ಕಾಂಗ್ರೆಸ್ ಘಟಾನುಘಟಿಗಳಿಂದ ತಮ್ಮದೇ ಪಕ್ಷದ ಶಾಸಕರ ಖರೀದಿಗೆ ಪ್ರಯತ್ನ: ವಿಜಯೇಂದ್ರ

Update: 2024-11-15 12:15 GMT

ಬಿ.ವೈ.ವಿಜಯೇಂದ್ರ

ಬೆಂಗಳೂರು : ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಹಿನ್ನಡೆ ಆಗುವುದಾಗಿ ಖಾತ್ರಿಯಾಗಿ, ಕಾಂಗ್ರೆಸ್ಸಿನ ಘಟಾನುಘಟಿಗಳು ಇವತ್ತು ಸಾವಿರಾರು ಕೋಟಿ ರೂ.ಗಳೊಂದಿಗೆ ತಮ್ಮದೇ ಪಕ್ಷದ ಶಾಸಕರನ್ನು ಖರೀದಿ ಮಾಡುತ್ತಿದ್ದಾರೆಂಬ ಮಾಹಿತಿ ನಮಗೂ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಶುಕ್ರವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಈ ಮಾಹಿತಿ ಸಿಕ್ಕಿದೆ. ಹಾಗಾಗಿ, ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಆರೋಪ ಮಾಡಲು ಸಾಧ್ಯವಾಗದೇ ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ದೂರಿದರು.

ರಾಜೀನಾಮೆ ಕೊಡುವ ಕಾಲ ಸನ್ನಿಹಿತವಾಗಿದೆ ಎಂಬುದು ಸ್ವತಃ ಸಿದ್ದರಾಮಯ್ಯನವರಿಗೆ ಮನವರಿಕೆ ಆಗಿದೆ. ಹಾಗಾಗಿ ಬಿಜೆಪಿ ವಿರುದ್ಧ ಈ ರೀತಿ ಆರೋಪ, ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಯಾವತ್ತು ರಾಜೀನಾಮೆ ಕೊಡುತ್ತಾರೆ? ಯಾರು ಹೊಸ ಮುಖ್ಯಮಂತ್ರಿ ಎಂಬುದೇ ಈಗಿರುವ ಪ್ರಶ್ನೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ರಾಜೀನಾಮೆ ಕೊಡುವ ವಿಚಾರದಲ್ಲಿ ಬದಲಾವಣೆ ಆಗುವುದಿಲ್ಲ. ಮಹಾರಾಷ್ಟ್ರ ಚುನಾವಣೆ ಫಲಿತಾಂಶದ ಬಳಿಕ ಯಾವಾಗ ಬೇಕಿದ್ದರೂ ತೀರ್ಮಾನ ಆಗಲಿದೆ. ಸಿದ್ದರಾಮಯ್ಯ ಅತಿ ಶೀಘ್ರದಲ್ಲೇ ರಾಜೀನಾಮೆ ನೀಡುತ್ತಾರೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರಿನಲ್ಲಿ ಎನ್‍ಡಿಎ ಗೆಲ್ಲಲಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ಭ್ರಮೆಯಲ್ಲಿತ್ತು. ಆದರೆ, ಅಲ್ಲಿ ಎನ್‍ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆದ್ದೇಗೆಲ್ಲುವ ವಾತಾವರಣ ಇದೆ. ಅದೇ ರೀತಿ ಸಂಡೂರಿನಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿನ ವಿಶ್ವಾಸ ಇದೆ. ಶಿಗ್ಗಾಂವಿಯಲ್ಲೂ ಭರತ್ ಬೊಮ್ಮಾಯಿ ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ ಎಂದು ವಿಜಯೇಂದ್ರ ಹೇಳಿದರು.

ಬಿಜೆಪಿ ಹಿರಿಯರ ಜೊತೆ ಚರ್ಚೆ ನಡೆಸಿದ್ದು, ಎರಡು ಹಂತದಲ್ಲಿ ಹೋರಾಟಕ್ಕೆ ತೀರ್ಮಾನ ಮಾಡಲಾಗಿದೆ. ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಒಟ್ಟಾರೆಯಾಗಿ ಎರಡು ಹಂತದಲ್ಲಿ ಹೋರಾಟಕ್ಕೆ ನಿರ್ಧರಿಸಿದ್ದೇವೆ. ಅದರ ಪ್ರಕಾರ 3 ತಂಡಗಳ ರಚನೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.

ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ಸರಕಾರ ಅಯೋಗ್ಯತನವನ್ನು ಪ್ರದರ್ಶಿಸುತ್ತಿದೆ. ರೈತರ ಜಮೀನು ಕಿತ್ತುಕೊಳ್ಳುತ್ತಿದ್ದು, ರಾಜ್ಯದ ರೈತರು ಆತಂಕದಲ್ಲಿದ್ದಾರೆ. ಮಠಗಳ ಜಮೀನು, ದೇವಸ್ಥಾನಗಳ ಜಮೀನನ್ನು ಕಿತ್ತುಕೊಳ್ಳಲಾಗುತ್ತಿದೆ. ರಾಜ್ಯ ಸರಕಾರ ಸ್ಪಷ್ಟ ಉತ್ತರ ಕೊಡುವವರೆಗೆ, ಎಲ್ಲಿನವರೆಗೆ ರೈತರಿಗೆ ನಿರಾಳತೆ ಸಿಗುವುದಿಲ್ಲವೋ ಅಲ್ಲಿನವರೆಗೆ ದೃಢವಾಗಿ ಹೋರಾಟ ಮುಂದುವರೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News