ಡಿ.1: ‘ಲೋಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್- 2024’

Update: 2024-11-27 15:14 GMT

ಉಡುಪಿ: ನಗರದ ಲೋಂಬಾರ್ಡ್ ಆಸ್ಪತ್ರೆ (ಮಿಷನ್ ಆಸ್ಪತ್ರೆ) ಯ 101ನೇ ವಾರ್ಷಿಕೋತ್ಸವದ ಪ್ರಯುಕ್ತ ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಡಿ.1ರಂದು ಮಲ್ಪೆಯಲ್ಲಿ ಆಯೋಜಿಸಲಾಗಿರುವ ‘ಲೋಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್- 2024’ಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಮಿಷನ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಸುಶೀಲ್ ಜತ್ತನ್ನ ತಿಳಿಸಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಂಬಾರ್ಡ್ ಆಸ್ಪತ್ರೆ ಹಾಗೂ ಉಡುಪಿ ರನ್ನರ್ಸ್ ಕ್ಲಬ್‌ಗಳು ಜಂಟಿಯಾಗಿ ಈ ಹಾಫ್ ಮ್ಯಾರಥಾನ್ ಓಟವನ್ನು ಆಯೋಜಿಸುತ್ತಿವೆ ಎಂದರು. ಉಡುಪಿ ಯಲ್ಲಿ ಆಸ್ಪತ್ರೆ ಸ್ಥಾಪನೆಗೊಂಡು 101 ವರ್ಷ ಪೂರ್ಣಗೊಂಡಿದ್ದರೆ, ರನ್ನರ್ಸ್ ಕ್ಲಬ್ ಆರಂಭಗೊಂಡು ಒಂದು ವರ್ಷ ಕಳೆದ ಪ್ರಯುಕ್ತ ಈ ಮ್ಯಾರಥಾನ್‌ನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲೆಯ ಯುವಜನತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯದೊಂದಿಗೆ ವ್ಯಾಯಾಮದ ಅಗತ್ಯತೆಯ ಕುರಿತಂತೆ ಅರಿವು ಹಾಗೂ ಎಚ್ಚರಿಕೆ ಮೂಡಿಸುವ ಉದ್ದೇಶದಿಂದ ಈ ದೂರ ಓಟದ ಸ್ಪರ್ಧೆಯನ್ನು ನಾಡಿನ ಜನತೆಗಾಗಿ ನಡೆಸುತಿದ್ದೇವೆ. ಇದನ್ನು ಇನ್ನು ಪ್ರತಿ ವರ್ಷ ನಡೆಸುವ ವಾರ್ಷಿಕ ಕ್ರೀಡಾ ಸ್ಪರ್ಧೆಯಾಗಿ ನಡೆಸುವ ಇರಾದೆ ನಮಗಿದೆ ಎಂದರು.

ಉಡುಪಿ ಮ್ಯಾರಥಾನ್-2024 ಇದೇ ಡಿ.1ರಂದು ಮುಂಜಾನೆ 5:00ಗಂಟೆಗೆ ಮಲ್ಪೆಯ ಸೀವಾಕ್ ಬಳಿ ಪ್ರಾರಂಭ ಗೊಳ್ಳಲಿದೆ. 21 ಕಿ.ಮೀ. ಓಟದ ಹಾಫ್ ಮ್ಯಾರಥಾನ್ ಅಲ್ಲದೇ, 10ಕಿ.ಮೀ, 5ಕಿ.ಮೀ, 3ಕಿ.ಮೀ. ಹಾಗೂ 3ಕಿ.ಮೀ. ಫನ್ ಮ್ಯಾರಥಾನ್ ಸಹ ನಡೆಯಲಿದೆ. ಜಿಲ್ಲೆ, ಹೊರಜಿಲ್ಲೆ ಗಳಿಂದ ಸುಮಾರು 2000ಕ್ಕೂ ಅಧಿಕ ಉತ್ಸಾಹಿ ಸ್ಪರ್ಧಾಳುಗಳು ಇದರಲ್ಲಿ ಭಾಗವಹಿಸಲು ಈಗಾಗಲೇ ಹೆಸರು ನೊಂದಣಿ ಮಾಡಿಕೊಂಡಿದ್ದಾರೆ. ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ ಕೆಲವು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಉಡುಪಿ ರನ್ನರ್ಸ್‌ ಕ್ಲಬ್‌ನ ಜಂಟಿ ಕಾರ್ಯದರ್ಶಿ ದಿವ್ಯೇಶ್ ಶೆಟ್ಟಿ ತಿಳಿಸಿದರು.

21ಕಿ.ಮೀ. ದೂರದ ಹಾಫ್ ಮ್ಯಾರಥಾನ್ ಮಲ್ಪೆ ಸೀವಾಕ್‌ನಿಂದ ಬೆಳಗ್ಗೆ 5:30ಕ್ಕೆ ಪ್ರಾರಂಭಗೊಂಡರೆ, 10ಕಿ.ಮೀ. ಓಟವು 6:00ಗಂಟೆಗೆ, 5ಕಿ.ಮೀ. ಓಟ 6:30ಕ್ಕೆ, 3ಕಿ.ಮೀ. ಓಟ 7:15ಕ್ಕೆ ಹಾಗೂ 3ಕಿ.ಮೀ. ಫನ್ ಓಟ ಬೆಳಗ್ಗೆ 7:45ಕ್ಕೆ ಸೀವಾಕ್ ಬಳಿಯಿಂದಲೇ ಪ್ರಾರಂಭಗೊಳ್ಳುತ್ತದೆ ಹಾಗೂ ಇಲ್ಲೇ ಮುಕ್ತಾಯಗೊಳ್ಳುತ್ತದೆ. ಬೆಳಗ್ಗೆ 8:30-9ಕ್ಕೆ ಇಲ್ಲೇ ಸಮಾ ರೋಪ ಹಾಗೂ ಬಹುಮಾನ ವಿತರಣಾ ಸಮಾರಂಭವೂ ಸೀವಾಕ್ ಬಳಿನಡೆಯಲಿದೆ ಎಂದು ಅವರು ತಿಳಿಸಿದರು.

ಹಾಫ್ ಮ್ಯಾರಥಾನ್‌ಗೆ ಸೀವಾಕ್‌ನಿಂದ ಪಡುಕರೆ ಸೇತುವೆಯವರೆಗೆ ಹೋಗಿ ಅಲ್ಲಿಂದ ಎಂಟು ಕಿ.ಮೀ. ಮುಂದಕ್ಕೆ ಹೋಗಿ ಮರಳಿ ಸೀವಾಕ್‌ಗೆ ಬರಬೇಕಾಗಿದೆ. ಉಳಿದ ಸ್ಪರ್ಧಿಗಳು ಸಹ ಪಡುಕೆರೆ ಸೇತುವೆಯಿಂದ ವಿವಿಧ ದೂರಕ್ಕೆ ಹೋಗಬೇಕಾ ಗಿದೆ. ಮೂರು ಕಿ.ಮೀ. ಓಟದಲ್ಲಿ ಸೀವಾಕ್‌ನಿಂದ ಮಲ್ಪೆ ಬೀಚ್‌ನ ಗಾಂಧಿ ಪ್ರತಿಮೆಯವರೆಗೆ ಓಡಿ ಮರಳಬೇಕು ಎಂದರು.

ಉಡುಪಿ ರನ್ನರ್ಸ್ ಕ್ಲಬ್ ಇದೇ ಮೊದಲ ಬಾರಿ ಸ್ಪರ್ಧೆಯನ್ನು ಆಯೋಜಿಸುತಿದ್ದರೂ, ವೃತ್ತಿಪರ ರೀತಿಯಲ್ಲಿ ಇದನ್ನು ನಡೆ ಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸ್ಪರ್ಧೆಯ ವಿಜೇತರಿಗೆ ನಗದು ಸೇರಿದಂತೆ ಆಕರ್ಷಕ ಬಹುಮಾನ ಗಳಿವೆ ಎಂದೂ ಅವರು ಹೇಳಿದರು.

ಮ್ಯಾರಥಾನ್‌ನಲ್ಲಿ ಸ್ಪರ್ಧಿಸುವ ಎಲ್ಲಾ ಓಟಗಾರರಿಗೂ ಇದೇ ನ.29 ಮತ್ತು 30ರಂದು ಬೆಳಗ್ಗೆ 10ರಿಂದ ಸಂಜೆ 6ಗಂಟೆಯ ವರೆಗೆ ಅಜ್ಜರಕಾಡಿನ ಭುಜಂಗ ಪಾರ್ಕ್‌ನಲ್ಲಿ ಟೀ ಶರ್ಟ್ ಹಾಗೂ ರೇಸ್ ಕಿಟ್‌ನ್ನು ವಿತರಿಸಲಾಗುವುದು ಎಂದು ಡಾ.ಸುಶೀಲ್ ಜತ್ತನ್ನ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ರನ್ನರ್ಸ್ ಕ್ಲಬ್‌ನ ಅಧ್ಯಕ್ಷ ಡಾ.ತಿಲಕ್ ಚಂದ್ರಪಾಲ್, ಉಪಾಧ್ಯಕ್ಷ ಉದಯಕುಮಾರ್ ಶೆಟ್ಟಿ ಹಾಗೂ ಮಿಷನ್ ಆಸ್ಪತ್ರೆಯ ಪಿಆರ್‌ಓ ರೋಹಿ ರತ್ನಾಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News