2014ರಲ್ಲಿ ಉಡುಪಿಗೆ ಬಂದಿದ್ದ ರತನ್ ಟಾಟಾ

Update: 2024-10-10 16:35 GMT

ಉಡುಪಿ, ಅ.10: ಮುಂಬೈಯ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದ ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷ ರತನ್ ಟಾಟಾ ಅವರು ಈಗಿನ ಪರ್ಯಾಯ ಮಠಾಧೀಶರಾಗಿರುವ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರ ಆಹ್ವಾನ ದಂತೆ 2014ರಲ್ಲಿ ಉಡುಪಿ ಜಿಲ್ಲೆಗೆ ಭೇಟಿ ನೀಡಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

2014 ಫೆ.10ರಂದು ಪುತ್ತಿಗೆ ಮೂಲಮಠದಲ್ಲಿರುವ ಶ್ರೀಪುತ್ತಿಗೆ ವಿದ್ಯಾಪೀಠಕ್ಕೆ ಸರಳ, ನಿರ್ಗವಿ ರತನ್ ಟಾಟಾ ಭೇಟಿ ನೀಡಿದ್ದಲ್ಲದೇ ಅಲ್ಲಿನ ನೂತನ ಸ್ವಾಗತ ಗೋಪುರವನ್ನು ಉದ್ಘಾಟಿಸಿದ್ದರು. ಅಲ್ಲದೇ ಮಠಲ್ಲಿದ್ದ ನರಸಿಂಹ ಹಾಗೂ ಗಣಪತಿ ದೇವರ ದರ್ಶನವನ್ನು ಪಡೆದಿದ್ದರು.

ದೇಶದ ಅಗ್ರಗಣ್ಯ ಉದ್ಯಮಿ ಎಂಬ ಯಾವ ಗತ್ತು ಇಲ್ಲದೇ, ಸರಳ ಉಡುಪಿನಲ್ಲಿ ಸಾಮಾನ್ಯ ಕಾರಿನಲ್ಲೇ ಆಗಮಿಸಿ ಗ್ರಾಮೀಣ ಪರಿಸರದಲ್ಲಿ ಜನರೊಂದಿಗೆ ಸರಳವಾಗಿ ಬೆರೆತಿದ್ದರು. ಶ್ರೀಮಂತ ಉದ್ಯಮಿಯ ಯಾವುದೇ ಗತ್ತುಗೈರತ್ತಿಲ್ಲದೆ ಶ್ರೀಸಾಮಾನ್ಯನಂತೆ ಕೆಲ ಗಂಟೆಗಳನ್ನು ಪುತ್ತಿಗೆಯಲ್ಲಿ ಕಳೆದಿದ್ದರು.

ಪುತ್ತಿಗೆಶ್ರೀ ಸಂತಾಪ: ವ್ಯಕ್ತಿಯಲ್ಲಿ ಆದರ್ಶಗಳು ನೆಲೆಸಿದರೆ ರತನ್ ಟಾಟಾರಂಥ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ರತನ್ ಟಾಟಾ ಅವರ ನಿಧನಕ್ಕೆ ನೀಡಿದ ಸಂತಾಪ ಸಂದೇಶದಲ್ಲಿ ಪರ್ಯಾಯ ಪುತ್ತಿಗೆಶ್ರೀಗಳು ತಿಳಿಸಿದ್ದಾರೆ. ಆದರ್ಶ ಮಯ ಜೀವನ ನಡೆಸಿದ ಅವರು ನಮ್ಮ ಪುತ್ತಿಗೆ ಮೂಲ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಭಗವದ್ಗೀತೆಯ ಬಗ್ಗೆ ತಮಗಿರುವ ಆದರ ಪ್ರಕಟಿಸಿದ್ದು ನಮ್ಮ ಮನಸ್ಸಿನಲ್ಲಿ ಹಸಿರಾಗಿದೆ.ಶ್ರೀಕೃಷ್ಣ ಮುಖ್ಯಪ್ರಾಣರು ಅವರಿಗೆ ಸದ್ಗತಿ ನೀಡಲಿ ಎಂದು ಶ್ರೀ ಸುಗುಣೇಂದ್ರ ತೀರ್ಥರು ತಿಳಿಸಿದ್ದಾರೆ.





Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News