ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಶೇ.90 ಮಾದಕ ದ್ರವ್ಯ ಸೇವನೆ ಪ್ರಕರಣ: ಡಿಸಿ ಡಾ.ವಿದ್ಯಾಕುಮಾರಿ

Update: 2024-12-03 14:20 GMT

ಉಡುಪಿ, ಡಿ.3: ಜಿಲ್ಲೆಯಲ್ಲಿ 97ಕ್ಕೂ ಅಧಿಕ ಮಾದಕ ಸೇವನೆಯ ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ ಶೇ.90ರಷ್ಟು ಪ್ರಕರಣಗಳು ಮಣಿಪಾಲ ಠಾಣಾ ವ್ಯಾಪ್ತಿಯೊಂದರಲ್ಲೇ ದಾಖಲಾಗಿದೆ. ಹೀಗಾಗಿ ಮಣಿಪಾಲ ಮಾಹೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳಬೇಕು. ಈ ಬಗ್ಗೆ ಕೇರ್ ಟೆಕರ್ಸ್‌ಗಳನ್ನು ಹೆಚ್ಚು ನಿಯೋಜಿಸಬೇಕು ಹಾಗೂ ಮಣಿಪಾಲವನ್ನು ನಶಾ ಮುಕ್ತ ಪರಿಸರವನ್ನಾಗಿಸಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾಹೆಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಎನ್‌ಸಿಓಆರ್‌ಡಿ (ನಾರ್ಕೋ ಕೋ-ಆರ್ಡಿನೇಷನ್ ಸೆಂಟರ್) ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಮಣಿಪಾಲ ಭಾಗದ ಪೊಲೀಸ್ ಅಧಿಕಾರಿಗಳು ಹಾಸ್ಟೆಲ್‌ಗಳಲ್ಲಿ ಸಿಸಿಟಿವಿ ಅಳವಡಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಮಾದಕ ವಸ್ತುಗಳ ಬಳಕೆಯ ನಿಯಂತ್ರಣಕ್ಕೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಇವುಗಳನ್ನು ಉತ್ತೇಜಿ ಸುವುದು ಕಂಡು ಬಂದಲ್ಲಿ ಅಂಥವರ ಮೇಲೆ ಕಾನೂನಿನ ಅಡಿಯಲ್ಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದರು.

ಮಾದಕ ವಸ್ತುಗಳ ಬಳಕೆಯಿಂದ ಆರೋಗ್ಯದ ಆಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಯುವಜನರಲ್ಲಿ ಅರಿವು ಮೂಡಿಸಿ, ಅವುಗಳಿಂದ ದೂರವಿರುವ ಹಾಗೇ ನೋಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಸಾಮಾನ್ಯವಾಗಿ ಯುವಜನತೆಯೇ ಹೆಚ್ಚಾಗಿ ಮಾದಕ ವಸ್ತುಗಳಿಗೆ ವ್ಯಸನಿ ಗಳಾಗುತ್ತಿದ್ದಾರೆ. ಶಾಲಾ- ಕಾಲೇಜುಗಳಲ್ಲಿ ಇವುಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳು ಹಾಗೂ ಭವಿಷ್ಯದಲ್ಲಿ ಆಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಗಿಂದಾಗ್ಗೆ ನಡೆಸುವ ಜೊತೆಗೆ ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಸಹ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಮಿಕರೂ ಬಲಿ: ಮಾದಕ ವ್ಯಸನದ ದುಶ್ಚಟಗಳಿಗೆ ಕಾರ್ಮಿಕರು ಸಹ ಬಲಿಯಾಗುತ್ತಿದ್ದಾರೆ. ಅವರಿಗೂ ಸಹ ಅರಿವು ಮೂಡಿಸುವ ಜೊತೆಗೆ ಆಪ್ತ ಸಮಾಲೋಚನೆಗಳನ್ನು ನಡೆಸಿ, ಅವರುಗಳಿಗೆ ಮನಮುಟ್ಟುವ ರೀತಿ ಇವುಗಳ ಪರಿಣಾಮಗಳ ಅರಿವು ಮೂಡಿಸಿ, ದುಶ್ಚಟದಿಂದ ಮುಕ್ತರಾಗಿಸಲು ಮುಂದಾಗಬೇಕು ಎಂದರು.

ಕರಾವಳಿ ಪೊಲೀಸರು ಬೀಚ್‌ಗಳಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣಿಕೆ ಬಗ್ಗೆ ತೀವ್ರ ನಿಗಾ ವಹಿಸಬೇಕು ಎಂದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಮಾರಾಟವಾಗುವ ಆಹಾರ ಗುಣಮಟ್ಟದ ಸ್ಯಾಂಪಲ್‌ಗಳನ್ನು ತೆಗೆದು ಪ್ರಯೋಗ ಶಾಲೆಗಳಿಗೆ ವಿಶ್ಲೇಷಣೆಗೆ ಕಳುಹಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಎಎಸ್‌ಪಿ ಪಿ.ಎ ಹೆಗಡೆ , ಡಿಎಫ್‌ಓ ಗಣಪತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಐ.ಪಿ. ಗಡಾದ್, ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ಜಿ.ಸಿ, ಡಿಡಿಪಿಐ ಗಣಪತಿ, ಡಿಡಿಪಿಯು ಮಾರುತಿ ಹಾಗೂ ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

‘ಕಾಡಂಚಿನ ಪ್ರದೇಶಗಳಲ್ಲಿ ಹಾಗೂ ಕೆಲವು ತೋಟಗಳಲ್ಲಿ ಗಾಂಜಾಗಳನ್ನು ಬೆಳೆಯುವ ಸಾಧ್ಯತೆ ಇದ್ದು, ಇವುಗಳ ಬಗ್ಗೆ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯ ಸಿಬ್ಬಂದಿಗಳು ನಿರಂತರ ಸರ್ವೆಕ್ಷಣೆಗಳನ್ನು ಕೈಗೊಳ್ಳಬೇಕು. ಅಂಚೆಯ ಮೂಲಕ ಮಾದಕ ವಸ್ತುಗಳ ಸರಬರಾಜು ಆಗಬಹುದು. ಅಂಚೆ ಇಲಾಖೆಯ ಸಿಬ್ಬಂದಿಗಳು ಅನುಮಾನ ಬಂದಂತಹ ಕವರ್‌ಗಳನ್ನು ಮಾಲಕರ ಸಮ್ಮುಖದಲ್ಲಿ ತೆರೆದು ಪರಿಶೀಲಿಸಬೇಕು. ರೈಲ್ವೆ ಇಲಾಖೆಯ ಸಿಬ್ಬಂದಿಗಳು ಸಹ ನಿಲ್ದಾಣದಲ್ಲಿ ಮಾದಕ ವಸ್ತುಗಳ ಸರಬರಾಜು ಬಗ್ಗೆ ನಿಗಾ ವಹಿಸಬೇಕು.’ -ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ

ಮೌತ್ ಫ್ರೆಶ್ನರ್ ಜಾಹೀರಾತು ತೆರವುಗೊಳಿಸಿ: ಎಸ್ಪಿ

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ., ಮಾತನಾಡಿ ಜಿಲ್ಲೆಯ ಹೆದ್ದಾರಿಗಳ ಜಾಹೀರಾತು ಫಲಕಗಳಲ್ಲಿ ಮೌತ್ ಫ್ರೆಶ್ನರ್ ಎಂದು ಹೇಳಿ ತಂಬಾಕು ಉತ್ಪನ್ನಗಳ ಜಾಹೀರಾತು ಮಾಡಿ ಮಾರಾಟ ಮಾಡುತ್ತಿದ್ದಾರೆ. ಅಂತಹವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದರಲ್ಲದೇ, ಇಂಥ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಮುಂದಾಗಬೇಕು ಎಂದರು.

ಮಾದಕ ವಸ್ತುಗಳ ವ್ಯಸನ ಹೊಂದಿರುವ ವಿದ್ಯಾರ್ಥಿಗಳಿಗೆ ಮೊದಲು ಒಂದೆರೆಡು ಬಾರಿ ಸೂಚನೆ ನೀಡಿ, ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಹಾಗೆ ಮನವೊಲಿಸಬೇಕು. ಅದನ್ನು ಮುಂದುವರಿಸಿದರೆ ಅವರನ್ನು ಕಾಲೇಜಿನಿಂದ ತೆಗೆದು ಹಾಕುವುದು ಸೂಕ್ತ ಎಂದು ಡಾ.ಅರುಣ್ ಹೇಳಿದರು.

ವಾರದ ಕೊನೆಯ ದಿನಗಳಲ್ಲಿ ಪಾರ್ಟಿಗಳನ್ನು ಆಯೋಜಿಸಿ, ಮೋಜು ಮಸ್ತಿ ನೆಪದಲ್ಲಿ ಮಾದಕ ವಸ್ತುಗಳ ಸೇವನೆಯ ಸಾಧ್ಯತೆ ಇರುತ್ತದೆ. ಅನುಮಾನ ಬರುವ ವಿದ್ಯಾರ್ಥಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿ ಸಬೇಕು. ವಾಣಿಜ್ಯ ಕೇಂದ್ರಗಳು, ಹೋಮ್‌ಸ್ಟೆಗಳು ಹಾಗೂ ವಿವಿಧ ಪ್ರವಾಸಿ ತಾಣಗಳಲ್ಲಿ ಈ ತರಹದ ಚಟುವಟಿಕೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಎಸ್ಪಿ ಅವರು ಸೂಚನೆಗಳನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News