ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ವರ್ಗಾವಣೆಗೆ ಆಗ್ರಹಿಸಿ ಧರಣಿ

Update: 2024-12-03 15:22 GMT

ಉಡುಪಿ : ಜನ ವಿರೋಧಿ, ಸರ್ವಾಧಿಕಾರಿ ಧೋರಣೆಯ ಮಂಗಳೂರು ಪೋಲಿಸ್ ಕಮೀಷನರ್ ಅನುಪಮ್ ಅಗರ್ವಾಲ್ ವರ್ಗಾವಣೆಗೊಳಿಸುವಂತೆ ಒತ್ತಾಯಿಸಿ ಸಿಪಿಐಎಂ, ದಲಿತ ಸಂಘರ್ಷ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆ ಗಳಿಂದ ಮಂಗಳವಾರ ಉಡುಪಿ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಎದುರು ಧರಣಿ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಸಿಪಿಐಎಂ ಮುಖಂಡರ ಮೇಲೆ ಹಾಕಿರುವ ಕೇಸನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೂಡಲೇ ವಾಪಾಸು ಪಡೆಯ ಬೇಕು. ಅಕ್ರಮ ಮರಳುಗಾರಿಕೆ, ಬೆಟ್ಟಿಂಗ್, ಮಸಾಜ್ ಪಾರ್ಲರ್ ದಂಧೆ ಕೋರರನ್ನು ಬಂಧುಗಳಂತೆ ನೋಡುವ ಮಂಗಳೂರು ಪೋಲಿಸ್ ಕಮೀಷನರ್ ಅನುಪಮ್ ಅಗರವಾಲ್ ಅವರನ್ನು ಕೂಡಲೇ ತನಿಖೆಗೆ ಒಳಪಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಹಿಂದಿನ ಕೋಮುವಾದಿ ಸರಕಾರಕ್ಕೂ ಈಗಿನ ಕಾಂಗ್ರೆಸ್ ಸರಕಾರಕ್ಕೂ ಯಾವುದೇ ವ್ಯಾತ್ಯಾಸ ಇಲ್ಲದಂತಾಗಿದೆ. ಪ್ರಕರಣಗಳನ್ನು ದಾಖಲಿಸುವ ಮೂಲಕ ಹೋರಾಟಗಾರರ ಧ್ವನಿಯನ್ನು ಇಲ್ಲದಾಗಿಸುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಉಡುಪಿ ವಲಯ ಕಾರ್ಯದರ್ಶಿ ಶಶಿಧರ ಗೊಲ್ಲ, ಜಿಲ್ಲಾ ಸಮಿತಿ ಸದಸ್ಯರಾದ ಕವಿರಾಜ್ ಎಸ್. ಕಾಂಚನ್, ಮುಖಂಡರಾದ ವೆಂಕಟೇಶ್ ಕೋಣಿ, ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಸಂಚಾಲಕರಾದ ಸಂಜೀವ ಬಳ್ಕೂರ್,ಡಿ.ಎಸ್.ಎಸ್. ಸಂಘಟನೆಯ ರಾಜ್ಯ ಸಂಚಾಲಕರಾದ ಸುಂದರ್ ಮಾಸ್ತರ್,ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮುಖಂಡರಾದ ಇದ್ರೀಸ್ ಹೂಡೆ, ಅಜೀಜ್ ಉದ್ಯಾವರ, ನಾಸೀರ್ ಕಾಪು, ವಿವಿಧ ಸಂಘಟನೆ ಮುಖಂಡರಾದ ಕೃಷ್ಣ್ಣ, ಸಂವರ್ಥ ಸಾಹಿಲ್, ದಯಾನಂದ ಕೋಟ್ಯಾನ್, ಸಿಪಿಐಎಂ ಮುಖಂಡರಾದ ನಳಿನಿ ಎಸ್., ಸೈಯದ್ ಅಲಿ, ರಮೇಶ್ ಉಡುಪಿ, ಮೋಹನ್, ಸದಾಶಿವ ಪೂಜಾರಿ, ಮುರಳಿ, ರಮೇಶ್ ಶೇರಿಗಾರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News