ನ.14ರಿಂದ ಉಡುಪಿ ಜಿಲ್ಲೆಯಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹ

Update: 2024-11-12 16:20 GMT

ಉಡುಪಿ, ನ.12: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ, ಸಹಕಾರ ಇಲಾಖೆ ಹಾಗೂ ಉಡುಪಿ ಜಿಲ್ಲೆಯ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ನವೆಂಬರ್ 14ರಿಂದ 20ರವರೆಗೆ ಉಡುಪಿ ಜಿಲ್ಲೆಯಾದ್ಯಂತ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಸಪ್ತಾಹದ ವಿವರಗಳನ್ನು ನೀಡಿದ ಅವರು, 71ನೇ ಅಖಿಲ ಭಾರತ ಸಹಕಾರ ಸಪ್ತಾಹ ದೇಶಾದ್ಯಂತ ನ.14ರಿಂದ 20ರವರೆಗೆ ನಡೆಯುತಿದ್ದು, ಉಡುಪಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಒಂದೊಂದು ದಿನ ಆಚರಣೆ ನಡೆಯಲಿದೆ ಎಂದರು.

ಉಡುಪಿ ಜಿಲ್ಲೆಯಾದ್ಯಂತ ಏಳು ದಿನಗಳ ಆಚರಣೆಯಲ್ಲಿ, ಒಂದೊಂದು ದಿನ ಒಂದೊಂದು ವಿಷಯಕ್ಕೆ ಮಹತ್ವ ನೀಡಿ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಸಹಕಾರಿ ಮುಖಂಡರು, ನಾಯಕರು, ಸದಸ್ಯರು, ಗಣ್ಯರು ಹಾಗೂ ಸಾರ್ವಜನಿಕ ರನ್ನು ಕರೆಸಿ ಸಹಕಾರ ಚಳುವಳಿಯ ಅರ್ಥ, ಮಹತ್ವ, ತತ್ವಗಳ ಔಚಿತ್ಯ, ಅನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಡ ಲಾಗುತ್ತದೆ ಎಂದರು.

ಸಪ್ತಾಹದ ಅವಧಿಯಲ್ಲಿ ಪ್ರತಿಯೊಂದು ಸಹಕಾರ ಸಂಘದ ಕಛೇರಿಯ ಆವರಣದಲ್ಲಿ ಏಳು ಬಣ್ಣಗಳ ಸಹಕಾರ ಧ್ವಜವನ್ನು ಹಾರಿಸಲಾಗುವುದು ಮತ್ತು ಸಹಕಾರ ವಿಚಾರಗಳನ್ನು ಸಾರ್ವಜನಿಕರಿಗೆ ತಿಳಿಯಪಡಿಸಲು ಸಹಕಾರ ಪ್ರಚಾರ ರಥವನ್ನು 7 ದಿನಗಳ ಕಾಲ ಸಹಕಾರ ಸಪ್ತಾಹ ನಡೆಯುವ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ ಎಂದರು.

ನ.14ರಂದು ಬೆಳಿಗ್ಗೆ ಉಡುಪಿ ಜಿಲ್ಲೆಯ ಎಲ್ಲಾ ಸಹಕಾರ ಸಂಸ್ಥೆಯಲ್ಲಿ ಆಯಾ ಸಂಘದ ಅಧ್ಯಕ್ಷರು, ನಿರ್ದೇಶಕರು ಮತ್ತು ನೌಕರರು ಸೇರಿ ಅವರವರ ಸಂಸ್ಥೆಗಳಲ್ಲಿ ಸಹಕಾರ ಗೀತೆ ಹಾಡಿ ಸಹಕಾರ ಧ್ವಜಾರೋಹಣ ಮಾಡಲಿದ್ದಾರೆ. ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ಮಂದಾರ್ತಿಯ ಶ್ರೀದುರ್ಗಾ ಸಹಕಾರ ಸೌಧದಲ್ಲಿ ಬೆಳಗ್ಗೆ 10:30ಕ್ಕೆ ನಡೆಯಲಿದೆ. ಶಾಸಕ ಕಿರಣ್‌ಕುಮಾರ್ ಕೊಡ್ಗಿ ಸಪ್ತಾಹಕ್ಕೆ ಚಾಲನೆ ನೀಡಲಿದ್ದಾರೆ.

ಇದಕ್ಕೆ ಮುನ್ನ ಒಂದು ವಾರ ಜಿಲ್ಲೆಯಿಡೀ ಸಂಚರಿಸುವ ಸಹಕಾರ ರಥಕ್ಕೆ ಮಂದಾರ್ತಿಯಲ್ಲಿ ಚಾಲನೆ ನೀಡಲಾಗುವುದು. ಇದು ಜಿಲ್ಲೆಯ ಹಳ್ಳಿಹಳ್ಳಿಗೆ ಸಂಚರಿಸಿ ಸಹಕಾರ ಚಳವಳಿ ಕುರಿತು ಜನರಿಗೆ ಮಾಹಿತಿ ನೀಡುವುದು ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ನ.15ರಂದು ಕಾರ್ಕಳದ ಜೋಡುರಸ್ತೆಯ ರಾಜಾಪುರ ಸಭಾಂಗಣದಲ್ಲಿ ನಡೆದರೆ, 16ರಂದು ಮಂಗಳೂರಿನಲ್ಲಿ ರಾಜ್ಯ ಮಟ್ಟದ ಸಪ್ತಾಹ ನಡೆಯಲಿರುವುದರಿಂದ ಇಲ್ಲಿ ಯಾವುದೇ ಕಾರ್ಯಕ್ರಮವಿರುವುದಿಲ್ಲ. ಎಲ್ಲಾ ಸಹಕಾರಿಗಳು ಅಂದು ಮಂಗಳೂರಿನ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.

ನ.17ರಂದು ಬೈಂದೂರು ತಾಲೂಕಿನ ನಾಗೂರಿನಲ್ಲಿ, 18ರಂದು ಕಾಪು ತಾಲೂಕಿನ ಇನ್ನಂಜೆಯಲ್ಲಿ, 19ರಂದು ಹೆಬ್ರಿ ತಾಲೂಕಿನ ಬೆಳ್ವೆಯಲ್ಲಿ ಸಹಕಾರಿ ಸಪಾಹ ಕಾರ್ಯಕ್ರಮಗಳು ನಡೆಯಲಿವೆ. ಇದರ ಸಮಾರೋಪ ಸಮಾರಂಭ ನ.20ರಂದು ಉಡುಪಿ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ಬೆಳಗ್ಗೆ 10ಕ್ಕೆ ನಡೆಯಲಿದೆ. ಇದರಲ್ಲಿ 5ರಿಂದ 6ಸಾವಿರ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಹಕಾರಿ ಯೂನಿಯನ್‌ನ ನಿರ್ದೇಶಕರಾದ ಕಟಪಾಡಿ ಶಂಕರ ಪೂಜಾರಿ, ಹರೀಶ್ ಕಿಣಿ, ಶ್ರೀಧರ ಪಿ.ಎಸ್. ಹಾಗೂ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News