ಆಯೋಜಿಸಿದ್ದ ಕೃಷಿ ಮೇಳದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಜನರು ಬೆಳೆಯುವ ಜೋಳವನ್ನು ಖರೀದಿಸಿ 14 ಜಿಲ್ಲೆಗಳ ಜನರಿಗೆ ವಿತರಿಸಲು ಸಹಕಾರಿಯಾಗುತ್ತದೆ ಎಂದರು.

ಕೃಷಿ ಮೇಳವು ರೈತರಿಗೆ ಹೊಸ ಹೊಸ ಬೆಳೆಗಳನ್ನು ಬೆಳೆಯುವುದರ ಕುರಿತು ಮತ್ತು ಕೃಷಿಗೆ ಬೇಕಾದ ಗೊಬ್ಬರಗಳ ಹಾಗೂ ಕೃಷಿ ಯಂತ್ರೋಪಕರಣಗಳ ಕುರಿತು ಜನರಿಗೆ ಅರಿವು ಮೂಡಿಸುವ ಒಂದು ಪ್ರಮುಖ ಮೇಳವಾಗಿದೆ ಎಂದು ಅವರು ಹೇಳಿದರು.

ನಾಲ್ಕು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ವಿದ್ಯಾರ್ಥಿಗಳು ರೈತರು ಹಲವಾರು ಮಾಹಿತಿಗಳನ್ನು ತಿಳಿಯಬಹುದು. ಜೊತೆಗೆ ವಿಶ್ವವಿದ್ಯಾಲಯ ಆಯೋಜಿಸಿರುವ ಹಲವಾರು ಮಳಿಗೆಗಳಿಂದ ಹೆಚ್ಚಿನ ಮಾಹಿತಿಯನ್ನು ಜನರು ಪಡೆಯಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.

ದೇಶದಲ್ಲಿ ಸುಮಾರು ಶೇ.70ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದು ರೈತನೇ ದೇಶದ ಬೆನ್ನೆಲುಬಾಗಿದ್ದಾನೆ. ರೈತನಿಲ್ಲದೇ ನಾವು ನೀವು ಬದುಕಲು ಸಾದ್ಯವಿಲ್ಲ. ರೈತನೇ ಅನ್ನದಾತನು ಅವರ ರಕ್ಷಣೆ ಅತಿ ಮುಖ್ಯವಾಗಿದ್ದು, ನಮ್ಮ ಸರಕಾರ ರೈತರಿಗೆ ಬೆಂಬಲ ಬೆಲೆ ನೀಡುತ್ತಿದೆ. ಈ ಮೂಲಕ ರೈತರು ಬೆಳೆಯುವ ಸಾಮಗ್ರಿಗಳನ್ನು ನೇರವಾಗಿ ಖರೀದಿಸಿ ಗ್ರಾಹಕರಿಗೆ ಉತ್ತಮ ಬೆಲೆಯಲ್ಲಿ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಿದರು. ಕೃಷಿ ಮಹಾವಿದ್ಯಾಲಯದ ಕುಲಪತಿ ಡಾ.ಸುರೇಶ್, ವಿಶ್ರಾಂತ ಕುಲಪತಿ ಶಿವಣ್ಣ, ಮಂಜುನಾಥ ಗೌಡ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News