ಶಾಲಾ-ಕಾಲೇಜು ಬಳಿ ತಂಬಾಕು ಉತ್ಪನ್ನ ಮಾರಾಟ ವಿರುದ್ಧ ಕಠಿಣ ಕ್ರಮ: ಅಧಿಕಾರಿಗಳಿಗೆ ಉಡುಪಿ ಡಿಸಿ ಕಟ್ಟುನಿಟ್ಟಿನ ಸೂಚನೆ

Update: 2024-12-03 15:16 GMT

ಉಡುಪಿ, ಡಿ.3: ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳ ನೂರು ಮೀ. ವ್ಯಾಪ್ತಿಯೊಳಗೆ ಯಾವುದೇ ಅಂಗಡಿ, ಹೋಟೆಲ್‌ಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮಕೈಗೊಂಡು ಅವರ ಉದ್ದಿಮೆ ಪರವಾನಿಗೆಯನ್ನು ರದ್ದು ಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ ದಡಿಯಲ್ಲಿ ಕೋಟ್ಪಾ-2003 ಕಾಯ್ದೆ ಕುರಿತ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕಳೆದ ಜಿಲ್ಲಾ ತಂಬಾಕು ನಿಯಂತ್ರಣ ಹಾಗೂ ಕೋಟ್ಪಾ ಕಾಯಿದೆ ಅನುಷ್ಠಾನ ಸಭೆಯಲ್ಲಿ ಶಾಲಾ- ಕಾಲೇಜುಗಳ ವ್ಯಾಪ್ತಿಯ ನೂರು ಮೀ. ಅಂತರದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದಲ್ಲಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೆ. ಆದರೆ ಬೈಂದೂರು ತಾಲೂಕಿನ ನಾವುಂದ, ಶಿರೂರು, ಹಕ್ಲಾಡಿ, ಉಪ್ಪುಂದ ಗ್ರಾಪಂಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದರು ಸಹ ಬರಿ ಎಚ್ಚರಿಕೆ ಹಾಗೂ ತಿಳುವಳಿಕೆ ನೋಟಿಸ್‌ನ್ನು ನೀಡ ಲಾಗಿದೆ. ಇದು ಸರಿಯಲ್ಲ. ಅಂತಹವರ ಉದ್ದಿಮೆ ಪರವಾನಿಗೆಯನ್ನು ರದ್ದು ಪಡಿಸಬೇಕು ಎಂದು ಖಡಕ್ ಸೂಚನೆ ನೀಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಬಳಕೆ ಮಾಡುವುದು ಕಂಡುಬಂದಲ್ಲಿ ಸಾರ್ವಜನಿಕರು ದೂರು ನೀಡಲು ಸರಕಾರ ಆ್ಯಪ್ ಒಂದನ್ನು ಅಭಿವೃದ್ಧಿ ಪಡಿಸಿದ್ದು, ಸ್ಟಾಪ್ ಟೊಬ್ಯಾಕೊ (Sಣoಠಿ ಖಿobಚಿಛಿಛಿo) ಆ್ಯಪ್ ಆಗಿದ್ದು ಈ ಬಗ್ಗೆ ಸಾರ್ವಜನಿಕರ ನಡುವೆ ಹೆಚ್ಚಿನ ಪ್ರಚಾರ ಪಡಿಸಬೇಕು. ಸಾರ್ವಜನಿಕರು ಸಹ ಅದರ ಬಳಕೆ ಮಾಡುವುದರೊಂದಿಗೆ ಆನ್‌ಲೈನ್‌ನಲ್ಲಿ ಸೂಕ್ತ ಪ್ರಾಧಿಕಾರಕ್ಕೆ ಅಥವಾ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದರು.

ಶಾಲಾ-ಕಾಲೇಜುಗಳ ಪ್ರಾಚಾರ್ಯರು ಹಾಗೂ ಶಿಕ್ಷಕರು ತಮ್ಮ ಸಂಸ್ಥೆಗಳ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳನ್ನು ಬಳಕೆ ಮಾಡುತ್ತಿದ್ದಾರಾ ಎಂಬ ಬಗ್ಗೆ ನಿಗಾ ವಹಿಸುವುದರೊಂದಿಗೆ, ನೂರು ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಕೋಟ್ಪಾ ಕಾಯಿದೆ ಅನುಷ್ಠ್ಠಾನ ಸಮಿತಿಗೆ ಕೂಡಲೇ ಮಾಹಿತಿ ನೀಡಬೇಕು ಎಂದರು.

ಜಿಲ್ಲೆಯಲ್ಲಿ 2024ರ ಎಪ್ರಿಲ್‌ನಿಂದ ಈವರೆಗೆ 54ಕ್ಕೂ ಹೆಚ್ಚು ಧಿಡೀರ್ ದಾಳಿಗಳನ್ನು ನಡೆಸಿ, 151ಕ್ಕೂ ಹೆಚ್ಚು ಪ್ರಕರಣ ಗಳನ್ನು ದಾಖಲಿಸಿಕೊಂಡು 16,070 ರೂ ದಂಡ ವಸೂಲಿ ಮಾಡಲಾಗಿದೆ ಎಂದ ಅವರು, ದಾಳಿಗಳನ್ನು ನಿರಂತರವಾಗಿ ಆಗಿಂದಾಗ್ಗೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ, ಎಎಸ್ಪಿ ಪಿ.ಎ ಹೆಗಡೆ, ಡಿಎಫ್‌ಓ ಗಣಪತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ. ಗಡಾದ್, ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ಜಿ.ಸಿ, ಡಿಡಿಪಿಐ ಗಣಪತಿ, ಡಿಡಿಪಿಯು ಮಾರುತಿ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News