ಮಲ್ಪೆ: ಬಾಂಗ್ಲಾ ಅಕ್ರಮ ವಲಸಿಗರು 5 ದಿನ ಪೊಲೀಸ್ ಕಸ್ಟಡಿಗೆ

Update: 2024-10-14 14:09 GMT

ಉಡುಪಿ, ಅ.14: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿತರಾದ ಏಳು ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿ ಗರನ್ನು ಉಡುಪಿ ನ್ಯಾಯಾಲಯ ಹೆಚ್ಚಿನ ತನಿಖೆಗಾಗಿ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಇಂದು ಆದೇಶ ನೀಡಿದೆ.

ಅ.11ರಂದು ರಾತ್ರಿ ಮಲ್ಪೆವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ ಅಕ್ರಮ ವಲಸಿಗಾರರಾದ ಬಾಂಗ್ಲಾದೇಶದ ಹಕೀಮ್ ಅಲಿ, ಸುಜೋನ್ ಎಸ್.ಕೆ. ಫಾರೂಕ್, ಇಸ್ಮಾಯಿಲ್ ಎಸ್.ಕೆ., ಕರೀಮ್ ಎಸ್.ಕೆ., ಸಲಾಂ ಎಸ್.ಕೆ., ರಾಜಿಕುಲ್ ಎಸ್.ಕೆ., ಸೋಜಿಬ್ ಎಂಬವರನ್ನು ಮಲ್ಪೆ ಪೊಲೀಸರು ಬಂಧಿಸಿ, ಅ.12ರಂದು ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ನ್ಯಾಯಾಲಯ ಇವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ಇದೀಗ ಆರೋಪಿ ಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸುವ ಉದ್ದೇಶದಿಂದ ಪ್ರಕರಣದ ತನಿಖಾಧಿಕಾರಿಯಾಗಿರುವ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರು ಪ್ರಾಸಿಕ್ಯೂಷನ್ ಮೂಲಕ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಪರಿಶೀಲನೆ ನಡೆಸಿದ ನ್ಯಾಯಾಲಯವು ಏಳು ಮಂದಿ ಆರೋಪಿಗಳನ್ನು ಅ.19ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದೆ.

ಅದರಂತೆ ಏಳು ಮಂದಿ ಆರೋಪಿಯನ್ನು ಇಂದು ಸಂಜೆ ಐದು ಗಂಟೆಗೆ ವಶಕ್ಕೆ ಪಡೆದುಕೊಂಡ ಪೊಲೀಸರು, ವಿಚಾರಣೆ ಮುಂದುವರೆಸಿದ್ದಾರೆ. ಆರೋಪಿಗಳಿಗೆ ಎಲ್ಲಿಂದ ನಕಲಿ ಆಧಾರ್ ಕಾರ್ಡ್ ದೊರೆತಿದೆ ಮತ್ತು ಇವರೆಲ್ಲ ಯಾವ ಮಾರ್ಗದಿಂದ ಉಡುಪಿಗೆ ಆಗಮಿಸಿದ್ದಾರೆ ಹಾಗೂ ಇವರಂತೆ ಇನ್ನೂ ವಲಸಿಗರು ಇದ್ದಾರೆಯೇ ಎಂಬುದರ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News