ಭೂಸರ್ವೆಯಿಂದ ಮಾತ್ರ ಜನರಿಗೆ ನ್ಯಾಯ ಸಿಗಲು ಸಾಧ್ಯ: ಸಂಸದ ಕೋಟ

Update: 2024-10-10 14:09 GMT

ಕುಂದಾಪುರ, ಅ.10: ಕಸ್ತೂರಿರಂಗನ್ ವರದಿ ಜಾರಿಯಿಂದ ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟದ 35 ಗ್ರಾಮಗಳಿಗೆ ಸಮಸ್ಯೆ ಯಾಗಲಿದೆ. ಈ ಬಗ್ಗೆ ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ತಕ್ಷಣವೇ ಜಿಲ್ಲಾ ಮಟ್ಟದಲ್ಲಿ ಸಭೆ, ಚರ್ಚೆ ನಡೆಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗುತ್ತದೆ. ರಾಜ್ಯ ಹಾಗೂ ಕೇಂದ್ರ ಸರಕಾರದ ಸಂಬಂಧಪಟ್ಟ ಮಂತ್ರಿಗಳನ್ನು ಭೇಟಿ ಮಾಡಲಿದ್ದೇವೆ. ಅಲ್ಲಿಯವರೆಗೆ ರೈತರಿಗೆ ತೊಂದರೆಯಾಗುವ ರೀತಿಯಲ್ಲಿ ಅಧಿಕಾರಿಗಳು ವರ್ತಿಸಿದರೆ ಪ್ರತಿಭಟನೆ ಮಾರ್ಗ ಅನಿವಾರ್ಯ ಎಂದು ಉಡುಪಿ -ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ವಿರೋಧಿಸಿ ಹೆಬ್ರಿ ತಾಲೂಕಿನ ಮಡಾಮಕ್ಕಿ-ಶೇಡಿಮನೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ವತಿಯಿಂದ ಗುರುವಾರ ಅರಸಮ್ಮನಕಾನು ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಕಸ್ತೂರಿ ರಂಗನ್ ವರದಿಯಲ್ಲಿ ಕರ್ನಾಟಕ ರಾಜ್ಯದ 18 ಸಾವಿರ ಚದರ ಕಿ.ಮೀ. ಸೂಕ್ಷ್ಮ ಪ್ರದೇಶವೆಂದು ಘೋಷಿಸಿದ್ದು ಇದನ್ನು ವಿರೋಧಿಸುವುದಾಗಿ ಕಳೆದ 10 ವರ್ಷಗಳ ಹಿಂದೆ ಪ್ರತಿಭಟನೆ ನಡೆಸಲಾಗಿತ್ತು. ಕೇಂದ್ರ ಸರಕಾರ ಈ ಬಗ್ಗೆ 6 ಬಾರಿ ನೋಟಿಫಿಕೇಶನ್ ನೀಡಿದ್ದು 3ನೇ ನೋಟಿಸ್ ತರುವಾಯ ಎಚ್ಚೆತ್ತು ಕೊಂಡ ಕೇರಳ ಸರಕಾರ ಕಾಡು-ನಾಡು ಯಾವುದೆಂಬ ಬಗ್ಗೆ ಭೂಸರ್ವೇ ನಡೆಸಿ ವರದಿಯಿಂದ ಒಂದಷ್ಟು ಸಡಿಕೆ ಮಾಡಿದೆ. ನಮ್ಮ ರಾಜ್ಯದಲ್ಲಿ ಅಂತಹ ಸರ್ವೇ ನಡೆದಿಲ್ಲ. ಸಂಬಂದಪಟ್ಟ ಇಲಾಖೆಗಳ ಜಂಟಿ ಸರ್ವೇ ನಡೆದಾಗ ಮಾತ್ರವೇ ಜನರಿಗೆ, ರೈತರಿಗೆ ನ್ಯಾಯ ಸಿಗಲು ಸಾಧ್ಯ ಎಂದರು.

ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಮುಖಂಡರ ಸಭೆ ಕರೆದು ಕಸ್ತೂರಿರಂಗನ್ ವರದಿ ಪೀಡಿತ ಪ್ರದೇಶದ ಜನರ ಅಹವಾಲುಗಳ ಬಗ್ಗೆ ರಾಜ್ಯ, ಕೇಂದ್ರ ಸರಕಾರದ ಗಮನಕ್ಕೆ ತಂದು ಇದಕ್ಕೊಂದು ತಾರ್ಕಿಕ ಅಂತ್ಯ ನೀಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ರಾಜಕಾರಣಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ವರದಿ ಜಾರಿಗೊಂಡು ಜನರಿಗೆ ತೊಂದರೆಯಾಗುವಂತಾಗಿದೆ. ಕೇರಳ ರಾಜ್ಯದಲ್ಲಿ ಜನರು ಪ್ರಜ್ಞಾವಂತರಾಗಿ ಪಕ್ಷಬೇಧ ಮರೆತು ಹೋರಾಡಿ ಅಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆದ ಕಾರಣ ಬಹಳಷ್ಟು ಸಡಿಲಿಕೆ ಪಡೆಯಲು ಸಾಧ್ಯವಾಗಿದ್ದು ನಮ್ಮ ರಾಜ್ಯ ದಲ್ಲಿ ಕೂಡ ಸಮಸ್ಯೆ ಇತುವ ಕಡೆ ಸಂಘಟಿತ ಹೋರಾಟ ಅಗತ್ಯ ಎಂದರು.

ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಅರಸಮ್ಮನಕಾನು ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಚಂದ್ರಶೇಖರ ಶೆಟ್ಟಿ, ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರ ತಾಲೂಕು ಪಂಚಾಯತ್‌ರಾಜ್ ಒಕ್ಕೂಟಗಳ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು ಕಸ್ತೂರಿರಂಗನ್ ವರದಿ ಕುರಿತು ಮಾಹಿತಿ ನೀಡಿದರು. ಗಣೇಶ್ ಅರಸಮ್ಮನಕಾನು ನಿರೂಪಿಸಿದರು.

‘ಜಿಲ್ಲೆಯ ಇಬ್ಬರು ಸಂಸದರು, ಐವರು ಶಾಸಕರು, ಹಾಲಿ ಶಾಸಕರುಗಳು, ಹೋರಾಟ ಮಾಡಿದ ಸಂಘಟನೆಗಳ ಒಗ್ಗೂಡುವಿಕೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಬೇಕಾಗಿದೆ. ಅಧಿಕಾರಿಗಳು ಮುತು ವರ್ಜಿ ಯಿಂದ ಕೆಲಸ ಮಾಡಿಲ್ಲ. ಕಳೆದ 10 ವರ್ಷಗಳಲ್ಲಿ ಹಲವು ಸರಕಾರಗಳು ಬಂದರೂ ಚುರುಕು ಮುಟ್ಟಿಸದ ಕಾರಣ ಸಮಸ್ಯೆ ಬಗೆಹರಿದಿಲ್ಲ. ಮತಕ್ಕಾಗಿ ಜನಪ್ರತಿನಿಧಿಗಳು ನಿರ್ಧಾರ ಮಾಡಿದರೆ, ಅಧಿಕಾರಿಗಳು ತಮ್ಮ ಕುರ್ಚಿ ಉಳಿಸಿ ಕೊಳ್ಳಲು ತೀರ್ಮಾನಿಸುವ ಪರಿಸ್ಥಿತಿಯಿದೆ. ಜನಸಾಮಾನ್ಯರ ನೋವಿಗೆ ಸ್ಪಂದನೆ ನೀಡುತ್ತಿಲ್ಲ. ಸರಕಾರ ಕೂಡ ವೈಜ್ಞಾನಿಕ ವರದಿ ಸಿದ್ದಪಡಿಸಿ ಸ್ಪಷ್ಟ ಅಭಿಪ್ರಾಯವನ್ನು ಕೇಂದ್ರ ಸರಕಾರಕ್ಕೆ ನೀಡಬೇಕು.

-ಕೆ.ಪ್ರತಾಪಚಂದ್ರ ಶೆಟ್ಟಿ, ವಿಧಾನಪರಿಷತ್ ಮಾಜಿ ಸಭಾಪತಿ

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News