23 ಕಲಾವಿದವರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ

Update: 2024-11-17 15:28 GMT

ಉಡುಪಿ, ನ.17: ಸಮಾಜ ಪರಿವರ್ತನೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಯಕ್ಷಗಾನವು ಕೇವಲ ಕಲೆಯಾಗಿ ಉಳಿದಿಲ್ಲ. ಅದು ಆಚಾರ ವಿಚಾರದೊಂದಿಗೆ ಉತ್ತಮ ಬದುಕು ನಡೆಸುವುದನ್ನು ಕಲಿಸಿಕೊಡುತ್ತದೆ ಎಂದು ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ರವಿವಾರ ನಡೆದ ಸಮಾರಂಭದಲ್ಲಿ 23 ಕಲಾವಿದರಿಗೆ ಯಕ್ಷಗಾನ ಕಲಾರಂಗದ 2024ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡುತಿದ್ದರು.

ಶ್ರೀಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಆರ್.ಎಲ್.ಭಟ್- ವಾರಿಜಾಕ್ಷಿ ಆರ್.ಭಟ್ ಗೌರವಾರ್ಥ ಅವರ ಸುಪುತ್ರ ಹರಿಪ್ರಸಾದ್ ಭಟ್ ಪ್ರಾಯೋಜಿಸಿದ ಬಣ್ಣದ ಕೋಣೆಯನ್ನು ಉದ್ಘಾಟಿಸಿದರು. ಸಿಸಿಟಿವಿಯ ಉದ್ಘಾಟನೆಯನ್ನು ದಾನಿ ಎಂ.ಸಿ.ಕಲ್ಕೂರ ನೆರವೇರಿಸಿದರು.

ಹರೀಶ್ ರಾಯಸ್ ತಮ್ಮ ತೀರ್ಥ ರೂಪರ ಹೆಸರಿನಲ್ಲಿ ಸ್ಥಾಪಿಸಿದ ಯಕ್ಷಗಾನ ಕಲಾರಂಗ ಪ್ರಶಸ್ತಿಯ ನಿಧಿಯನ್ನು ಹಸ್ತಾಂತರಿಸಿದರು. ಅಧ್ಯಕ್ಷತೆಯನ್ನು ಶಾಸಕ ಯಶ್‌ಪಾಲ್ ಸುವರ್ಣ ವಹಿಸಿದ್ದರು. ದಾನಿ ಕೆ.ಸದಾಶಿವ ಭಟ್ ಮುಖ್ಯ ಅತಿಥಿಯಾಗಿದ್ದರು.

ಕಲಾವಿದರಾದ ಎಚ್.ನಾರಾಯಣ ಶೆಟ್ಟಿ ಕೊಳ್ಕೆಬೈಲ್, ದೇವದಾಸ ರಾವ್ ಕೂಡ್ಲಿ, ಸುರೇಶ ಕುಪ್ಪೆಪದವು, ಪುರಂದರ ಹೆಗಡೆ ನಾಗರಕೊಡಿಗೆ, ಗುಂಡಿಬೈಲ್ ನಾರಾಯಣ ಭಟ್, ಸರಪಾಡಿ ಅಶೋಕ ಶೆಟ್ಟಿ, ಕಿಗ್ಗ ಹಿರಿಯಣ್ಣ ಆಚಾರ್ಯ, ಥಂಡಿಮನೆ ಶ್ರೀಪಾದ ಭಟ್, ಮೊಗೆಬೆಟ್ಟು ಹೆರಿಯ ನಾಯ್ಕ್, ತೊಡಿಕ್ಕಾನ ಕೆ. ಬಾಬು ಗೌಡ, ಹಾಲಾಡಿ ಕೃಷ್ಣ ಮರಕಾಲ, ಚಕ್ರಮೈದಾನ ಕೃಷ್ಣ ಪೂಜರಿ, ಹಾವಂಜೆ ಮಂಜುನಾಥ ರಾವ್, ಹೆರಂಜಾಲು ಗೋಪಾಲ್ ಗಾಣಿಗ, ಚೇರ್ಕಾಡಿ ರಾಧಾಕೃಷ್ಣ ನಾಕ್, ಶೇಣಿ ಸುಬ್ರಹ್ಮಣ್ಯ ಭಟ್, ಸರಪಾಡಿ ಶಂಕರ ನಾರಾಯಣ, ಹೊಡಬಟ್ಟೆ ವೆಂಕಟ ರಾವ್, ಕಟೀಲು ರಮಾನಂದ ರಾವ್, ನರಸಿಂಹ ಮಡಿವಾಳ, ಎಲ್ಲೂರು ಕೆ.ಶ್ರೀನಿವಾಸ ಉಪಾಧ್ಯಾಯ, ಅಂಬಾ ಪ್ರಸಾದ ಪಾತಾಳ, ಗಜಾನನ ಸತ್ಯನಾರಾಯಣ ಭಂಡಾರಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತೆಕ್ಕಟ್ಟೆ ಕೊಮೆ ಯಶಸ್ವಿ ಕಲಾವೃಂದ ಸಂಸ್ಥೆಗೆ ದೊರೆತ ಶ್ರೀವಿಶ್ವೇಶತೀರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಸ್ವೀಕರಿಸಿದರು. ಯಕ್ಷಗಾನ ಕಲಾರಂಗದ ನಿಕಟಪೂರ್ವ ಅಧ್ಯಕ್ಷ ಕೆ.ಗಣೇಶ್ ರಾವ್ ಅವರಿಗೆ ಯಕ್ಷ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಯಕ್ಷ ವಿದ್ಯಾಪೋಷಕ್ 75 ವಿದ್ಯಾರ್ಥಿಗಳಿಗೆ 6,42,000 ರೂ. ಸಹಾಯಧನವನ್ನು ವಿತರಿಸಿದರು. ವಾಸುದೇವ ಸಾಮಗರ 30 ಪ್ರಸಂಗಗಳ ಯಕ್ಷ ರಸಾಯನ ಪುಸ್ತಕ ಬಿಡುಗಡೆಗೊಳಿಸಲಾಯಿತು. ಕಲಾವಿದರ ಕುಟುಂಬಿಕರಿಗೆ ಸಾಂತ್ವನ ನಿಧಿ ವಿತರಿಸಲಾಯಿತು. ವಾಸುದೇವ ಸಾಮಗರ 30 ಪ್ರಸಂಗಗಳ ಯಕ್ಷ ರಸಾಯನ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಕಲಾರಂಗ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಹೆಗ್ಗಡೆ ಪ್ರಶಸ್ತಿ ಪುರಸ್ಕೃತರ ಪಟ್ಟಿ ವಾಚಿಸಿದರು. ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಎಚ್.ಎನ್.ಶ್ರಂಗೇಶ್ವರ ವಂದಿಸಿದರು. ಸಭೆಯ ಪೂರ್ವದಲ್ಲಿ ತೆಂಕುತಿಟ್ಟು ಹಿಮ್ಮೇಳದ ನವರಸಾಯನ- ಯಕ್ಷಗಾಯನ ಪ್ರಸ್ತುತಿಗೊಂಡಿತು. ಬಳಿಕ ಸುಜಯೀಂದ್ರ ಹಂದೆಯವರ ಸಂಯೋಜನೆಯಲ್ಲಿ ಬಡಗುತಿಟ್ಟು ಯಕ್ಷಗಾನ ಬಭ್ರುವಾಹನ ಕಾಳಗ ಜರಗಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News