‘ಉಮೇಶ್ ನಾಯ್ಕ್ ಸೂಡ ಹೇಳಿಕೆ ವೈಯಕ್ತಿಕ; ಸಮುದಾಯದ ಸಂಘಟನೆಗಳಿಗೆ ಸಂಬಂಧವಿಲ್ಲ’

Update: 2024-10-14 14:12 GMT

ಉಡುಪಿ, ಅ.14: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ದಲಿತ ಸಮುದಾಯದ ಕುರಿತಂತೆ ಹಿಂದು ಜಾಗರಣಾ ವೇದಿಕೆಯ ನಾಯಕ ಉಮೇಶ್ ನಾಯ್ಕ್ ಅವರು ನೀಡಿರುವ ಹೇಳಿಕೆಯು ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ಇದು ಮರಾಟಿ ಸಮುದಾಯದ ಸಂಘಟನೆಗಳ ಅಥವಾ ಸಮುದಾಯದ ಹೇಳಿಕೆಯಾಗಿರುವುದಿಲ್ಲ ಎಂದು ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟೀಕರಣ ನೀಡಿದೆ.

ಕಳೆದ ಎರಡು-ಮೂರು ದಿನಗಳಿಂದ ನಮ್ಮ ಮರಾಟಿ ಸಮುದಾಯದ ಉಮೇಶ್ ನಾಯ್ಕ್ ಸೂಡ, ಡಾ.ಅಂಬೇಡ್ಕರ್ ಮತ್ತು ಪರಿಶಿಷ್ಟ ಜಾತಿಯವರ ಬಗ್ಗೆ ಅವಹೇಳನಕರವಾಗಿ ಮಾತನಾಡಿದ ವಾಟ್ಸ್‌ಅಪ್ ಸಂದೇಶಗಳು ಹರಿದಾಡಿದ ಬಗ್ಗೆ ಕೆಲವು ದಲಿತ ಸಂಘಟನೆಯ ನಾಯಕರು ಮರಾಟಿ ಸಮುದಾಯದ ಕುರಿತಂತೆ ನೀಡಿರುವ ಹೇಳಿಕೆಗೆ ಸಮಿತಿ ಪ್ರತಿಕ್ರಿಯಿಸಿದೆ.

ನಮ್ಮ ಸಮುದಾಯ ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ಅತೀವ ಗೌರವ ಸಲ್ಲಿಸಿಕೊಂಡು ಬಂದಿದೆ. ಉಮೇಶ್ ನಾಯ್ಕ್ ಸೂಡ ನೀಡಿದ ಹೇಳಿಕೆ ಬಗ್ಗೆ ಸಂಘ ವಿಷಾದ ವ್ಯಕ್ತಪಡಿಸುತ್ತದೆ. ಆದರೆ ಅದೇ ವಿಚಾರವಾಗಿ ನಮ್ಮ ಇಡೀ ಮರಾಟಿ ಸಮುದಾಯವನ್ನು ದೂಷಿಸುವುದು ಸಮಂಜಸವಲ್ಲ. ನಮ್ಮ ಸಮಾಜಕ್ಕೆ ಸಂವಿಧಾನದಡಿಯಲ್ಲಿ ದೊರಕಿರುವ ಮೀಸಲಾತಿ ನಮ್ಮ ಹಕ್ಕು, ಹೊರತು ಭಿಕ್ಷೆಯಲ್ಲ. ನಮ್ಮ ಸಮುದಾಯ ಸರಕಾರದಿಂದ ದೊರಕಿರುವ ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡಿರುವುದರಿಂದ ಒಂದೊಮ್ಮೆ ತೀರಾ ಹಿಂದುಳಿದ ಸಮುದಾಯ, ಈಗ ಸಮಾಜದಲ್ಲಿ ಸಾಮಾಜಿಕ ಹಾಗು ಶೈಕಣಿಕ ವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೇವಲ ಶೇ.3ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡು ಸಮುದಾಯವು ಸಾಧ್ಯವಾದಷ್ಟು ಅಭಿವೃದ್ಧಿ ಹೊಂದಿದೆ. ಅದೇ ರೀತಿ ತಮಗೂ ಶೇ.15 ರಷ್ಟಿರುವ ಮೀಸಲಾತಿಯನ್ನು ಪಡೆದು ಅಭಿವೃದ್ಧಿ ಹೊಂದಲು ಅವಕಾಶ ದೊರಕಿದೆ.ಹೋಳಿಹಬ್ಬದ ಸಂದರ್ಭದಲ್ಲಿ ಮನೆ ಮನೆ ಕುಣಿಯಲು ಹೋಗಿ ಕಾಣಿಕೆ ಪಡೆಯುವುದು ನಮ್ಮ ಹಿರಿಯರು ಹಾಕಿ ಕೊಟ್ಟ ಧಾರ್ಮಿಕತೆಯ ಹಾದಿಯಲ್ಲಿ ಸಾಗಿದ್ದೇವೆ. ನಮ್ಮದು ಆಸ್ತಿಕ ಸಮುದಾಯವಾಗಿದ್ದು ದೇವಿಯ ಆರಾಧಕರಾಗಿ, ಯಾವುದೇ ಸಮುದಾಯದ ಜಾತಿಯನ್ನು ದೂಷಿಸಿಕೊಂಡು ಬಂದವರಲ್ಲ ಎಂದು ಸಮಿತಿ ಹೇಳಿದೆ.

ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಅನೇಕ ಸ್ಪರ್ಶ ಸಮುದಾಯಗಳು ಮೀಸಲಾತಿ ಪಡೆಯುತ್ತಿದ್ದು ಅದರಲ್ಲಿ ಮರಾಟಿ ಸಮು ದಾಯ ಒಂದಾಗಿದೆ. ನಮ್ಮ ಮರಾಟಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ಹಾಗು ಜೀವನ ಪದ್ದತಿಗಳನ್ನೂ ಪರಿಶೀಲನೆ ಮಾಡಿ ಗುಡ್ಡಗಾಡುಗಳ ತಪ್ಪಲಲ್ಲಿ ವಾಸಿಸಿಕೊಂಡಿದ್ದ ನಮ್ಮನ್ನು ಕೃಷಿ, ಕೂಲಿ ಆಧಾರಿತ ಬುಡ ಕಟ್ಟು ಸಮುದಾಯ ವೆಂದು ಸರಕಾರ ಗಿರಿಜನರು ಎಂದು ಗುರುತಿಸಿ ಮೀಸಲಾತಿ ನೀಡಿದೆಯೇ ಹೊರತು, ಅಕ್ರಮ ವಾಗಿ ಅಥವಾ ಇನ್ನೊಬ್ಬರಿಂದ ಕಸಿದುಕೊಂಡ ಸೌಲಭ್ಯ ಅಲ್ಲ ಎಂದು ಪರಿಶಿಷ್ಟ ಜಾತಿಯ ನಾಯಕರು ಅರಿತುಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News