ಯುವನಿಧಿ ಯೋಜನೆ: ಸ್ವಯಂ ಘೋಷಣೆ ಕಡ್ಡಾಯ
ಉಡುಪಿ, ನ.27: ಕರ್ನಾಟಕ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಗೆ 2022-23 ಹಾಗೂ 2023-24 ನೇ ಸಾಲಿನಲ್ಲಿ ಉತ್ತೀರ್ಣರಾಗಿ ಇನ್ನೂ ಉದ್ಯೋಗ ಸಿಗದ ಪದವಿ, ಸ್ನಾತಕೋತರ ಪದವಿ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ಹಾಗೂ ಡಿಪ್ಲೋಮಾ ಪಡೆದವರಿಗೆ 1500 ರೂ. ಗಳ ನಿರುದ್ಯೋಗ ಭತ್ಯೆ ಯನ್ನು ನೀಡಲಾಗುತ್ತಿದೆ. ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿವಸ ಪೂರೈಸಿದ ಅಭ್ಯರ್ಥಿಗಳು ಕೂಡ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಪ್ರತಿ ತಿಂಗಳು ಈ ಪ್ರಯೋಜನ ಪಡೆಯಬೇಕಿದ್ದರೆ, ಪ್ರತಿ ತಿಂಗಳಲ್ಲಿ ತಾನು ನಿರುದ್ಯೋಗಿಯೆಂದು, ವ್ಯಾಸಂಗ ಮುಂದುವರಿಸುತ್ತಿಲ್ಲ ವೆಂದು ಹಾಗೂ ಸ್ವಯಂ ಉದ್ಯೋಗಿಯಲ್ಲವೆಂದು ಸ್ವಯಂ ಘೋಷಣೆ ಮಾಡುವುದು ಕಡ್ಡಾಯವಾಗಿದೆ.
ಪ್ರಸಕ್ತ ಪ್ರತೀ ಗ್ರಾಮದಲ್ಲಿ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ನೋಂದಣಿಯನ್ನು ಮಾಡಿಕೊಳ್ಳಬಹುದು ಹಾಗೂ ಸ್ವಯಂ ಘೋಷಣೆಯನ್ನು ಪ್ರತೀ ತಿಂಗಳು 25ನೇ ತಾರೀಕಿನ ಒಳಗೆ ಸಲ್ಲಿಸಬೇಕು.
ಯೋಜನೆಯ ಪ್ರಯೋಜನ ಪಡೆಯುತ್ತಿರುವ ಅಭ್ಯರ್ಥಿಗಳು ಪ್ರತೀ ತಿಂಗಳು ಸ್ವಯಂ ಘೋಷಣೆ ಮಾಡದಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುವುದಿಲ್ಲ. ಪ್ರತೀ ತಿಂಗಳು ಪ್ರಯೋಜನ ಪಡೆದುಕೊಳ್ಳಲು ಸ್ವಯಂ ಘೋಷಣೆ ಮಾಡಬೇಕಾಗಿರುವ ಕುರಿತು ಎಸ್‌ಎಂಎಸ್ ಸಂದೇಶಗಳನ್ನು ಅಭ್ಯರ್ಥಿಗಳಿಗೆ ರವಾನಿಸಲಾಗಿದೆ. ಅಭ್ಯರ್ಥಿ ಗಳು ಕಡ್ಡಾಯವಾಗಿ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಯುವನಿಧಿ ಯೋಜನೆಯ ಟೋಲ್‌ಫ್ರೀ ಸಹಾಯವಾಣಿ ಸಂಖ್ಯೆ: 18005999918 ಅಥವಾ 18005997154 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.